ಬೀದರ ತಾಲೂಕಿನ ಜನವಾಡ ಸಮೀಪದ ಔರಾದ್ ರಸ್ತೆಯಲ್ಲಿ ಕಾಳಸಂತೆಯಲ್ಲಿ ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ 105 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಸಂಜೆ ಜನವಾಡ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ (ಖಾಲಿ 82, ತುಂಬಿದ 23) ಒಟ್ಟು 105 ಸಿಲಿಂಡರ್ ಪತ್ತೆಯಾಗಿದೆ.
ಬೀದರ್ ಗ್ರಾಮೀಣ ವೃತ್ತ ಸಿಪಿಐ ಜಿ.ಎಸ್. ಬಿರಾದರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ₹2.55 ಲಕ್ಷ ಮೌಲ್ಯದ ಸಿಲಿಂಡರ್‌ಗಳ ಜೊತೆಗೆ ₹16 ಲಕ್ಷ ಮೌಲ್ಯದ ಎರಡು ವಾಹನಗಳನ್ನು ಸೇರಿ ಒಟ್ಟು ₹18.55 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜನವಾಡ ಠಾಣೆಯ ಪ್ರಭಾರ ಎಎಸ್ಐ ವಿಶ್ವನಾಥ, ಸಿಬ್ಬಂದಿಗಳಾದ ವಿಜಯಕುಮಾರ್, ಶಿವಕುಮಾರ್, ಶಾಂತಕುಮಾರ್, ಆಹಾರ ನಿರೀಕ್ಷಕ ಶ್ರೀನಿವಾಸ ಹಾಗೂ ಬೀದರ್ ಡಿಎಸ್ಬಿ ಘಟಕದ ಗುಂಡಪ್ಪ, ಸಂತೋಷ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಸಂಬಂಧ ಜನವಾಡ ಠಾಣೆಯಲ್ಲಿ ನಾಲ್ವರು ಆರೋಪಿಗಳ ಜೊತೆಗೆ ನಾಲ್ಕು ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅಶಾಂತಿ ಹಾಗೂ ಯುದ್ಧ ಪರಿಸ್ಥಿತಿಯಿಂದ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆ ಕೆಲವರು ಗೃಹ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಚಂದ್ರಕಾಂತ ಪೂಜಾರ್, ಡಿಎಸ್ಪಿ ದೂದ್ ಪೀರ್ ಹುಸೇನಸಾಬ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.





