ಎಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ʼಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ ಅಭಿವೃದ್ಧಿ ನಿಗಮ ಇನ್ನಿತರ ಇಲಾಖೆಗಳಲ್ಲಿ ಎಸಿಎಸ್‌ಪಿ, ಟಿಎಸ್‌ಪಿ ಯೋಜನೆಗಳಲ್ಲಿ ಮೀಸಲಾಗಿಟ್ಟ ಅನುದಾನದಡಿಯಲ್ಲಿ ಕಾಮಗಾರಿ, ಇತರೆ ಸೌಲಭ್ಯಗಳು ನಿಗದಿಪಡಿಸಿದ ಓಣಿಗಳಲ್ಲಿ ಬಳಸಿ ಅದೇ ವರ್ಗದ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕುʼ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಾಗುವ ದೌರ್ಜನ್ಯ ಪ್ರಕರಣಗಳು ದಾಖಲಾಗದಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳದಲ್ಲಿ ಇತ್ಯರ್ಥಪಡಿಸುವಂತೆ ನೋಡಿಕೊಳ್ಳುವಂತೆ ನಿರ್ದೇಶಿಸಿದರು.
ಕಂದಾಯ ಗ್ರಾಮಗಳಲ್ಲಿ ಸ್ಮಶಾನ ಭೂಮಿ, ಕುಡಿಯುವ ನೀರು, ಇನ್ನಿತರ ಸೌಲಭ್ಯಗಳು ಒದಗಿಸಿ ಅವರ ಅಭಿವೃದ್ಧಿಗಾಗಿ ಕ್ರಮವಹಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವಿದ್ಯಾರ್ಥಿಗಳನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದುವಂತೆ ನೋಡಿಕೊಳ್ಳಬೇಕುʼ ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದ ನೂರಾರು ಪದಾಧಿಕಾರಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಮತ್ತು ಬುಡಕಟ್ಟುಗಳ ಆಯೋಗದ ಸದಸ್ಯ ಸುನೀಲ್ ಎಂ, ಎಂ.ಕುಂಬಯ್ಯ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಮಹಾನಗರ ಪಾಲಿಕೆ ಆಯುಕ್ತರ ಮುಕುಲ್ ಜೈನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಮಾಜಿ ಎಂಎಲ್ಸಿ ಅರವಿಂದ ಅರಳಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ ಅನೀಲಕುಮಾರ ಬೆಲ್ದಾರ್, ಮಾರುತಿ ಬೌದ್ಧೆ, ಮಹೇಶ ಗೋರನಾಳಕರ, ರಮೇಶ ಡಾಕುಳಗಿ, ಪಂಡಿತರಾವ ಚಿದ್ರಿ, ಬಸವರಾಜ ಮಾಳಗೆ ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡದ ಸಾರ್ವಜನಿಕರು ಭಾಗವಹಿಸಿದರು.
ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು
ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡದ ಜನರು ಅರಣ್ಯ ಭೂಮಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, 53, 57 ಮತ್ತು ಸಿ ಫಾರಂ ಹೊಂದಿರುವವರು ಅರ್ಜಿ ಸಲ್ಲಿಸಿದ್ದಾರೆ. ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು ಎಂದು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್. ಅವರು ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂಚಿಸಿದರು.
ʼಮುಂದಿನ ತಿಂಗಳು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಸಾಗುವಳಿ ಮಾಡುತ್ತಿರುವ ಜನಾಂಗದವರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲು ಆಯೋಗ ಸೂಚಿಸಲಿದೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಜನರ ಭೂಮಿಗೆ ಸಂಬಂಧಿಸಿದ ಪೋಡಿ ಸೇರಿದಂತೆ ಇತರೆ ಕೆಲಸಗಳನ್ನು ಕಂದಾಯ ಇಲಾಖೆ ತ್ವರಿತಗತಿಯಲ್ಲಿ ಮಾಡಬೇಕು. ಸ್ಮಶಾನ ಭೂಮಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಬೇಡಿಕೆ ಇರುವ ಗ್ರಾಮಗಳಿಗೆ ಭೂಮಿ ಒದಗಿಸುವುದು ಅನಿವಾರ್ಯʼ ಎಂದು ಹೇಳಿದರು.
ʼನಕಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ತಡೆಯಲು ಮುಂದಿನ ದಿನಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನದ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲೆಮಾರಿ ಜನಾಂಗದವರ ಸಮಸ್ಯೆಗಳನ್ನು ಆಲಿಸಲು ಅವರ ಗುಡಿಸಲುಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿ ಪಂಗಡದ ಜನರ ಹಿತರಕ್ಷಣೆ ಕಾಪಾಡುವಲ್ಲಿ ಆಯೋಗವು ಸಿದ್ಧವಿದ್ದು ಈಗಾಗಲೇ 3,900 ಪ್ರಕರಣಗಳು ನಡೆಯುತ್ತಿವೆ. ದಿನನಿತ್ಯ ಸಾವಿರಾರು ಅರ್ಜಿಗಳು ಬರುತ್ತಿವೆ, ಈಗಾಗಲೇ 325 ಪ್ರಕರಣಗಳನ್ನು ಕೋರ್ಟ ನಡೆಸಿ ಇತ್ಯರ್ಥ ಪಡಿಸಲಾಗಿದೆ. ಈಚೆಗೆ ಸುಳ್ಳು ಜಾತಿ ಪ್ರಮಾಣ ಪತ್ರಗಳ ಸಂಖ್ಯೆ ಹೆಚ್ಚುತ್ತಿವೆ. ಬೇಡ ಜಂಗಮ, ಬುಡ್ಗಾ ಜಂಗಮ ಕುರಿತು ಈಗಾಗಲೇ ಪ್ರಕರಣಗಳ ಬಗ್ಗೆ ನ್ಯಾಯಾಲಯ ತೀರ್ಪು ನೀಡಿವೆ. ಶಾಲಾ-ಕಾಲೇಜು ಹಂತದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದುʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಒಳಮೀಸಲಾತಿ ಅನ್ಯಾಯ ಸರಿಪಡಿಸಲು ಬಲಗೈ ಸಮುದಾಯ ಒತ್ತಾಯ
ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಸುನೀಲ ಉಕ್ಕಲಿ, ಕಾರ್ಯದರ್ಶಿ ಡಾ.ಎಚ್.ಎಸ್.ಶಿವರಾಮ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಬೀದರ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.





