ಇದೇ ತಿಂಗಳ ಫೆ.15ರಿಂದ ಮಾರ್ಚ್ 1ರವರೆಗೆ ಕಲಬುರಗಿ ಜಿಲ್ಲೆಯ ಸುಕ್ಷೇತ್ರ ಬಿಜನಳ್ಳಿಯಿಂದ ಶರಣಭೂಮಿ ಬಸವಕಲ್ಯಾಣದವರೆಗೆ ನಡೆಯುವ ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ತಿಳಿಸಿದ್ದಾರೆ.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶರಣರು ಮಾಡಿದ ತ್ಯಾಗ–ಬಲಿದಾನಗಳ ಸಂದೇಶವನ್ನು ಮನೆ-ಮನಕ್ಕೆ ತಲುಪಿಸುವ ಉದ್ದೇಶದಿಂದ ಈ ಯಾತ್ರೆ ಆಯೋಜಿಸಲಾಗಿದೆ’ ಎಂದರು.
‘ವಿದ್ಯಾರ್ಥಿಗಳೇ ನಾಳಿನ ಪ್ರಬುದ್ಧ ನಾಗರಿಕರು. ಆದ್ದರಿಂದ ಅವರಿಗೆ ದೇಶಭಕ್ತಿ, ಸಂಸ್ಕಾರ, ಸಂಸ್ಕೃತಿ ಹಾಗೂ ಉನ್ನತ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ’ ಎಂದು ಹೇಳಿದರು.
‘ಕೃಷಿ, ಪರಿಸರ, ಆರೋಗ್ಯ, ಸೌಹಾರ್ದತೆ, ಭಾವೈಕ್ಯತೆ, ಸೇವೆ ಮತ್ತು ಸಹಕಾರ ಕುರಿತಂತೆ ಉಪನ್ಯಾಸಗಳು ನಡೆಯಲಿವೆ. ‘ದುರ್ಗುಣ–ದುಶ್ಚಟಗಳ ಭಿಕ್ಷೆ, ಸದ್ಗುಣ–ಸನ್ನಡತೆಯ ದೀಕ್ಷೆ’ ಎಂಬ ಸಂಕಲ್ಪದೊಂದಿಗೆ ಸಮಾಜ ಪರಿವರ್ತನೆಗೆ ಕರೆ ನೀಡಲಾಗುವುದು’ ಎಂದು ಹೇಳಿದರು.
‘ಶರಣರು ನಮಗೆ ಕೊಟ್ಟ ಅಮೂಲ್ಯ ಸಂಪತ್ತು ವಚನಗಳು. ಅವುಗಳನ್ನು ಜನಸಾಮಾನ್ಯರ ಕೈಗೆ ತಲುಪಿಸುವ ಉದ್ದೇಶದಿಂದ ‘ಬಸವಣ್ಣನವರ ವಚನ ಸುಧೆ’ ಎಂಬ 20 ಸಾವಿರ ಕಿರುಹೊತ್ತಿಗೆಗಳನ್ನು ಉಚಿತವಾಗಿ ವಿತರಿಸಲಾಗುವುದು. ಯಾತ್ರೆಯ ಮುಖ್ಯ ಉದ್ದೇಶಗಳಲ್ಲಿ ಬಿಜನಳ್ಳಿಯ ಅಭಿವೃದ್ಧಿ ಹಾಗೂ ತ್ರಿಪುರಾಂತ ಕೆರೆಯ ಜೀರ್ಣೋದ್ಧಾರವೂ ಸೇರಿದೆ’ ಎಂದು ಹೇಳಿದರು.

ಪಂಡಿತ ಬಾಳುರೆ ಮಾತನಾಡಿ, ‘ಯಾತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ 11ಕ್ಕೆ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ ನಡೆಯಲಿದೆ. 100 ವಚನಗಳನ್ನು ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ₹1000 ಬಹುಮಾನ ನೀಡಲಾಗುವುದು. ಸಂಜೆ 5ಕ್ಕೆ ಗ್ರಾಮದಲ್ಲಿ ಕಲ್ಯಾಣ ನಡಿಗೆ, ಸಂಜೆ 6ಕ್ಕೆ ಸಾರ್ವಜನಿಕ ಉಪನ್ಯಾಸ, ರಾತ್ರಿ 8ಕ್ಕೆ ‘ಕಲ್ಯಾಣ ಕ್ರಾಂತಿ’ ನಾಟಕ ಪ್ರದರ್ಶನ ನಡೆಯಲಿದೆ’ ಎಂದರು.
‘ಫೆ. 15ರಂದು ಬೆಳಿಗ್ಗೆ 11ಗಂಟೆಗೆ ಬಿಜನಳ್ಳಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಕಲ್ಯಾಣ ನಡಿಗೆ–ಹರಳಯ್ಯ ಜ್ಯೋತಿಯಾತ್ರೆಯ ಉದ್ಘಾಟನೆ ನಡೆಯಲಿದೆ. ಮಾರ್ಚ್ 1, 2026ರಂದು ಬಸವಕಲ್ಯಾಣದಲ್ಲಿ ಬೆಳಿಗ್ಗೆ 10:30ರಿಂದ ಸಂಜೆ 6ರವರೆಗೆ ಸಮಾರೋಪ ಮತ್ತು ಶರಣ ಸಂಸತ್ ಸಮಾವೇಶ ನಡೆಯಲಿದೆ’ ಎಂದರು.
ರಾಜೇಂದ್ರ ಜೊನ್ನಿಕೇರಿ ಮಾತನಾಡಿ, ‘ಎಲ್ಲ ಶರಣ ಬಂಧುಗಳು ಬಿಳಿ ಬಟ್ಟೆ ಧರಿಸಿ, ಮೊಬೈಲ್‌ಗೆ ಒಂದು ದಿನ ರಜೆ ನೀಡಿ ಭಕ್ತಿಯಿಂದ ಭಾಗವಹಿಸಬೇಕು. ಶಿಸ್ತು, ಸಮಯಪಾಲನೆ, ಸಂಯಮ ಮತ್ತು ಸಹಕಾರವೇ ಕಾರ್ಯಕ್ರಮದ ಯಶಸ್ಸಿನ ಮೂಲ. ಇದು ಐತಿಹಾಸಿಕ ಕ್ಷಣ’ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಗಂಡನ ಮನೆಯವರ ಕಿರುಕುಳ : 11 ತಿಂಗಳ ಮಗು ಬಿಟ್ಟು ಮಹಿಳೆ ಆತ್ಮಹತ್ಯೆ
ಪತ್ರಿಕಾಗೋಷ್ಠಿಯಲ್ಲಿ ಯಾತ್ರೆಯ ಸಂಘಟಕರಾದ ಮಲ್ಲಿಕಾರ್ಜುನ ಪಂಚಾಕ್ಷರಿ, ಧನರಾಜ ಭುಯ್ಯಾ, ಮನೋಜಕುಮಾರ ಬುಕ್ಕಾ, ಬಸವರಾಜ ಪಾಟೀಲ, ಸಿದ್ದಯ್ಯ ಕಾವಡಿ ಮತ್ತಿತರರು ಹಾಜರಿದ್ದರು.





