ಬೀದರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವ ಜನರನ್ನು ಸ್ವಾವಲಂಭಿಯಾಗಲು, ಉತ್ತೇಜಿಸುವ ದೃಷ್ಟಿಯಿಂದ ಫೆ.1 ರಿಂದ ಮಾ.17ರವರೆಗೆ 45 ದಿನಗಳ ಶಿಬಿರವನ್ನು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಎಸ್.ಎಸ್.ಎಲ್.ಸಿ. ಪಾಸಾಗಿರುವ 18 ವರ್ಷ ಮೇಲ್ಪಟ್ಟ ಹಾಗೂ 35 ವರ್ಷಗಳ ವಯೋಮಿತಿಯ ಅಭ್ಯರ್ಥಿಗಳಿಗೆ ಜಿಮ್ಫಿ, ಟ್ನೆಸ್ ತರಬೇತಿ ಶಿಬಿರಕ್ಕೆ ಪರಿಶಿಷ್ಟ ಜಾತಿಯ ಯುವಕರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತರಬೇತಿ ಶಿಬಿರದಲ್ಲಿ ಹಾಜರಾಗುವ ಯುವಜನರಿಗೆ ಊಟೋಪಹಾರ, ಪ್ರಮಾಣ ಪತ್ರ ಹಾಗೂ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಭಾಗವಹಿಸುವ ಆಸಕ್ತರು ಆರ್‌ಡಿ ಸಂಖ್ಯೆಯ ಜಾತಿ ಪ್ರಮಾಣ ಪತ್ರ, ಭಾವಚಿತ್ರ ಹಾಗೂ ಆಧಾರ ಕಾರ್ಡ್ ಹಾಗೂ ಜನ್ಮ ದಿನಾಂಕದ ದಾಖಲೆಗಳೊಂದಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಬೀದರ ಕಚೇರಿಯಲ್ಲಿ ಜನವರಿ 27ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಬೀದರ್‌ನ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ ಸಂಪರ್ಕಿಸಲು ತಿಳಿಸಿದ್ದಾರೆ.
ವಸತಿ ಶಾಲೆಗಳ ಪ್ರವೇಶ ದಿನಾಂಕ ವಿಸ್ತರಿಸಲು ಆರ್.ಪಿ.ಐ ಒತ್ತಾಯ
ವಿವಿಧ ವಸತಿಯುತ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣದಂತೆ ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳು ನಿಗದಿತ ಸಮಯಕ್ಕೆ ಸಿಗದ ಕಾರಣ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಒತ್ತಾಯಿಸಿದ್ದಾರೆ.
ಪ್ರವೇಶಾತಿಗೆ ಕೊನೆಯ ದಿನಾಂಕ ಜನವರಿ 25, 2026 ಆಗಿದ್ದು, ಅನೇಕ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣದ ಪ್ರಕಾರ ಹೊಸ ಪ್ರಮಾಣ ಪತ್ರಗಳನ್ನು ಇನ್ನೂ ಪಡೆಯದಿರುವುದರಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಹಳೆ ದಾಖಲೆಗಳ ಆಧಾರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಹಾಗೂ ತಹಸೀಲ್ದಾರರಿಗೆ ತ್ವರಿತವಾಗಿ ಪ್ರಮಾಣಪತ್ರ ನೀಡುವಂತೆ ಸೂಚಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಒಂದು ದಿನದ ಕಾರ್ಯಾಗಾರ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಹಭಾಗೀದಾರ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೀದರ ಇವರ ಸಹಯೋಗದಲ್ಲಿ ಜ.23ರಂದು ಬೆಳಿಗ್ಗೆ 10:30ಗಂಟೆಗೆ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ʼಪ್ರಚಲಿತ ಮಕ್ಕಳ ಸಮಸ್ಯೆಗಳʼ ಕುರಿತು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಎಮ್.ಎಸ್. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸೀಮಪ್ಪಾ ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ಪ್ರಾದೇಶಿಕ ಸಂಯೋಜಕರು, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ, ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳದ ಡಾ.ಕೆ.ರಾಘವೇಂದ್ರ ಭಟ್ ಅವರು ಭಾಗವಹಿಸಲಿದ್ದಾರೆ.
ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಎನ್‍ಎಸ್‍ಎಸ್ ಶಿಬಿರಕ್ಕೆ ಚಾಲನೆ
ಯುವಕರು ತಮ್ಮ ನಿಜ ಸಾಮಥ್ರ್ಯವನ್ನು ಅರಿತುಕೊಳ್ಳಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿ, ʼನಾವು ಆಡುಗಳಲ್ಲ, ಸಿಂಹಗಳು. ಶಕ್ತಿಶಾಲಿಗಳಾಗಿದ್ದೇವೆ. ಏನನ್ನು ಬೇಕಾದರೂ ಸಾಧಿಸುವ ಶಕ್ತಿ ಹೊಂದಿದ್ದೇವೆ. ಹೀಗಾಗಿ ಯುವ ಜನರು ಸಾಧನೆ ಮಾರ್ಗದಲ್ಲಿ ಮುನ್ನಡೆಯಬೇಕು. ರಾಷ್ಟ್ರೀಯ ಸೇವಾ ಯೋಜನೆಯು ಸಾಮಾಜಿಕ ಕಾರ್ಯಕ್ಕೆ ಸ್ಫೂರ್ತಿ ನೀಡುತ್ತದೆ. ಯೋಜನೆ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ, ರಾಷ್ಟ್ರ ಪ್ರೇಮ, ಶಿಸ್ತು ಹಾಗೂ ನಾಯಕತ್ವ ಗುಣ ಬೆಳೆಸುತ್ತವೆʼ ಎಂದು ತಿಳಿಸಿದರು.

ಪ್ರಭಾರ ಪ್ರಾಚಾರ್ಯ ಝಾಕೀರ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಕರಂ ಫೌಂಡೇಷನ್ ಗ್ರೀನ್ ಇಂಡಿಯಾದ ಮನ್‍ಮೀತ್‍ಸಿಂಗ್, ನವ ಕರ್ನಾಟಕ ಸ್ವಾಭಿಮಾನ ವೇದಿಕೆಯ ಅಧ್ಯಕ್ಷ ರಾಜಕುಮಾರ ಕಂದಗೂಳೆ, ಕುಲಸಚಿವ ಶೇಖ ಸಿರಾಜುದ್ದೀನ್, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಅರುಣ ಮೋಕಾಶಿ, ಉಮೇಶ ತೇಗಂಪುರ, ತುಕಾರಾಮ ಚವಾಣ್, ಡಾ. ಸಂಜೀವಕುಮಾರ, ಗೌತಮಕುಮಾರ ಹೊಸಮನಿ, ಶ್ರೀಕಾಂತ, ರಮ್ಯಕೃಷ್ಣ ಇದ್ದರು. ಇ.ಸಿ. ವಿಭಾಗದ ಶೈಲಜಾ ಶಾಮರಾವ್ ಹಾಗೂ ಸಿ.ಪಿ. ವಿಭಾಗದ ಡಾ.ಸುರೇಖಾ ನಿರೂಪಿಸಿದರು. ಸದಾಶಿವಪ್ಪ ವಂದಿಸಿದರು.
ರಾಜ್ಯಪಾಲರನ್ನು ಅವಮಾನಿಸಿರುವ ಶಾಸಕರನ್ನು ಅಮಾನತುಗೊಳಿಸಿ : ಭಗವಂತ ಖೂಬಾ
ವಿಧಾನಮಂಡಲದ ಜಂಟಿ ಅಧಿವೇಶನದ ಮುಂಚೆ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ, ರಾಜ್ಯಪಾಲರು ಅವರ ಭಾಷಣ ಮುಗಿಸಿ ಬರುವಾಗ ಕಾಂಗ್ರೇಸ್ ಪಕ್ಷದ ಶಾಸಕರುಗಳು ಅವರಿಗೆ ಅವಮಾನಿಸಿರುವುದು ಖಂಡನೀಯ, ಸ್ಪೀಕರ್ ಅವರು ಅವರೆಲ್ಲರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತಿನಲ್ಲಿ ಇಡಬೇಕು ಎಂದು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ʼಸಿದ್ದರಾಮಯ್ಯ ಅವರು ಸಂವಿಧಾನದ ಆರ್ಟಿಕಲ್‌ಗಳು ಉಲ್ಲೇಖಿಸಿ, ರಾಜ್ಯಪಾಲರು ತಪ್ಪು ಮಾಡಿದ್ದಾರೆಂದು
ಆರೋಪಿಸುತ್ತಿರುವುದು, ಒಬ್ಬ ಮುಖ್ಯಮಂತ್ರಿಯಾಗಿ ಅವರ ಈ ನಡೆ ಅವರಿಗೆ ಶೋಭೆ ತರದು, ಕಾಂಗ್ರೆಸ್ ಪಕ್ಷ, ಅದರ ಮಿತ್ರ ಪಕ್ಷಗಳು ಮತ್ತು ರಾಜ್ಯದಲ್ಲಿರುವ ಸಿದ್ದರಾಮಯ್ಯನವರ ಸರ್ಕಾರ ಸಾಂವಿಧಾನಿಕ ಹುದ್ದೆ ಮೇಲೆ ಇರುವ ರಾಜ್ಯಪಾಲರುಗಳನ್ನು ದೇಶದೆಲ್ಲೆಡೆ ಸರಿಯಾಗಿ ನಡೆಸಿಕೊಳ್ಳದೆ ಅವಮಾನಿಸುವ ಕೆಲಸ ಮಾಡುತ್ತಿದೆ’ ಎಂದು ಖಂಡಿಸಿದರು.
‘ರಾಜ್ಯಪಾಲರಿಗೂ ಗೊತ್ತಿದೆ, ಯಾವ ಯೋಜನೆ ಎಷ್ಟು ಪರಿಣಾಮಕಾರಿ, ಎಷ್ಟು ಭ್ರಷ್ಟ ಯೋಜನೆ ಎಂಬುದು. ಹೀಗಾಗಿ ರಾಜ್ಯಪಾಲರು, ರಾಜ್ಯದ ಜನರ ಹಿತದೃಷ್ಟಿಯಿಂದ, ಎಷ್ಟು ಭಾಷಣ ಮಾಡಬೇಕೊ ಅಷ್ಟೇ ಮಾಡಿದ್ದಾರೆ. ರಾಜಕಾರಣ ಮಾಡುವ ಉದ್ದೇಶ ಮತ್ತು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಸಿದ್ದರಾಮಯ್ಯನವರ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಬಿ-ಜಿರಾಮ್‌ಜಿ ಯೋಜನೆಗೆ ವಿರೋಧ ಮಾಡುತ್ತಿವೆ, ಒಳ್ಳೆಯ ಯೋಜನೆ ಬಗ್ಗೆ ರಾಜ್ಯಪಾಲರಿಂದ ತಪ್ಪಾಗಿ ಹೇಳಿಸುವ ಯತ್ನ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಸಂವಿಧಾನದ ದುರೂಪಯೋಗ ಪಡಿಸಿಕೊಂಡು, ಮನಸ್ಸಿಗೆ ಬಂದಿದ್ದೆಲ್ಲಾ ಭಾಷಣ ಮಾಡಲು ಕೊಟ್ಟರೆ ರಾಜ್ಯಪಾಲರು ಯಾಕೆ ಭಾಷಣ ಮಾಡುತ್ತಾರೆ’ ಎಂದು ಖೂಬಾ ಪ್ರಶ್ನಿಸಿದರು.





