ಉಡುಪಿ ಜಿಲ್ಲೆಯ ಮಂದಾರತಿ ಗ್ರಾಮದ ಖುಷಿ ಸುರೇಂದ್ರ ಅವರು ‘ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಅಂಡ್ ಅನಿಮಲ್ ಹಸ್ಬೆಂಡ್ರಿ’ (ಬಿವಿಎಸ್‌ಸಿ ಅಂಡ್ ಎಎಚ್) ವಿಭಾಗದಲ್ಲಿ ಬರೋಬ್ಬರಿ 16 ಚಿನ್ನದ ಪದಕಗಳಿಗೆ ಕೊರಳೊಡ್ಡಿ ಎಲ್ಲರ ಗಮನ ಸೆಳೆದಿದ್ದಾರೆ.
ಬೀದರ್ ಹೊರವಲಯದ ನಂದಿ ನಗರದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯನಲ್ಲಿ ಶುಕ್ರವಾರ ನಡೆದ 15ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿ ಪುಳಕರಾದರು.
ಬೀದರ್ ಹೊರವಲಯದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಖುಷಿ, 2023–24ನೇ ಸಾಲಿನಲ್ಲಿ ಈ ಅಮೋಘ ಸಾಧನೆ ತೋರಿದ್ದಾರೆ.
ಪಶು ವಿಶ್ವ ವಿದ್ಯಾಲಯದ ಇತಿಹಾಸದಲ್ಲಿ ಅತಿ ಹೆಚ್ಚಿನ ಚಿನ್ನದ ಪದಕ ಪಡೆದವರ ಸಾಲಿಗೆ ವಿದ್ಯಾರ್ಥಿಯಾಗಿ ಖುಷಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಖುಷಿ ಅವರ ತಂದೆ ಸುರೇಂದ್ರ ಮೆಂಡನ್ ಕುವೈತ್‌ನಲ್ಲಿ ಸೂಪರ್ವೈಸರ್ ಕೆಲಸ ಮಾಡುತ್ತಿದ್ದಾರೆ. ತಾಯಿ ಸುಜಾತಾ ಗೃಹಿಣಿ, ಖುಷಿ ಅವರು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.98 ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ರ‍್ಯಾಂಕ್ ಪಡೆದಿದ್ದರು.
‘ನನ್ನ ಓದಿಗೆ ಯಾವುದೇ ತೊಡಕಾಗದಂತೆ ಹೆತ್ತವರು ನೋಡಿಕೊಂಡರು. ನನಗೆ ಓದಿನಲ್ಲಿ ತುಂಬಾ ಆಸಕ್ತಿ ಇದೆ. ಪ್ರತಿ ದಿನ ಐದಾರು ಗಂಟೆಗಳ ಕಾಲ ಓದುತ್ತಿದ್ದೆ. ಮೊಬೈಲ್‌ದಿಂದ ಅಂತರ ಕಾಯ್ದುಕೊಂಡು ಅಧ್ಯಯನ ಮಾಡಿರುವೆ. ಇಲ್ಲಿಯವರೆಗೆ ನನ್ನ ಇನ್ಸ್‌ಸ್ಟಾಗ್ರಂ ಖಾತೆ ಸಹ ಇಲ್ಲ. ಕಾಲೇಜಿನ ಪ್ರಾಧ್ಯಾಪಕರ ಪ್ರೇರಣೆಯಿಂದಲೇ ಈ ಸಾಧನೆ ಸಾಧ್ಯವಾಗಿದೆ. ಉನ್ನತ ಅಧ್ಯಯನದೊಂದಿಗೆ ಸಮಾಜ ಸೇವೆ ಮಾಡುವ ಆಸೆಯಿದೆ. ಯುಪಿಎಸ್ಸಿ ಪರೀಕ್ಷೆ ಸಿದ್ಧತೆ ನಡೆಸಿರುವೆ’ ಎಂದು ಸಂತಸ ಹಂಚಿಕೊಂಡರು.
ಇಬ್ಬರಿಗೆ 6 ಚಿನ್ನದ ಪದಕ :
2024-25ನೇ ಸಾಲಿನಲ್ಲಿ ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ ಬಿ.ಟೆಕ್ (ಹೈನು ತಂತ್ರಜ್ಞಾನ) ಪದವಿ ವಿದ್ಯಾರ್ಥಿನಿ ಭೂಮಿಕಾ ಕೆ.ಆರ್. ಅವರು 6 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.

ಭೂಮಿಕಾ ಅವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳಂಬೆಳ್ಳ ಗ್ರಾಮದವರು. ತಂದೆ ರವೀಂದ್ರ ಕೆ.ಆರ್. ಕೃಷಿ ಜೊತೆಗೆ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ತಾಯಿ ಜ್ಯೋತಿ ಅವರು ಗೃಹಿಣಿಯಾಗಿದ್ದಾರೆ.
‘ಒಂದು ಚಿನ್ನದ ಪದಕ ಬರಬೇಕೆಂದು ನನ್ನ ಕನಸಾಗಿತ್ತು. ನಿನ್ನೆ ಓದಿನ ಫಲದಿಂದ ಆರು ಚಿನ್ನದ ಪದಕ ಬಂದಿರುವುದು ಅತ್ಯಂತ ಖುಷಿ ತಂದಿದೆ. ಸದ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ. ಮುಂದೆ ಉನ್ನತ ವ್ಯಾಸಂಗ ಮಾಡುವ ಉದ್ದೇಶ ಹೊಂದಿದ್ದೇನೆ’ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ₹50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಇಇ ರಾಮಲಿಂಗಪ್ಪ ಬಿರಾದಾರ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮೈಲಾಂಡ್ಲಹಳ್ಳಿ ಗ್ರಾಮದವರಾದ ವಿಜಯಕುಮಾರ ಎಂ.ಸಿ ಅವರು 2023-24ನೇ ಸಾಲಿನಲ್ಲಿ ಎಂವಿಎಸ್‌ಸಿ ಕುಕ್ಕುಟಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕಗಳು ಬಾಚಿಕೊಂಡಿದ್ದಾರೆ.
‘ನನ್ನ ತಂದೆ ಕೃಷಿಕರು, ನಾನು ಕಷ್ಟಪಟ್ಟು ಓದಿರುವೆ. ಪೋಷಕರ ಸಹಕಾರ, ಪ್ರಾಧ್ಯಾಪಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಇಷ್ಟು ಗೋಲ್ಡ್ ಮೆಡಲ್ ಬರುತ್ತವೆ ಎಂದು ಅಂದುಕೊಂಡಿರಲಿಲ್ಲ. ಈಗ ತುಂಬಾ ಸಂತೋಷ ಆಗಿದೆ. ಸದ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ’ ಎಂದು ಖುಷಿ ಹಂಚಿಕೊಂಡರು.





