ಬೀದರ್‌ | ಅಲೆಮಾರಿಗಳ ಸಂಘಟಿತ ಹೋರಾಟಕ್ಕೆ ಜಯ : ನೊಂದವರ ನೋವಿಗೆ ದನಿಯಾದ ಸದನ!

Date:

ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ತಹಸೀಲ್‌ ಕಚೇರಿ ಆವರಣದಲ್ಲಿ ʼಭೂಮಿಗಾಗಿʼ ಅಲೆಮಾರಿಗಳು ನಡೆಸಿದ ಹೋರಾಟವು  ಶಾಂತಿಯುತ ಮತ್ತು ದೃಢವಾದ ಹೋರಾಟಕ್ಕೆ ನಿದರ್ಶನವಾಗಿತ್ತು. ಜಾಗ ಕೊಡಲೇಬೇಕೆಂದು ಪಟ್ಟು ಹಿಡಿದ ಅಲೆಮಾರಿಗಳು ಕೊನೆಗೂ ಜಿಲ್ಲಾಡಳಿತಕ್ಕೆ ಕರೆಸಿಕೊಂಡ ಈ ಹೋರಾಟ, ಸಂಘಟಿತ ಶಕ್ತಿ ಮತ್ತು ಅಲೆಮಾರಿಗಳ ಗಟ್ಟಿ ಧೈರ್ಯ ಮತ್ತೊಮ್ಮೆ ಸಾಬೀತುಪಡಿಸಿದ್ದು, ಐತಿಹಾಸಿಕ ಅಲೆಮಾರಿಗಳ ಹೋರಾಟಗಳ ಪಟ್ಟಿಯಲ್ಲಿ ಸೇರುವಂತಾಯಿತು.

ಅಲೆಮಾರಿ ಸಮುದಾಯಕ್ಕೆ ಭೂಮಿ ಮಂಜೂರು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಔರಾದ್‌ ಪಟ್ಟಣದ ತಹಸೀಲ್‌ ಕಚೇರಿ ಆವರಣದಲ್ಲಿ 11 ದಿನಗಳಿಂದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ನಡೆದ ಅಹೋರಾತ್ರಿ ಧರಣಿ ಜಿಲ್ಲಾಡಳಿತವನ್ನು ಮಣಿಸುವಲ್ಲಿ ಯಶಸ್ವಿಯಾಯಿತು.

ಅಲೆಮಾರಿಗಳು 11 ದಿನಗಳ ಅಹೋರಾತ್ರಿ ಹೋರಾಟದ ಫಲವಾಗಿ ಜಿಲ್ಲಾಡಳಿತವು 2ಎಕರೆ ಭೂಮಿ ನೀಡುವ ಜೊತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಬಗ್ಗೆ ಭರವಸೆಯ ಹಿಂಬರಹ ನೀಡಿದ್ದು, ಅಲೆಮಾರಿ ಸಮುದಾಯದ ನಿರಂತರ ಹೋರಾಟಕ್ಕೆ ಜಯ ಸಿಕ್ಕಿತು.

ಜ.19ರಿಂದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ಅಲೆಮಾರಿ ಜನಾಂಗದ ಗುಡಿಸಲು ವಾಸಿಗಳು ಪುಟ್ಟ ಮಕ್ಕಳು, ವೃದ್ಧರು, ಮಹಿಳೆಯರು ಧರಣಿ ಆರಂಭಿಸಿದರು. ಮೊದಲ ದಿನವೇ ತಹಸೀಲ್ದಾರ್‌ ಮಹೇಶ ಪಾಟೀಲ್‌ ಭೇಟಿ ನೀಡಿ ಭೂಮಿ ನೀಡುವ ಭರವಸೆ ನೀಡಿದರು. ಆದರೆ, ಅದಕ್ಕೆ ಒಪ್ಪದ ಅಲೆಮಾರಿಗಳು ʼನಮಗೆ ಭರವಸೆ ಬೇಡ, ಭೂಮಿ ಮಂಜೂರಾತಿ ಆದೇಶ ಪ್ರತಿ ಕೈಗೆ ಕೊಡಿʼ ಎಂದು ಪಟ್ಟು ಹಿಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಳಿಕ ಬೀದರ್‌ ಉಪ ವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್‌ ಅವರು ಭೇಟಿ ನೀಡಿದರೂ ಅವರಿಗೂ ತಮ್ಮ ಬಲವಾದ ಬೇಡಿಕೆಯ ಪಟ್ಟು ಬಿಡಲಿಲ್ಲ.‌ ಧರಣಿ ನಿರಂತರವಾಗಿ ನಡೆಯಿತು.

WhatsApp Image 2026 01 19 at 9.55.11 PM 1
ಅಲೆಮಾರಿಗಳ ಜ.19ರಂದು ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಧರಣಿ ಆರಂಭಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ, ಮಂಜುರಾದ ಭೂಮಿ ನೀಡಬೇಕು. ಇಲ್ಲದಿದ್ದರೆ ಹೋರಾಟ ಕೈಬಿಡುವ ಮಾತೇ ಇಲ್ಲ ಎಂಬ ಎಚ್ಚರಿಕೆಯ ಸಂದೇಶ ಜಿಲ್ಲಾಡಳಿತಕ್ಕೆ ರವಾನಿಸಿದರು.

ಭರವಸೆಗಳಿಗೆ ಮಣಿಯದ ಹೋರಾಟಗಾರರನ್ನು ಜ.29ರಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರತಿಭಟನೆ ನೇತ್ರತ್ವ ವಹಿಸಿದ ಮುಖಂಡರು, ಅಲೆಮಾರಿ ಸಮುದಾಯ ಮುಖಂಡರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆಯಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆಯಾದ ಬಳಿಕವೂ ಬೇಡಿಕೆಗೆ ಸ್ಪಂದನೆ ಸಿಗಲಿಲ್ಲ. ವಾಪಸ್‌ ಬಂದು ಧರಣಿ ಮುಂದುವರೆಸಿದರು.

ʼನಮ್ಮ ಬೇಡಿಕೆ ಧರಣಿ ಸ್ಥಳದಲ್ಲಿಯೇ ಇತ್ಯರ್ಥವಾಗಬೇಕುʼ ಎಂದು ಪಟ್ಟು ಹಿಡಿದರು. ಪರಿಣಾಮ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು (ಜ.29) ರಂದು ರಾತ್ರಿ ಧರಣಿ ಸ್ಥಳಕ್ಕೆ ಬಂದು ನಿವೇಶನ, ಮನೆ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿ, ಮಂಜೂರಾತಿಯ ಹಿಂಬರಹ ಪ್ರತಿ ಹೋರಾಟಗಾರರ ಕೈಗೆ ಕೊಡಬೇಕಾಯಿತು.

ಅಲೆಮಾರಿಗಳ ನಿರಂತರ ಹೋರಾಟವು ಜಾತ್ಯತೀತ, ಧರ್ಮಾತೀತ, ಪಕ್ಷಾತೀತವಾಗಿ ನಡೆದಿದ್ದು ವಿಶೇಷ. ಧರಣಿ ಸ್ಥಳದಲ್ಲಿ ಹಾಕಿರುವ ಬ್ಯಾನರ್‌ನಲ್ಲಿಯೇ “ಇದು ರಾಜಕೀಯ ಹಾಗೂ ಧಾರ್ಮಿಕ ವಿಷಯವಲ್ಲ: ಇದು ಮಾನವೀಯತೆಯ ವಿಷಯ” ʼಅಲೆಮಾರಿ ಜನಾಂಗದ ಬದುಕಿಗಾಗಿ ಭೂಮಿʼ ಎಂಬ ಧ್ಯೇಯದೊಂದಿಗೆ ಹೋರಾಟ ನಡೆಯಿತು.

WhatsApp Image 2026 01 29 at 9.41.00 PM
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಎಸಿ ಮುಹಮ್ಮದ್‌ ಶಕೀಲ್‌, ತಹಸೀಲ್ದಾರ್‌ ಮಹೇಶ ಪಾಟೀಲ್‌ ಅವರು ಜ.29ರಂದು ರಾತ್ರಿ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಜಾಗದ ಹಿಂಬರಹ ಪತ್ರ ನೀಡಿ ಧರಣಿ ಅಂತ್ಯಗೊಳಿಸಿದರು.

ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌, ಬಿಎಸ್ಪಿ, ಕೆಆರ್‌ಎಸ್ ಸೇರಿದಂತೆ ವಿವಿಧ ಪಕ್ಷಗಳು, ಜನಪರ ಸಂಘಟನೆಗಳ ಮುಖಂಡರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲಿಸಿದರು.

ಕಳೆದ ಮೂರ್ನಾಲ್ಕು ದಶಕದಿಂದ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಗುಡಿಸಲಿನಲ್ಲಿ ವಾಸಿಸುವ ಅಲೆಮಾರಿ ಸಮುದಾಯಕ್ಕೆ ಮಾನವೀಯತೆ ತೋರಬೇಕು. ಅವರ ಘನತೆಯ ಬದುಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಯಾರೇ ಬೆಂಬಲಿಸಬಹುದು. ಇದು ರಾಜಕೀಯ ರಹಿತ ಹೋರಾಟʼ ಎಂಬುದನ್ನು ಪ್ರತಿಭಟನೆ ನೇತ್ರತ್ವ ವಹಿಸಿದ ರಾಹುಲ್‌ ಖಂದಾರೆ ತಾಕೀತು ಮಾಡುತ್ತಿದ್ದರು. ಇದರಿಂದ ರಾಜಕೀಯ ಒಂದಂಶವೂ ಸುಳಿಯದೆ ಅಲೆಮಾರಿಗಳ ಹೋರಾಟ ಸ್ವಾಭಿಮಾನಿಗಳ ಧರಣಿಯಾಗಿ ಮುಂದುವರಿಯಿತು.

ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ವಿಧಾನ ಪರಿಷತ್‌ ಸದಸ್ಯರಾದ ಕೆ.ಪುಂಡಲಿಕರಾವ್‌, ಅರವಿಂದಕುಮಾರ ಅರಳಿ ಸೇರಿದಂತೆ ರಾಜಕೀಯ ಮುಖಂಡರು, ಜನಪರ ಸಂಘಟನೆಗಳ ಹೋರಾಟಗಾರರು ಇದರ ಭಾಗವಾದರು. ರಾಜ್ಯ ಸೇರಿ ಜಿಲ್ಲೆಯ ನಾನಾ ಕಡೆಯಿಂದ ಹೋರಾಟಗಾರರು ಆಗಮಿಸಿ ಹೋರಾಟಕ್ಕೆ ದೊಡ್ಡ ಶಕ್ತಿ ತುಂಬಿದರು. ದಿನನಿತ್ಯ ‌ʼಬುದ್ದ, ಬಸವ, ಅಂಬೇಡ್ಕರ್‌, ಸಾವಿತ್ರಿಬಾಯಿ ಫುಲೆ, ಬಿರ್ಸಾ ಮುಂಡಾ, ಬಹುಜನ ನಾಯಕ ಕಾನ್ಶಿರಾಂ, ಛತ್ರಪತಿ ಶಿವಾಜಿ ಸೇರಿ ʼಜೈಭೀಮ್ʼ ಘೋಷಣೆಗಳು ಮೊಳಗಿದವು. ಭಾರತ ಸಂವಿಧಾನದ ಪೀಠಿಕೆ ಹೋರಾಟಗಾರರ ನಿತ್ಯ ಪಠಣವಾಯಿತು.

ಅಲೆಮಾರಿ ಸಮುದಾಯ ಈ ಹಿಂದೆ ನಿವೇಶನಕ್ಕಾಗಿ ಅನೇಕ ಸಲ ಹೋರಾಟ ನಡೆಸಿದೆ. ಆದರೆ, ಈ ಮಾದರಿಯಲ್ಲಿ ಎಂದೂ ನಡೆಸಲಿಲ್ಲ. ಈ ದಿಟ್ಟ ಹೋರಾಟ ಜನಾಂದೋಲನವಾಯಿತು. ತಾಲೂಕಿನಲ್ಲಿ ದಶಕಗಳಿಂದ ಕಳೆಗುಂದಿದ್ದ ಹೋರಾಟಗಳಿಗೆ ವೈಭವ ಮರುಕಳಿಸುವಂತೆ ಮಾಡಿದೆ.

WhatsApp Image 2026 01 31 at 8.15.08 AM
ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ ಅವರು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಅಲೆಮಾರಿ ಬೇಡಿಕೆ ಈಡೇರಿಕೆ ಸಂಬಂಧ ಮನವಿ ಸಲ್ಲಿಸಿದರು.

ಅಲೆಮಾರಿಗಳ ಬೇಡಿಕೆ ಏನಾಗಿತ್ತು?

ಕಳೆದ ಮೂರ್ನಾಲ್ಕು ದಶಕದಿಂದ ಔರಾದ್‌ ಪಟ್ಟಣದ ಎಪಿಎಂಸಿ, ಬಿಇಒ ಕಚೇರಿ ಸಮೀಪದ ರಸ್ತೆ ಪಕ್ಕದಲ್ಲಿ ಪುಟ್ಟ ಜೋಪಡಿಗಳಲ್ಲಿ ವಾಸಿಸುತ್ತಿದ್ದರು. ಅವರಿಗೆ ನೀರು, ವಿದ್ಯುತ್‌ ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಸಹ ಇಲ್ಲ. ನಿವೇಶನಕ್ಕಾಗಿ ಅನೇಕ ಬಾರಿ ಪ್ರತಿಭಟನೆ ನಡೆಸಿದರು. ಆದರೆ, ಜಾಗ ಮಂಜೂರಾದರೂ ಅದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಂಚಿಕೆಯಾಗದೆ ಉಳಿದಿತು. ಇನ್ನು ಸರ್ವೇನಂ-183ರಲ್ಲಿ ಎಕರೆ ಜಾಗ ಮಂಜೂರಾದರೂ ಅದು ರದ್ದಪಡಿಸಬೇಕೆಂಬ ಪ್ರಸ್ತಾವನೆ ಜಿಲ್ಲಾಡಳಿತಕ್ಕೆ ಕಳಿಸಿದರು.

ʼಔರಾದ್‌ ಪಟ್ಟಣದ ಸಮೀಪ ಇರುವ ಸರ್ವೇ ನಂ-183ರಲ್ಲಿ ಎರಡು ಎಕರೆ ಜಾಗ ಮಂಜೂರಾಗಿದ್ದು, ಅದೇ ನಮಗೆ ಕೊಡಿ ಎಂಬುದು ಗುಡಿಸಲು ವಾಸಿಗಳ ಪ್ರಮುಖ ಬೇಡಿಕೆಯಾಗಿತ್ತು. ಅದರೊಂದಿಗೆ ಸರ್ವೇ ನಂ-205ರಲ್ಲಿ ಮಂಜೂರಾದ ಎರಡು ಎಕರೆ ಭೂಮಿ ಹಾಗೂ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂಬುದು ಬೇಡಿಕೆಗಳಾಗಿದವು.

ತಹಸೀಲ್ದಾರ್‌ ನೀಡಿದ ಹಿಂಬರಹದಲ್ಲಿ ಏನಿದೆ?

ಔರಾದ(ಬಿ) ಪಟ್ಟಣದ ಸರ್ಕಾರಿ ಭೂಮಿ ಸರ್ವೆ ನಂಬರ 205/2 ರಲ್ಲಿ 2 ಎಕರೆ ಭೂಮಿ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದವರಿಗೆ ನಿವೇಶನ ಹಾಗೂ ಮೂಲಭೂತ ಸೌಕರ್ಯ ನೀಡಬೇಕೆಂದು ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದು, ಈ ಬಗ್ಗೆ ಬೀದರ್ ಸಹಾಯಕ ಆಯುಕ್ತರು,‌ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಔರಾದ್ ಪೊಲೀಸ್ ಅಧೀಕ್ಷಕರೊಂದಿಗೆ ಚರ್ಚಿಸಿ ಸಮಾಲೋಚನೆ ನಡೆಸಲಾಗಿದೆ.

WhatsApp Image 2026 01 21 at 11.03.06 PM 1
ವಿವಿಧ ಸಂಘಟನೆಗಳ ಸಂಘಟಿತ ಬೆಂಬಲ

ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದ ಜಾತಿ ಆಧರಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 85 ಕುಟುಂಬ ಹಾಗೂ ಹಿಂದುಳಿದ ವರ್ಗಗಳ 143 ಸೇರಿ ಒಟ್ಟು 228 ಕುಟುಂಬಗಳಿಗೆ ಮುಂದಿನ 6 ತಿಂಗಳ ಅವಧಿಯಲ್ಲಿ ಸರ್ಕಾರದ ಕಾರ್ಯವಿಧಾನ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಔರಾದ್‌ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಲಾದ ಹಿಂಬರಹ ಆದೇಶದಲ್ಲಿ ಔರಾದ್‌ ತಹಸೀಲ್ದಾರ್‌ ಅವರ ಸಹಿ ಇದೆ.

ಮಂಜೂರಾದ ಎರಡು ಎಕರೆ ಜಾಗ ಏನಾಯ್ತು?

ಔರಾದ್‌ ಪಟ್ಟಣದ ಮುಂಗನಾಳ ರಸ್ತೆಯಲ್ಲಿ ಬರುವ ಸರ್ವೇ ನಂ-183ರ ಜಾಗ 2019ರಲ್ಲಿ ಮಂಜೂರಾಗಿತ್ತು. ಅದನ್ನು ಹಂಚಿಕೆಯಾಗದೆ ಹಾಗೇ ಉಳಿದಿತು. ರಾಜಕೀಯ ಷಡ್ಯಂತ್ರದಿಂದಾಗಿ ಆ ಜಾಗ ರದ್ದತಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಲಾಗಿತ್ತು. ಅದಕ್ಕೆ ಅಲೆಮಾರಿ ಸಮುದಾಯದ ಕೆಲವರು ಸಹಿ ಹಾಕಿದ್ದಾರೆ ಎಂದು ಪ್ರಸ್ತಾಪಿಸಲಾಗಿದೆ.

ಮಂಜೂರಾದ ಸರ್ವೇ ನಂ-183ರ ಜಾಗ ಅಲೆಮಾರಿ ಜನಾಂಗಕ್ಕೆ ಕೊಡಬೇಕೆಂದು ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ ಅವರು 2026 ಜನವರಿ 28ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಅಲೆಮಾರಿಗಳ ಬೇಡಿಕೆ ಕೂಡ ಅದೇ ಆಗಿತು.

ಪ್ರತಿಭಟನಾಕಾರರಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಕರೆದು ಆ ಜಾಗದ ಕುರಿತು ಚರ್ಚಿಸಿದರು. ಆ ಜಾಗದಲ್ಲಿ ಈ ಹಿಂದೆ ಸರ್ಕಾರಿ ಕಚೇರಿ, ಸಮುದಾಯ ಭವನ ಸೇರಿ ವಿವಿಧ ಯೋಜನೆಗಳಿಗೆ ನಿಗದಿ ಮಾಡಲಾಗಿದೆ. ಹೀಗಾಗಿ ಅದರ ಬದಲಾಗಿ ಸರ್ವೇ ನಂ-205ರಲ್ಲಿ ಎರಡು ಎಕರೆ ಜಾಗ ನೀಡಿ, ಅಲ್ಲಿ ಜಿ ಪ್ಲಸ್-‌3 ಮನೆ ನಿರ್ಮಿಸಿ ಅಗತ್ಯ ಸೌಕರ್ಯ ನೀಡುತ್ತೇವೆ ಎಂದು ಮನವರಿಕೆ ಮಾಡಿದರು.

ಅಲೆಮಾರಿ ಸಮುದಾಯದೊಂದಿಗೆ ಸಮಾಲೋಚನೆ ನಡೆಸಿದ ಧರಣಿನಿರತರು ಸರ್ಕಾರಿ ಕಚೇರಿಗಳ ಪಕ್ಕದಲ್ಲಿ ಅಲೆಮಾರಿ ಸಮುದಾಯ ಮನೆ ನಿರ್ಮಾಣ ಮಾಡುವ ಬದಲು ಪ್ರತ್ಯೇಕವಾಗಿರುವುದು ಉತ್ತಮ. ಔರಾದ್‌ ಪುರಸಭೆ ವ್ಯಾಪ್ತಿಯಲ್ಲೇ ಬರುವ 205ರ ಜಾಗದಲ್ಲಿ ಮನೆ ನಿರ್ಮಿಸಿವಂತೆ ಜಿಲ್ಲಾಧಿಕಾರಿಗಳ ಮಾತಿಗೆ ಒಪ್ಪಿದರು.

ವಿಧಾನ ಪರಿಷತ್‌ ಕಲಾಪದಲ್ಲಿ ಚರ್ಚೆ :

ವಿಧಾನ ಪರಿಷತ್ತಿನ ವಿಶೇಷ ಅಧಿವೇಶನದಲ್ಲಿ ಜ.30ರಂದು ಔರಾದ್‌ ಪಟ್ಟಣದಲ್ಲಿ ನಡೆದ ಅಲೆಮಾರಿಗಳ ಅಹೋರಾತ್ರಿ ಧರಣಿ ಕುರಿತು ಚರ್ಚಿಯಾಯಿತು.

WhatsApp Image 2026 01 30 at 9.15.44 PM
ವಿಧಾನ ಪರಿಷತ್‌ ಕಲಾಪದಲ್ಲಿ ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್‌ ಅವರು ಅಲೆಮಾರಿ ಹೋರಾಟ ಸಂಬಂಧ ಧ್ವನಿಯೆತ್ತಿದರು.

ಹುಮನಾಬಾದ್‌ನ ವಿಧಾನ ಪರಿಷತ್‌ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್‌ ಅವರು ವಿಷಯ ಪ್ರಸ್ತಾಪಿಸಿ, ಔರಾದ್‌ ಪಟ್ಟಣದ ಗುಡಿಸಲು ವಾಸಿಗಳಿಗೆ ನಿವೇಶನ ನೀಡಬೇಕು. ಸರ್ವೇ ನಂ-183ರ ಜಾಗದಲ್ಲೇ ಕೊಡಬೇಕೆಂದು ಸದನಕ್ಕೆ ಪ್ರಸ್ತಾಪಿಸಿದರು.

ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಪ್ರತಿಕ್ರಿಯಿಸಿ, ʼಸರ್ವೇ ನಂ-183ರಲ್ಲಿನ ಎರಡು ಎಕರೆ ಜಾಗ ಈಗಾಗಲೇ ರದ್ದಾಗಿದೆ. ಓದಲು ಬರಲಾರದವರಿಂದ ಬರೆಸಿಕೊಂಡು ಅಲೆಮಾರಿ ಸಮುದಾಯದವರೇ ಅದಕ್ಕೆ ಸಹಿ ಹಾಕಿ, ಈ ಜಾಗ ಬೇಡ ಎಂದು ಹೇಳಿದ್ದಾರೆʼ ಎಂದು ಉತ್ತರಿಸಿದರು.

ʼಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ರಾಜೀವ್‌ ಗಾಂಧಿ ಹೌಸಿಂಗ್‌ ಬೋರ್ಡ್‌ನಲ್ಲಿ 2006-7ರಲ್ಲಿ ಆಗಿರುವ ಯೋಜನೆ. ಅದಕ್ಕಾಗಿ 50 ಕೋಟಿ ರೂ. ಮಂಜೂರು ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಅಲೆಮಾರಿಗಳಿಗೆ ಮಂಜೂರು ಮಾಡಿದ ಸರ್ವೇ ನಂ-205ರಲ್ಲಿ ಜಾಗದಲ್ಲಿ ತತ್‌ಕ್ಷಣವಾಗಿ ಕ್ರಮವಹಿಸಿ ಮನೆ ನಿರ್ಮಾಣ ಮಾಡಲಾಗುವುದುʼ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಜಿಲ್ಲಾಡಳಿತಕ್ಕೆ ಭಗವಂತ ಖೂಬಾ ಅಭಿನಂದನೆ :

ದಶಕಗಳಿಂದ ಅಲೆಮಾರಿ–ಅರೆಅಲೆಮಾರಿ ಜನಾಂಗದವರು ಇಚ್ಛಿಸಿದಂತೆ ಔರಾದ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 205ರಲ್ಲಿ 2 ಎಕರೆ ಜಮೀನು ಜಿಲ್ಲಾಡಳಿತ ನೀಡಿ, ಬರುವ 6 ತಿಂಗಳೊಳಗೆ ನಾಗರೀಕ ಸೌಲಭ್ಯಗಳು, ಮೂಲ ಸೌಕರ್ಯಗಳು ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ವಿಶ್ವಾಸ ನೀಡಿದ್ದಾರೆ, ಜಿಲ್ಲಾಡಳಿತದ ಕ್ರಮ ಶ್ಲಾಘನೀಯ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ನನ್ನ ಮಾತಿಗೆ ಗೌರವ ಕೊಟ್ಟು, ಧರಣಿ ನಿರತ ಸ್ಥಳಕ್ಕೆ ತೆರಳಿ, ಅವರಿಗೆ ನ್ಯಾಯ ಕೊಡುವ ಭರವಸೆ ನೀಡಿದ್ದಾರೆ, ದಶಕಗಳಿಂದ ದಿಕ್ಕಿಲ್ಲದಂತೆ ಬದುಕುತ್ತಿದ್ದ ಅಲೆಮಾರಿ, ಅರೆ ಅಲೆಮಾರಿ ಜನರಿಗೆ ನ್ಯಾಯ ಸಿಕ್ಕಿದೆ, ಇದರಿಂದಾಗಿ ಅಲೆಮಾರಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದು ಎಲ್ಲರ ಹೋರಾಟಕ್ಕೆ ಸಂದ ಜಯವಾಗಿದೆʼ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಸಂತಸ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದ್ದಾರೆ.

WhatsApp Image 2026 01 31 at 8.21.39 AM
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತದೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ತಿಳಿಸಿದರು.

ಈ ಹೊರಾಟದಲ್ಲಿ ಇದ್ದ ಜನರು ಮುಗ್ದರು, ಅವರಿಗೆ ಕಾನೂನು ಗೊತ್ತಿಲ್ಲ, ಇಂತಹ ಮುಗ್ದ ಜನರಿಗಾಗಿ ಹೋರಾಟ ಮಾಡಿರುವುದು ನನಗೆ ಸಂತಸ ತಂದಿದೆ. ಇವರ ಹಕ್ಕಿಗಾಗಿ ಪ್ರತಿಭಟನೆಯ ಮುಂದಾಳತ್ವ ವಹಿಸಿದ ರಾಹುಲ ಖಂದಾರೆ, ಸುಭಾಷ ಲಾಧಾ, ಸಂತೋಷ ಶಿಂಧೆ, ಸಿದ್ದಾರ್ಥ ಭೊಸ್ಲೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ದಿನೇಶ ಶಿಂಧೆ ಸೇರಿ ಎಲ್ಲರಿಗೂ ಭಗವಂತ ಖೂಬಾ ಅಭಿನಂದನೆಗಳು ತಿಳಿಸಿದ್ದಾರೆ.

ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪ್ರತಿಭಟನೆ

ತಹಸೀಲ್‌ ಕಚೇರಿ ಆವರಣದಲ್ಲಿರುವ ಸಭಾ ಮಂಟಪದಲ್ಲಿ ಅಹೋರಾತ್ರಿ ಧರಣಿ ನಡೆಯಿತು. ಪ್ರತಿಭಟನೆ ನೇತ್ರತ್ವ ವಹಿಸಿದ ಪ್ರಮುಖರು ಸೇರಿ ಅಲೆಮಾರಿ ಜನಾಂಗದ ಮಹಿಳೆಯರು, ಮಕ್ಕಳು, ವೃದ್ಧರು ರಾತ್ರಿ ಧರಣಿ ಸ್ಥಳದಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ. ಅಧಿಕ ಚಳಿ ಇರುವುದರಿಂದ ಕೆಲವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತು. ಪ್ರತಿಭಟನಾಕಾರರಿಗೆ ವೈದ್ಯಕೀಯ ತಪಾಸಣೆ ನಡೆಸಲು ವೈದ್ಯ ಸಿಬ್ಬಂದಿ ಧರಣಿ ಸ್ಥಳದಲ್ಲಿ ಠಿಕಾಣಿ ಹೂಡಿ ನಿಗಾವಹಿಸಿತು. ಪೊಲೀಸ್‌ ಸಿಬ್ಬಂದಿ ಕೂಡ ನಿರಂತರವಾಗಿ ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಿತು.

ಅಹೋರಾತ್ರಿ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಇರುವುದರಿಂದ ತಾಲೂಕು ಆಡಳಿತದಿಂದ ಸಿಸಿ ಕ್ಯಾಮೆರಾ ಸಹ ಅಳವಡಿಸಲಾಗಿತು. ಒಕ್ಕೂಟದಿಂದ ಪ್ರತಿಭಟನಾ ಸ್ಥಳದಲ್ಲಿ ಪ್ರತಿದಿನವೂ ಊಟ, ನೀರಿನ ವ್ಯವಸ್ಥೆ ಮಾಡಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ʼಔರಾದ್‌ ಪಟ್ಟಣದ ಅಲೆಮಾರಿ-ಅರೆ ಅಲೆಮಾರಿ ಸಮುದಾಯಕ್ಕೆ ಮಂಜೂರಾದ ಜಾಗದಲ್ಲಿ ಮುಂದಿನ ಆರು ತಿಂಗಳಲ್ಲಿ ಭೂಸೇನೆ ನಿಗಮದಿಂದ ಜಿ-ಪ್ಲಸ್‌ 3 ಮಾದರಿಯಲ್ಲಿ ಮನೆ ನಿರ್ಮಾಣ ನಿರ್ಮಾಣ ಸೇರಿ ಅಗತ್ಯ ಸೌಕರ್ಯ ಒದಗಿಸಲಾಗುವುದು. ಈ ಬಗ್ಗೆ ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದುʼ ಎಂದರು.

WhatsApp Image 2026 01 31 at 8.27.48 AM
ಪ್ರತಿಭಟನೆ ಮೊದಲ ದಿನ ಪ್ರೊಬೇಷನರಿ ಐಎಎಸ್‌ ಅಧಿಕಾರಿ ರಮ್ಯಾ ಹಾಗೂ ತಹಸೀಲ್ದಾರ್‌ ಮಹೇಶ ಪಾಟೀಲ್‌ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಹೋರಾಟಕ್ಕೆ ಕೈಜೋಡಿಸಿದವರಿಗೆ ಧನ್ಯವಾದ:

ಅಲೆಮಾರಿ ಜನಾಂಗದ ಘನತೆಯ ಬದುಕಿಗಾಗಿ ನಡೆಸಿದ ಅಹೋರಾತ್ರಿ ಧರಣಿ ಬೆಂಬಲಿಸಿ ವಿವಿಧ ಪಕ್ಷ, ಸಂಘಟನೆಗಳು ಬೆಂಬಲಿಸಿ ನಮ್ಮೊಂದಿಗೆ ಕೈಜೋಡಿಸಿದ ಎಲ್ಲರಿಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಧನ್ಯವಾದ ತಿಳಿಸಿದೆ. ಇಡೀ ಹೋರಾಟಕ್ಕೆ ತಮ್ಮ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಿ ಸಹಕಾರ ನೀಡಿದ ಪತ್ರಿಕೆ, ಟಿವಿ ಹಾಗೂ ಸಾಮಾಜಿಕ ಮಾಧ್ಯಮದ ಎಲ್ಲರಿಗೂ ಒಕ್ಕೂಟದ ಮುಖಂಡ ರಾಹುಲ ಖಂದಾರೆ ಕೃತಜ್ಞತೆ ಸಲ್ಲಿಸಿದ್ದಾರೆ.

ʼರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಹೋರಾಟದ ಸ್ಥಳಕ್ಕೆ ಭೇಟಿ ನೀಡಿದರು. ಇದು ನ್ಯಾಯಯುತ ಹೋರಾಟ, ನಿಮ್ಮ ಹಕ್ಕಿನ ಬೆಲೆ ಸಿಗುವವರೆಗೂ ಹೋರಾಟ ಮುಂದುವರೆಯಿಸಿʼ ಎಂಬ ಅವರ ಮಾತುಗಳು ಅಲೆಮಾರಿಗಳ ಮನೋಬಲವನ್ನು ಹೆಚ್ಚಿಸಿತು. ಒಕ್ಕೂಟದ ಸದಸ್ಯರು ʼನಮ್ಮ ಬೇಡಿಕೆ ಈಡೇರುವರೆಗೆ ಯಾವ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲʼ ಎಂಬ ಎಚ್ಚರಿಕೆ ಸಂದೇಶ ಪ್ರತಿಭಟನೆಯ ಗೆಲುವಿಗೆ ಸಾಕ್ಷಿಯಾಗಿದೆ ಎಂದು ಹೇಳಬಹುದು.

WhatsApp Image 2026 01 19 at 9.55.10 PM 1

ವಸತಿ ವಂಚಿತ, ಅಲಕ್ಷಿತ ಸಮುದಾಯಗಳ ಘನೆತಯ ಬದುಕಿಗಾಗಿ ಸಮಾನ ಮನಸ್ಕರು ಕೈಜೋಡಿಸಿ ತಮ್ಮ ಸ್ವಾಭಿಮಾನ, ಸಹನೆಯಿಂದ ಹೋರಾಟ ಮುಂದುವರೆಸಿದರು. ಎಲ್ಲರ ಒಗ್ಗಟಿನ ಮಂತ್ರಕ್ಕೆ ಕೊನೆಗೂ ಜಯವಾಗಿದೆ. ʼಭೂಮಿ ಪಡೆದೇ ಪಡೆಯುತ್ತೇವೆʼ ಎಂಬ ಮೊಂಡು ಧೈರ್ಯ, ಹೋರಾಟದ ಧ್ವನಿ, ರಾಜ್ಯದ ಜಿಲ್ಲಾದ್ಯಂತ ಪ್ರತಿಧ್ವನಿಸುತ್ತ, ಅದು ವಿಧಾನ ಮಂಡಲ ಚರ್ಚೆಗೂ ಕಾರಣವಾಗಿದ್ದು, ಮುಂದಿನ ಹೋರಾಟಗಳಿಗೆ ದಾರಿ ತೋರಿಸುವ ಶಕ್ತಿಯಾಗಿ ಉಳಿದಿದೆ.

ಇದನ್ನೂ ಓದಿ : ಬೀದರ್ | 2 ಎಕರೆ ನಿವೇಶನ ಮಂಜೂರು : ಅಲೆಮಾರಿಗಳ ಹೋರಾಟಕ್ಕೆ ಜಯ; ಧರಣಿ ಅಂತ್ಯ

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಸುಭಾಷ ಲಾಧಾ, ಸುಭಾಷ ಲಾಧಾ, ಸಿದ್ದಾರ್ಥ ಭೋಸ್ಲೆ, ಸಂತೋಷ ಸಿಂಧೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ಸುಂದರ ಮೇತ್ರೆ, ಅಲೆಮಾರಿ ಸಮುದಾಯದ ಶಶಿಕಲಾ, ನಾಗನಾಥ ವಾಕೋಡೆ ಸೇರಿದಂತೆ ಅಲೆಮಾರಿ ಜನಾಂಗದ ಮಹಿಳೆಯರು ಧರಣಿ ನೇತ್ರತ್ವ ವಹಿಸಿ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...