ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಕಾರಿಯಾಗಿವೆ ಎಂದು ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿಯಲ್ಲಿರುವ ವಿವಿಧ ಅಂಗಸಂಸ್ಥೆಗಳ ಅಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ʼಮಾನಸಿಕ ಮತ್ತು ದೈಹಿಕ ದೃಢತೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಒಂದಕ್ಕೊಂದು ಬಿಟ್ಟಿಲ್ಲ. ಹಾಗಾಗಿ ಈ ಎರಡು ಪ್ರಬುದ್ಧತೆ ಸಾಧಿಸಲು ಕ್ರೀಡಾ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ವಿದ್ಯಾರ್ಥಿಗಳು ಹೆಚ್ಚೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿ ಕೊಳ್ಳಬೇಕುʼ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಮಾತನಾಡಿ, ʼವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಬೇಕುʼ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼವಿದ್ಯಾರ್ಥಿಗಳು ತಮ್ಮ ಶರೀರ, ಮನಸ್ಸು, ಆರೋಗ್ಯ ಶುದ್ಧವಾಗಿರಿಸಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸವಿನೆನಪಿಗಾಗಿ ಕ್ರೀಡಾಕೂಟ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ತೋರಲಿʼ ಎಂದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಚಾಕು ಬಳಸಿದಂತೆ ಚೂಪಾಗುತ್ತದೆ. ಅದರಂತೆ ವಿದ್ಯಾರ್ಥಿಗಳು ಹೆಚ್ಚೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು, ಶರೀರ ಉತ್ಸಾಹದಿಂದ ಕೂಡಿರುತ್ತದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಬೆಳೆಸಿ ಕೊಳ್ಳಬೇಕುʼ ಎಂದು ತಿಳಿಸಿದರು.
ಉದ್ಯಮಿ ಸೋಮನಾಥಪ್ಪ ಅಷ್ಟೂರೆ ಧ್ವಜಾರೋಹಣ ನೆರವೇರಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರೋಹಿದಾಸ ರಾಠೋಡ ಬಸವ ಗುರುವಿನ ಪೂಜೆ ನೆರವೇರಿಸಿದರು. ಚನ್ನಬಸವೇಶ್ವರ ಗುರುಕುಲದ ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ : ಬೀದರ್ | ʼಈದಿನʼದ ಪ್ರಮುಖ 5 ಸಣ್ಣ ಸುದ್ದಿಗಳು
ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಡಾ.ಚನ್ನಬಸವ ಪಟ್ಟದ್ದೇವರ ಬ್ಯಾಂಕ್‌ನ ಉಪಾಧ್ಯಕ್ಷ ಶರಣಪ್ಪ ಬಿರಾದಾರ್, ಯುವ ಮುಖಂಡ ಶಿವು ಲೋಖಂಡೆ, ಪ್ರಮುಖರಾದ ಶಿವರಾಜ ಮಲ್ಲೇಶಿ, ಶಿವಕುಮಾರ ಕಲ್ಯಾಣೆ, ವಿಲಾಸ ಬಕ್ಕಾ, ಶಿವಪುತ್ರ ಕಲ್ಯಾಣೆ, ನಾಮದೇವರಾವ ಪವಾರ, ಅಶೋಕ ರಾಜೋಳೆ, ಸಂತೋಷ ಬಿ.ಜಿ.ಪಾಟೀಲ್, ಸಂಗಮೇಶ ವಾಲೆ, ನಿರ್ಣಾಯಕರಾದ ಹಣಮಂತ ಕಾರಾಮುಂಗೆ, ಚನ್ನವೀರಪ್ಪ ಚಕ್ರಸಾಲಿ, ವಿಜಯಕುಮಾರ ಚವ್ಹಾಣ, ಮಾಣಿಕರಾವ ಬಿರಾದಾರ್, ಸಂಜು ಟಿ.ಮೇಲೆ, ಪ್ರತಾಪ ಕೋಣೆ, ಉಮಾಕಾಂತ ಕೊಣಜಿವಾಲೆ, ವಿನೋದ ಆಳ್ವಾ, ದೇವಿದಾಸ ಮೇತೆ, ರಂಗರಾವ ಜಾಧವ, ಸಂತೋಷ ಬಿರಾದಾರ್, ರಾಜಕುಮಾರ ಕೂಡಿಕರ, ಮಾರುತಿ ಗೊರನಾಳಕರ್, ನರಸಿಂಗ ಇಂಗಳೆ ಇದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಿಸಿದರು. ದೈಹಿಕ ನಿರ್ದೇಶಕ ಅನೀಲಕುಮಾರ ಪಾಟೀಲ್ ವಂದಿಸಿದರು.





