ಮಕ್ಕಳು ಮೊಬೈಲ್ ಗೀಳಿನಿಂದ ದೂರವುಳಿದು, ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ಅಭ್ಯಾಸದ ಕಡೆಗೆ ಗಮನ ಹರಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಬೀದರ ಮಹಾನಗರ ಪಾಲಿಕೆ ಪೌರಾಯುಕ್ತ ಮುಕುಲ ಜೈನ್ ತಿಳಿಸಿದರು.
ಬೀದರ್ ನಗರದ ಪನ್ನಾಲಾಲ್ ಹೀರಾಲಾಲ್ ಪ್ರಾಥಮಿಕ ಶಾಲೆಯ 25ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ ಬೆಳ್ಳಿ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ʼಮಕ್ಕಳು ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿದಾಗ ಗುರಿ ತಲುಪಲು ಸಾಧ್ಯʼ ಎಂದರು.
ʼಮನೆಯಲ್ಲಿ ಪಾಲಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ಅವರಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಜೊತೆಗೆ ಶಿಕ್ಷಣ ನೀಡಬೇಕು. ಮೊಬೈಲ್ ಹಿಡಿಯದಂತೆ ಕಠಿಣ ನಿಯಮ ಜಾರಿಗೆ ತರುವಂತೆ ಶಾಲಾ ಸಿಬ್ಬಂದಿ ಪ್ರಯತ್ನಿಸಬೇಕು. ರಾಷ್ಟ್ರಭಾಷಾ ಸಂವರ್ಧನಾ ಸಮಿತಿಯು ಕನ್ನಡ ಶಾಲೆ ಆರಂಭಿಸಿ ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪನ್ನಾಲಾಲ್ ಹೀರಾಲಾಲ್ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಕೈಲಾಸ ನಾರಾಯಣ ಭಾಂಗಡಿಯಾ ಮಾತನಾಡಿ, ʼಮಾತೃಭಾಷೆ ಕನ್ನಡದಲ್ಲಿ ಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದುʼ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ʼಆಡಳಿತ ಮಂಡಳಿಯ ಬಹುತೇಕ ಸದಸ್ಯರ ಮಾತೃಭಾಷೆ ಹಿಂದಿಯಾಗಿದ್ದರೂ ಸಹಿತ ಕನ್ನಡ ಮಾಧ್ಯಮದಲ್ಲಿ ಶಾಲೆ ಆರಂಭಿಸಿ ಉತ್ತಮ ಶಿಕ್ಷಣ ಮತ್ತು ಮಕ್ಕಳಿಗೆ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಈ ಶಾಲೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಕ್ರಿಯಾಶೀಲರು, ಸೃಜನಶೀಲರಾಗಿ ಬೆಳೆಯುತ್ತಾರೆ. ಆಡಳಿತ ಮಂಡಳಿಯ ಕನ್ನಡ ಪ್ರೇಮ ಮೆಚ್ಚುವಂತಹದುʼ ಎಂದರು.

ಇದನ್ನೂ ಓದಿ : ʼಈದಿನʼ ಸಂದರ್ಶನ | ಬಹುಭಾಷಿಕ ನೆಲೆಯಲ್ಲಿ ಕನ್ನಡಕ್ಕಿರಲಿ ಮನ್ನಣೆ : ಡಾ.ಮನ್ಮಥ ಡೋಳೆ
ಸಿಆರ್‌ಪಿ ತ್ರಿಂಬಕ್ ದೇವರ್ಸೆ, ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಕಮಲನಾರಾಯಣ ಭಾಂಗಡಿಯಾ, ನಂದಕಿಶೋರ ವರ್ಮಾ, ರಾಷ್ಟ್ರಭಾಷಾ ಸಂವರ್ಧನಾ ಸಮಿತಿಯ ಅಧ್ಯಕ್ಷ ರಾಜಕುಮಾರ ಅಗರವಾಲ್, ಪ್ರಧಾನ ಕಾರ್ಯದರ್ಶಿ ಬ್ರಿಜ್ ಕಿಶೋರ್ ಮಾಲಾನಿ, ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರಸಿಂಗ್ ಪವಾರ್, ಸಹ ಕಾರ್ಯದರ್ಶಿ ಸತ್ಯನಾರಾಯಣ ಬದವಾ, ಖಜಾಂಚಿ ಓಂಪ್ರಕಾಶ ಬಜಾಜ್, ಘನಶ್ಯಾಮಜಿ ಗೋಯೆಲ್, ಪ್ರಾಚಾರ್ಯ ಸುಮತಿ ಪಡಶೆಟ್ಟಿ, ಅಂಬಾದಾಸ ಮೋರೆ, ಪ್ರೌಢ ಶಾಲಾ ಮುಖ್ಯಗುರು ಸುಧಾರಾಣಿ ಬಿರಾದಾರ, ಪ್ರಾಥಮಿಕ ಶಾಲೆಯ ಮುಖ್ಯಗುರು ಸಂಜೀವಕುಮಾರ ಬೇಲೂರ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.





