ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದು ಹಾಕಿ ಕೇವಲ ಸರ್ಕಾರದ ಅಣತಿಯ ವಿಬಿ-ಜಿ ರಾಮ್ ಜಿ ಯೋಜನೆಯಾಗಿ ಬದಲಾಯಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ಕೃಷಿ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು.
ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆ ಪದಾಧಿಕಾರಿಗಳು, ಕಾರ್ಮಿಕರು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳಿಗೆ ಸಲ್ಲಿಸಿದರು.
ʼ2004-2005ರಲ್ಲಿ ಎಡಪಕ್ಷಗಳ ಬೆಂಬಲದ ಮೇಲೆ ಆಧಾರವಾಗಿದ್ದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿತ್ತು. ಈ ಕಾಯ್ದೆಯನ್ನು ಗ್ರಾಮೀಣ ಭಾಗದ ಕೃಷಿ ಕೂಲಿಕಾರರು. ಬಡ ರೈತರು ಹಾಗೂ ಇನ್ನಿತರ ಗ್ರಾಮೀಣ ದುಡಿಮೆಗಾರರಲ್ಲಿ ಶೇ.30 ರಷ್ಟು ಜನರು ತಮ್ಮ ಜೀವನೋಪಯಕ್ಕಾಗಿ ಅವಲಂಬಿದ್ದರು. ಆದರೆ, ಇಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಹೊಸದಾಗಿ ವಿಬಿ- ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿದ್ದು ಖಂಡನೀಯʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಈ ಹೊಸ ಕಾಯ್ದೆಯಿಂದ ಕೃಷಿಕರು, ಕೂಲಿಕಾರರ ಮೇಲೆ ಹಲವು ದುಷ್ಪಪರಿಣಾಮಗಳು ಬೀರುತ್ತವೆ. ಮನರೇಗಾ 60 ದಿನಗಳ ಕೃಷಿ ಕೆಲಸ ನಿರ್ಬಂಧಿಸಿದನ್ನು ನೋಡಿದರೆ 125 ದಿನಗಳ ಕೆಲಸ ಸಿಗುವುದಿಲ್ಲ. ಹೀಗಾಗಿ ಕಾರ್ಮಿಕರು ಕೆಲಸದಿಂದ ವಂಚಿತರಾಗುತ್ತಾರೆ. ಕೇಂದ್ರ ಸರ್ಕಾರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ಮೊತ್ತವನ್ನು ಖರ್ಚು ಮಾಡಬೇಕೆಂಬ ಅಂಶಗಳಿವೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವು ಹಣ ನೀಡಿಲ್ಲವೆಂದು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವು ಹಣ ಕೊಟ್ಟಿಲ್ಲವೆಂದು ಹೇಳುವ ಮೂಲಕ ಕೂಲಿ ಕಾರ್ಮಿಕರನ್ನು ಕೂಲಿಯಿಂದ ವಂಚಿತರಾಗಿ ಮಾಡುತ್ತದೆʼ ಎಂದು ದೂರಿದರು.

ʼಮನರೇಗಾ ಕಾಯ್ದೆಯಲ್ಲಿ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಸದೆ ಮಾನವ ದಿನಗಳ ಮೂಲಕ ಉದ್ಯೋಗ ಸೃಷ್ಟಿಸಲು ಕಾನೂನು ಇತ್ತು. ವಿಬಿ-ಜಿ ರಾಮ್ ಜಿ ಹೊಸ ಕಾಯ್ದೆಯಲ್ಲಿ ಯಂತ್ರಗಳನ್ನು ಬಳಸಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಅಂಶಗಳಿದ್ದು, ಇದರಿಂದ ಕೂಲಿಕಾರರಿಗೆ ಕೂಲಿ ದಿನಗಳು ಸಿಗದಂತೆ ಆಗುತ್ತದೆ. ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಈ ಉದ್ಯೋಗ ಯೋಜನೆಯಲ್ಲಿ ಕೆಲಸ ಕೊಡಬೇಕೆಂಬ ನಿಯಮಗಳು ಹಾಗೂ ಕೇಂದ್ರ ಸರ್ಕಾರ ಅಧಿಸೂಚಿತ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಾತ್ರವೇ ಉದ್ಯೋಗ ಖಾತರಿ ಜಾರಿ ಎಂಬ ಅಂಶಗಳು ಕೂಲಿಕಾರರ ಹಕ್ಕನ್ನು ಕಸಿದುಕೊಳ್ಳಲಿದೆʼ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿಬಿ-ಜಿ ರಾಮ್ ಜಿ ಹೊಸ ಪದ್ಧತಿ ಕಾಯ್ದೆಯ ಉದ್ಯೋಗ ಖಾತ್ರಿಯನ್ನು ಮುಂದಿನ ದಿನಗಳಲ್ಲಿ ತೆಗೆದು ಹಾಕುವ ಹುನ್ನಾರವಾಗಿದೆ. ಕೃಷಿ ಮತ್ತು ಗ್ರಾಮೀಣ ರೈತರನ್ನು ಕೂಲಿ ಕೆಲಸದಿಂದ ತೆಗೆದು ಹಾಕುವ ಹುನ್ನಾರ ಬಿಜೆಪಿ ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಹೊಸ ಕಾಯ್ದೆ ಕೂಡಲೇ ಹಿಂಪಡೆದು ಹಳೆ ಮನರೇಗಾ ಕಾಯ್ದೆಯನ್ನೇ ಮುಂದುವರೆಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ : ಪ್ರಭುರಾವ ಕಂಬಳಿವಾಲೆ, ಡಾ.ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ಟ್ರಸ್ಟ್‌ಗಳು ರಚಿಸಿ ಸರ್ಕಾರ ಆದೇಶ
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಇಸಾಮೋದ್ದೀನ್, ಕಾರ್ಯದರ್ಶಿ ಅಂಬುಬಾಯಿ ಮಾಳಗೆ, ಸಹ ಕಾರ್ಯದರ್ಶಿ ದೇವಾನಂದ ಗಾಯಕವಾಡ ಸೇರಿದಂತೆ ಪ್ರಭು ಸಂತೋಷಕರ್, ಲಖನ್ ಮಹಾಜನ್, ಸೂರ್ಯಕಾಂತ, ಶ್ರೀಮಂತ, ಕಂಟೆಪ್ಪ, ಭುಜಂಗ, ಸಂಗ್ರಾಮ, ಶಾಂತಮ್ಮ, ಕಾಶಿಬಾಯಿ, ಹುಸೇನ್ ಹಾಗೂ ಮತ್ತಿತರರಿದ್ದರು.





