ʼವೀರಶೈವʼ ಪದ ಬಂದದ್ದು 14ನೇ ಶತಮಾನದಿಂದ. 12ನೇ ಶತಮಾನದಲ್ಲಿ ಇದ್ದದ್ದು ಬರೀ ʼಲಿಂಗಾಯತʼ ಅಥವಾ ಲಿಂಗವಂತ ಎಂದಿದೆ. ಈ ಬಗ್ಗೆ ಯಾರೊಂದಿಗೂ ದಾಖಲೆಗಳೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಬೀದರ್ ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಸಿಕ ವಚನ ಮಂಟಪ, ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಹಾಗೂ ಮಹಾಜ್ಞಾನಿ ಮಹಾ ಪ್ರಕಾಶ ಬಸವಣ್ಣನ ಧರ್ಮವಯ್ಯ ಚಿಂತನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ʼನನ್ನ ʼಸತ್ಯ ಶರಣರು ಸತ್ಯ ಶೋಧʼ ಕೃತಿಯಲ್ಲಿ ವೀರಶೈವ ಹಾಗೂ ಲಿಂಗಾಯತದ ಬಗ್ಗೆ ವಿವರಿಸಿದ್ದೇನೆʼ ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಉದ್ಘಾಟಿಸಿ ಮಾತನಾಡಿ, ʼವಚನ ಸಾಹಿತ್ಯ ಆಡು ಭಾಷೆ, ಜನಪದ ಭಾಷೆಯಲ್ಲಿ ಇರುವ ವಿಶಿಷ್ಟ ಸಾಹಿತ್ಯವಾಗಿದೆ. ಶರಣರ ವಚನಗಳಿಂದ 12ನೇ ಶತಮಾನದಲ್ಲಿ ಬಹಳ ದೊಡ್ಡ ಬದಲಾವಣೆ ತರಲು ಸಾಧ್ಯವಾಯಿತು. ಬಸವರಾಜ ಧನ್ನೂರ ಅವರು ವಚನ ಮಂಟಪದ ಮೂಲಕ ಶರಣರ ಕುರಿತು ಚಿಂತನ-ಮಂಥನ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಹೆಚ್ಚುಚ್ಚು ನಡೆಯಬೇಕುʼ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ʼಬಸವಣ್ಣನವರ ಕಾರ್ಯವನ್ನು ಎಲ್ಲರೂ ಒಗ್ಗಟ್ಟು ಹಾಗೂ ಸ್ವಚ್ಛ ಮನಸ್ಸಿನಿಂದ ಮಾಡೋಣ. ಜಾಗತಿಕ ಲಿಂಗಾಯತ ಮಹಾಸಭಾ 5 ವರ್ಷಗಳಿಂದ ಜಿಲ್ಲೆಯಲ್ಲಿ ಬಸವ ತತ್ವದ ಕಾರ್ಯಗಳಲ್ಲಿ ನಿರತವಾಗಿದೆ. 2023ರಲ್ಲಿ ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ, 2025 ರಲ್ಲಿ ಬೀದರನಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದೆ. ಬರುವ ದಿನಗಳಲ್ಲಿ ಇನ್ನೂ ಅನೇಕ ಸಂಘಟನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆʼ ಎಂದು ತಿಳಿಸಿದರು.
ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಕುರಿತು ಶಿಕ್ಷಕ ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿದರು. ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ ಹಾಗೂ ಪತ್ರಕರ್ತ ನಾಗಶೆಟ್ಟಿ ಧರಂಪುರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಲಬುರಗಿ ವಲಯ ಸಂಚಾಲಕ ಕುಶಾಲರಾವ್ ಪಾಟೀಲ ಗಾದಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ದೇವಪ್ಪ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ನಿರ್ದೇಶಕ ರಾಜಕುಮಾರ ತರಿ, ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ ಭತಮುರ್ಗೆ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ಘಾಳೆ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಎರಡು ಲಾರಿಗಳ ಮಧ್ಯೆ ಸಿಲುಕಿ ಕಾರು ಜಖಂ : ಓರ್ವ ವ್ಯಕ್ತಿ ಸಾವು
ಮನ್ನಾಏಖ್ಖೆಳ್ಳಿಯ ಮಾತೆ ಮೈತ್ರಾದೇವಿ ದಿವ್ಯ ಸಮ್ಮುಖ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಕಲಬುರಗಿ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಪ್ರಧಾನ ಕಾರ್ಯದರ್ಶಿ ಆರ್.ಜಿ.ಶೆಟಕಾರ್, ಪ್ರಮುಖರಾದ ಸತೀಶ ಪಾಟೀಲ, ಅಶೋಕ್ ಶಂಭು ಮತ್ತಿತರರು ಇದ್ದರು. ಉದ್ಯಮಿ ಕಂಟೆಪ್ಪ ಗಂದಿಗುಡಿ ವಚನ ಗಾಯನ ನಡೆಸಿಕೊಟ್ಟರು. ನಾಗಶೆಟ್ಟೆಪ್ಪ ದಾಡಗಿ ದಾಸೋಹ ಸೇವೆಗೈದರು. ವಿಜಯಕುಮಾರ ಕೆ. ಪಾಟೀಲ ಸ್ವಾಗತಿಸಿದರು. ಜಯದೇವಿ ಯದಲಾಪುರೆ ನಿರೂಪಿಸಿದರು. ರವಿ ಪಾಪಡೆ ವಂದಿಸಿದರು.





