ರಾಜ್ಯದ ಗಡಿ ತಾಲೂಕು ಔರಾದ್‌ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಅದ್ದೂರಿಯಾಗಿ ಚಾಲನೆ ದೊರೆಯಿತು. ʼಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುʼ, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಎಂಬ ಜಯಘೋಷದ ಅನುರಣನ. ಬಾನೆತ್ತರದ ಹಾರಾಡಿದ ಬಾವುಟ. ಎಲ್ಲೆಲ್ಲೂ ಕನ್ನಡ ಧ್ವಜಗಳ ಹಾರಾಟ, ವಿದ್ಯಾರ್ಥಿಗಳ ಉತ್ಸಾಹದ ಭರ್ಜರಿ ನೃತ್ಯ, ಕನ್ನಡಾಭಿಮಾನಿಗಳ ಉಲ್ಲಾಸ…..
ಔರಾದ್ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಮನ್ಮತ ಡೋಳೆ ಹಾಗೂ ಕನ್ನಡ ತಾಯಿ ಭುವನೇಶ್ವರಿ ಮೂರ್ತಿಯ ಮೆರವಣಿಗೆಯ ವೇಳೆ ಒಡಮೂಡಿದ ಕನ್ನಡತನದ ಬೆಳಗು. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಒಳಗೊಂಡಿರುವ ಈ ಮೆರವಣಿಗೆಯುದ್ದಕ್ಕೂ ಕನ್ನಡ ಕಂಪು ಸೂಸಿತು.
ಪಟ್ಟಣದ ಅಮರೇಶ್ವರ ದೇವಸ್ಥಾನ ಎದುರು ಬೆಳಗ್ಗೆ 8ಗಂಟೆ ಸುಮಾರಿಗೆ ಸಮ್ಮೇಳನದ ಭವ್ಯ ಮೆರವಣಿಗೆಗೆ ಚಾಲನೆ ದೊರೆಯಿತು. ಈ ವೇಳೆ ಕನ್ನಡ ತಾಯಿ ಭುವನೇಶ್ವರಿಗೆ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಮನ್ಮತ ಡೋಳೆ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ತಾಲೂಕಾಧ್ಯಕ್ಷ ಬಿ.ಎಂ.ಅಮರವಾಡಿ ಸೇರಿದಂತೆ ಅಧಿಕಾರಿಗಳ ನೇತ್ರತ್ವದಲ್ಲಿ ಧ್ವಜಾರೋಹಣ, ಭುವನೇಶ್ವರಿ ದೇವಿ ಪೂಜೆ ನೆರವೇರಿಸಿದರು.

ಅಲಂಕೃತ ಸಾರೋಟ, ಕುದುರೆ, ಒಂಟೆಗಳ ಮೇಲೆ ಸರ್ವಾಧ್ಯಕ್ಷರ ಮೆರವಣಿಗೆ ಎಳೆಯುತ್ತಿದ್ದಂತೆಯೇ ಕನ್ನಡಿಗರ ಮನದಲ್ಲಿ ಆನಂದದ ಪುಳಕ. ಕನ್ನಡಾಂಬೆಗೆ ಜಯವಾಗಲಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಜಯಘೋಷಗಳು ಮೊಳಗಿದವು.
ನಂತರ ಮೆರವಣಿಗೆಯು ನಂತರ ಮೆರವಣಿಗೆಯು ಪಟ್ಟಣದ ಬಸವೇಶ್ವರ ವೃತ್ತ, ಕನಕದಾಸ ವೃತ್ತ, ಛತ್ರಪತಿ ಶಿವಾಜಿ ವೃತ್ತ, ಕನ್ನಡಾಂಬೆ ವೃತ್ತ, ಡಾ.ಚನ್ನಬಸವ ಪಟ್ಟದ್ದೇವರು ವೃತ್ತದ ಮಾರ್ಗವಾಗಿ ಪ್ರಧಾನ ವೇದಿಕೆಗೆ ತಲುಪಿತು. ಸುಮಾರು 1 ಕಿ.ಮೀಟರ್‌ಗೂ ಅಧಿಕ ಅಂತರ ಸಾಗಿದ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆಯಿತು.
ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೆಚ್ಚು ಆಕರ್ಷಣೀಯಗೊಳಿಸಲು ನಾನಾ ಕಡೆಯಿಂದ ಆಗಮಿಸಿದ್ದ ಸಾವಿರಾರು ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿದ್ದರು. ಅದರಲ್ಲೂ ವಿವಿಧ ಶಾಲಾ-ಕಾಲೇಜಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಮೆರವಣಿಗೆಯಲ್ಲಿ ಡಿಜೆ ಹಾಡು, ತಮಟೆ ಸದ್ದಿಗೆ ಕನ್ನಡಾಭಿಮಾನಿಗಳ ಹರ್ಷೋಲ್ಲಾಸ ಮುಗಿಲು ಮುಟ್ಟಿತು, ಕುಣಿದು ಕುಪ್ಪಳಿಸಿದರು.

ಸುಮಾರು ಒಂದು ಕಿ.ಮೀ. ಉದ್ದದ ಮೆರವಣಿಗೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಕನಕದಾಸ, ಸಂಗೊಳ್ಳಿ ರಾಯಣ್ಣ, ಡಾ.ರಾಜಕುಮಾರ, ಪುನಿತ್ ರಾಜಕುಮಾರ, ಸಾಲುಮರದ ತಿಮ್ಮಕ್ಕ, ಶಂಕರ ನಾಗ, ಸಿದ್ದಗಂಗಾ ಶಿವಕುಮಾರ ಶ್ರೀ ಸೇರಿದಂತೆ ಮಹಾತ್ಮರ ಫೋಟೊ, ಕನ್ನಡ ಧ್ವಜಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಆಟೋಗಳು ಗಮನ ಸೆಳೆದವು. ವಿದ್ಯಾರ್ಥಿಗಳ ಲೇಜಿಮ್, ಡ್ಯಾನ್ಸ್, ಡೊಳ್ಳು ಕುಣಿತ, ಹಲಗೆ ಕುಣಿತ ನೋಡುಗರ ಮನಸೂರೆಗೊಂಡವು.
ಇದನ್ನೂ ಓದಿ : ಬೀದರ್ | ಎಸ್‌ಐಆರ್ ಹೆಸರಿನಲ್ಲಿ ಭಾರತ ಇಸ್ರೇಲೀಕರಣ ಮಾಡುವ ಹುನ್ನಾರ : ಪರಕಾಲ ಪ್ರಭಾಕರ
ಬೆಳಿಗ್ಗೆ 8 ಗಂಟೆ ಸುಮಾರಿಗೆ ಆರಂಭವಾದ ಮೆರವಣಿಗೆಯು 12 ಗಂಟೆಗೆ ಮುಖ್ಯ ವೇದಿಕೆಗೆ ತಲುಪಿತು. ತೆಲಂಗಾಣ-ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಔರಾದ್ ಐರಿಹಾಸಿಕ ಕಲೆ, ಸಾಹಿತ್ಯ, ಸಂಸ್ಕೃತಿಯ ಹಿರಿಮೆ ಹೊಂದಿದೆ. ಬಹುಭಾಷಿಕ ನೆಲದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಗಡಿಯಲ್ಲಿ ಅಕ್ಷರ ಜಾತ್ರೆಯ ತೇರು ಎಳೆಯುವಲ್ಲಿ ಜಿಲ್ಲೆಯ ನಾನಾ ಕಡೆಯಿಂದ ಕನ್ನಡಾಭಿಮಾನಿಗಳು ಸಾಕ್ಷಿಯಾದರು.

ಇದನ್ನೂ ಓದಿ : ಬೀದರ್ | ಅಕ್ಷರ ಜಾತ್ರೆಗೆ ಸಿಂಗಾರಗೊಂಡ ಔರಾದ್





