ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಶಾಲೆಗೆ ವಿಲೀನ ಮಾಡುತ್ತಿರುವುದನ್ನು ಖಂಡಿಸಿ ಎಐಡಿಎಸ್‌ಓ ನೇತ್ರತ್ವದಲ್ಲಿ ಯರಬಾಗ ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು.
ಯರಬಾಗ ಗ್ರಾಮದ ಸರ್ಕಾರಿ ಶಾಲೆಯ ಪೋಷಕರು, ಗ್ರಾಮಸ್ಥರು ಭಗತ್ ಸಿಂಗ್, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಭಾವಚಿತ್ರ ಹಾಗೂ ʼಸರ್ಕಾರಿ ಶಾಲೆ ಉಳಿಸಿ ಶಿಕ್ಷಣ ಬಲಪಡಿಸಿʼ, ʼಸಾರ್ವಜನಿಕ ಶಿಕ್ಷಣ ಉಳಿಯಲಿʼ ಎಂಬ ಭಿತ್ತಿಪತ್ರಗಳು ಕೈಯಲ್ಲಿ ಹಿಡಿದು ಸರ್ಕಾರದ ನಡೆ ಖಂಡಿಸುತ್ತ ಘೋಷಣೆ ಕೂಗುತ್ತಾ ಗ್ರಾಮ ಪಂಚಾಯಿತಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಧರಣಿ ನಡೆಸಿದರು.
ಎಐಡಿಎಸ್ಓ ಜಿಲ್ಲಾ ಸಂಚಾಲಕ ವೆಂಕಟೇಶ ದೇವದುರ್ಗ ಮಾತನಾಡಿ, ʼರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳ ಯೋಜನೆ ಎಂಬ ವಂಚನೆಯ ಮುಖವಾಡದ ಅಡಿಯಲ್ಲಿ, ಸರ್ಕಾರವು ರಾಜ್ಯದಾದ್ಯಂತ 40,000ಕ್ಕೂ ಹೆಚ್ಚು ಶಾಲೆಗಳನ್ನು ವಿಲೀನಗೊಳಿಸುತ್ತಿದೆ. ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ. ʼಗುಣಮಟ್ಟ ಮತ್ತು ಮಾದರಿ ಶಾಲೆಗಳು ಎಂಬ ಆಕರ್ಷಕ ಪದಗಳ ಹಿಂದೆ, ಉಚಿತ ಮತ್ತು ಸಾರ್ವತ್ರಿಕ ಶಿಕ್ಷಣದ ನಮ್ಮ ನವೋದಯ ಚಿಂತಕರು, ಕ್ರಾಂತಿಕಾರಿಗಳು ಗಳಿಸಿದ ಆಶಯವನ್ನು ನಾಶಪಡಿಸುವ ಒಂದು ನಿಷ್ಕರುಣ ಪ್ರಯತ್ನ ಅಡಗಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼಸರ್ಕಾರವು ಪ್ರತಿ ಹಳ್ಳಿಗೆ ಶಾಲಾ ಬಸ್ ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಈಗಾಗಲೇ ಎಷ್ಟೋ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಾಸ್ತವತೆ ಹೀಗಿರುವಾಗ, 6-7 ಕಿ.ಮಿ ದೂರದ ಶಾಲೆಯನ್ನು ತಲುಪಲಾಗದೆ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಈ ಯೋಜನೆಗೆ ಏಷಿಯನ್ ಡೆವಲಪಮೆಂಟ್ ಬ್ಯಾಂಕಿನಿಂದ ಈಗಾಗಲೇ 2 ಸಾವಿರ ಕೋಟಿ ಸಾಲ ಪಡೆದಿರುವ ಮತ್ತು 10 ಸಾವಿರ ಕೋಟಿ ಸಾಲ ಪಡೆಯಲಿರುವ ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆʼ ಎಂದರು.
ʼಸರ್ಕಾರಿ ಶಾಲೆಗಳು ಮುಚ್ಚೋದಿಲ್ಲ ಎಂಬ ಶಿಕ್ಷಣ ಮಂತ್ರಿಗಳ ಮಾತುಗಳು ಕೇವಲ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇನ್ನೊಂದು ಕಡೆ ಶಿಕ್ಷಣ ಇಲಾಖೆ ಜಾರಿ ಮಾಡುತ್ತಿರುವಂತಹ ವರದಿಗಳು ಸಂಪೂರ್ಣವಾಗಿ ಶಾಲೆಗಳನ್ನು ಅತಿ ವೇಗದಲ್ಲಿ ಮುಚ್ಚಲು ಮುನ್ನುಗುತ್ತಿದೆ. ಇದು ದುಡಿಯುವ ಜನರಿಗೆ ಸರ್ಕಾರಗಳು ಬಗೆಯುತ್ತಿರುವಂತಹ ದ್ರೋಹ. ರಾಜ್ಯ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಒಂದೇ ಒಂದು ಸರ್ಕಾರಿ ಶಾಲೆಯೂ ಕೂಡ ಮುಚ್ಚದಂತೆ ಲಿಖಿತ ರೂಪದಲ್ಲಿ ಆದೇಶ ಹೊರಡಿಸಬೇಕುʼ ಎಂದು ಆಗ್ರಹಿಸಿದರು.
ʼಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಶಾಲೆಗಳಿಗೆ ಸೂಕ್ತ ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಶಾಲೆಗಳನ್ನು ಮುಚ್ಚುತ್ತಿದೆ. ಬದಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ. ಕೆಪಿಎಸ್ ಶಾಲಾ ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿ ಪಾಲಕರು ಮತ್ತು ಎಸ್‌ಡಿಎಂಸಿ ಅವರ ಮೇಲೆ ಸಾರಿಗೆ ವ್ಯವಸ್ಥೆಯ ಹೊರೆ ಹೊರೆಸಲಾಗುತ್ತಿದೆ. ಪ್ರತಿಯೊಂದು ಶಾಲೆಯು ತನ್ನ ಆದಾಯದ ಮೂಲವನ್ನು ತಾವೇ ಹುಡುಕಿಕೊಳ್ಳಬೇಕು ಎಂದು ಹೇಳಿರುವುದು ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣದ ಆಶಯಗಳಿಗೆ ವಿರುದ್ಧವಾಗಿದೆ. ರಾಜ್ಯದ ಬಡ ರೈತ-ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಸಂಪೂರ್ಣವಾಗಿ ಕಸಿಯುವ ನೀತಿ ಕೂಡಲೇ ಕೈಬಿಡಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ʼನಮ್ಮೂರಿನಲ್ಲಿ ಆಸ್ಪತ್ರೆ, ಪೊಲೀಸ್ ಠಾಣೆಗಳಿಗಿಂತ ಶಾಲೆ ಅತ್ಯಂತ ಮಹತ್ವದಾಗಿದೆ. ಒಂದು ಮಗು ಶಿಕ್ಷಣದಿಂದ ವಂಚಿತರಾಗಬಾರದು. ಹೀಗಾಗಿ ನಮ್ಮೂರಲ್ಲಿ ಇರುವ ಮಂದಿರ ಕಡಿಮೆ ಆದರೂ ಚಿಂತೆಯಿಲ್ಲ ಹೊರತು, ನಮ್ಮೂರಿನ ಶಾಲೆ ಯಾವುದೇ ಕಾರಣಕ್ಕೂ ಮುಚ್ಚಬಾರದುʼ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : ಔರಾದ್ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಮನ್ಮಥ ಡೋಳೆ ಆಯ್ಕೆ
ಸಂಘಟನಕಾರರಾದ ಬಾಬು ಪವರ್ ಸೇರಿದಂತೆ ಗ್ರಾಮಸ್ಥರಾದ ವೆಂಕಟ್ ರೇಡ್ಡಿ, ಹಣಮಂತ ಗೌಣಿ, ಉಷಾ ಮದರಗಾಂವಕರ್, ಅಂಜಲಿ ಮದರಗಾಂವಕರ್, ಮಲ್ಲಮ್ಮ, ಮಾಲಾಶ್ರೀ ಮಂಠಾಳ ಸೇರಿ ನೂರಾರು ಜನ ಉಪಸ್ಥಿತರಿದ್ದರು.





