ಮಾನವನ ಅತ್ಯಮೂಲ್ಯ ಮೌಲ್ಯಗಳಲ್ಲಿ ಪ್ರಮುಖವಾದುದು ಪರಪರಧರ್ಮ ಸಹಿಷ್ಣುತೆ; ಅದೇ ನಿಜವಾದ ಭಾಷಾ ಸೌಹಾರ್ದತೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ತಿಳಿಸಿದರು.
ಬೀದರ್ ನಗರದ ನೌಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಭಾಷಾ ಸೌಹಾರ್ದ ಸಂಸ್ಕೃತಿ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ʼಇನ್ನೊಬ್ಬರ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ-ತೊಡುಗೆ ಹಾಗೂ ಧಾರ್ಮಿಕ ವಿಧಾನಗಳನ್ನು ಗೌರವಿಸುವುದೇ ಸೌಹಾರ್ದತೆ. ಇದು ಭಾರತೀಯ ಸಂವಿಧಾನದ ಆಶಯವೂ ಆಗಿದೆ. “ಇವನಮ್ಮವ” ಎನ್ನುವ ಭಾವನೆ ಹಾಗೂ “ಮನುಷ್ಯ ಕುಲವೊಂದೇ” ಎಂಬ ವಿಶ್ವಮಾನವ ಸಂದೇಶವೇ ಸೌಹಾರ್ದತೆಯ ಸಾರವಾಗಿದೆ. ನಮ್ಮ ಸಂಸ್ಕೃತಿಯನ್ನು ಮನೆ ಒಳಗೆ ಮಾತ್ರ ಸೀಮಿತಗೊಳಿಸದೇ, ಹೊರಗೆ ಬಂದಾಗ ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕುʼ ಎಂದರು.
ʼಆಡಳಿತದಲ್ಲಿ ಶೇ. 92ರಷ್ಟು ಕನ್ನಡ ಬಳಕೆಗೆ ನಿಯಮವಿದ್ದರೂ ಜನಮಟ್ಟದಲ್ಲಿ ಕನ್ನಡದ ಬಳಕೆ ಕುಗ್ಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಕನ್ನಡ ಬಳಸಿದಾಗ ಮಾತ್ರ ಭಾಷೆಯ ಶ್ರೇಯೋಭಿವೃದ್ಧಿ ಸಾಧ್ಯವೆಂದರು. ಮಕ್ಕಳು ಯಾವಾಗಲೂ ಪಾಲಕರು, ಗುರುಗಳು ಮತ್ತು ರಾಷ್ಟ್ರಕ್ಕೆ ಗೌರವ ಸಲ್ಲಿಸಬೇಕುʼ ಎಂದು ಸಲಹೆ ನೀಡಿದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, ʼಭಾಷೆ ಇಲ್ಲದಿದ್ದರೆ ಜಗತ್ತು ಕತ್ತಲಾಗುತ್ತಿತ್ತು. ಭಾಷೆ ಮತ್ತು ಸಂಸ್ಕೃತಿ ಈರುಳ್ಳಿಯ ಪದರಗಳಂತೆ; ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇವೆರಡರ ಮುಂದುವರಿದ ರೂಪವೇ ಸೌಹಾರ್ದತೆʼ ಎಂದು ಅಭಿಪ್ರಾಯಪಟ್ಟರು.
ʼಬೀದರ ಜಿಲ್ಲೆಯ ವೈವಿಧ್ಯಮಯ ಧಾರ್ಮಿಕ-ಸಾಂಸ್ಕೃತಿಕ ತಾಣಗಳಾದ ಅಷ್ಟೂರ ಗುಂಬಜ್, ಬೀದರ ಗುರುದ್ವಾರ, ಪಾಪನಾಶ ದೇವಸ್ಥಾನ ಇತ್ಯಾದಿಗಳು ಸೌಹಾರ್ದತೆಯ ಸಂಕೇತಗಳಾಗಿವೆ. ಗಡಿ ಜಿಲ್ಲೆಯಾದ ಬೀದರ ಸರ್ವಜನಾಂಗದ ಶಾಂತಿಯ ತೋಟವಾಗಿದೆʼ ಎಂದು ಹೇಳಿದರು.

ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ʼಎಲ್ಲಾ ಭಾಷೆಗಳೂ ದೇವರ ಭಾಷೆಗಳೇ. ಕೆಲವು ಸುಶಿಕ್ಷಿತರಿಗೆ ಕನ್ನಡ ತಿಳಿಯದಿರುವುದು ವಿಷಾದನೀಯ. ಪ್ರತಿಯೊಬ್ಬರೂ ಮಾತೃಭಾಷೆಗೆ ಒತ್ತು ನೀಡಿ ಕಲಿಯಬೇಕು. ಕನಿಷ್ಠ 10ನೇ ತರಗತಿವರೆಗೆ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕುʼ ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಸೋಮನಾಥ ಯಾಳವಾರ ಮಾತನಾಡಿ, ʼಸೌಹಾರ್ದತೆ ಅಂತಃಕರಣದ ಜೀವಕೇಂದ್ರವಾಗಿದೆ. ಭಾಷೆ ಮತ್ತು ಸಂಸ್ಕೃತಿ ಮೂಲಕ ಸೌಹಾರ್ದತೆಯ ಸಂದೇಶವನ್ನು ಮೊಟ್ಟಮೊದಲು ಸಾರಿದವರು ಬಸವಾದಿ ಶರಣರು. ಉದಾತ್ತ ಭಾವನೆ, ಪರಿಶುದ್ಧ ಮನಸ್ಸು ಮತ್ತು ನಿರ್ಮಲ ಪ್ರೀತಿಯೇ ಸೌಹಾರ್ದತೆಯ ಮೂಲ ಅಂಶಗಳುʼ ಎಂದರು.
ಕಾಲೇಜಿನ ಪ್ರಾಚಾರ್ಯ ಶಂಕರ ಗಣಗೊಂಡ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಶೋಧನಾ ಮಹಾಪ್ರಬಂಧಗಳ ಸಂಕಲನಗಳನ್ನೊಳಗೊಂಡ ‘ಶಂಖಲ’ ನಿಯತಕಾಲಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಇದನ್ನೂ ಓದಿ : ಬೀದರ್ | ನಶೆ, ಭಿಕ್ಷಾಟನೆ ಮುಕ್ತ ಜಿಲ್ಲೆಗೆ ಸಂಕಲ್ಪ : ಅಬ್ದುಲ್ ಖದೀರ್
ಕಾರ್ಯಕ್ರಮದಲ್ಲಿ ಪ್ರೊ.ಶ್ರೀಕಾಂತ ಪಾಟೀಲ, ನಿಜಲಿಂಗಪ್ಪ ತಗಾರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರೊ.ರಾಜಕುಮಾರ ಅಲ್ಲೂರೆ ಸ್ವಾಗತಿಸಿದರು, ಮಹಾದೇವಿ ಹೆಬ್ಬಾಳೆ ನಿರೂಪಿಸಿದರು, ದೇವೇಂದ್ರ ಬರಗಲೆ ವಂದಿಸಿದರು. ಅಶೋಕ ಕೋರೆ, ಸಂಜೀವಕುಮಾರ ತಾಂದಳೆ, ಲಕ್ಷ್ಮಿಕಾಂತ ಸಿ.ಪಂಚಾಳ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.





