ಹುಮನಾಬಾದ್ ತಾಲ್ಲೂಕಿನ ಮೊಳಕೇರಾ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಸ್ಪೋಟಕ್ಕೆ ಶೈನಿಂಗ್ ಕೆಮಿಕಲ್ ಕಾರಣ ಎಂಬ ಶಂಕೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹೇಳಿದ್ದಾರೆ.
ಮೊಳಕೇರಾ ಗ್ರಾಮದಲ್ಲಿ ನಿಗೂಢವಾಗಿ ನಡೆದ ದುರ್ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಪೋಟದಲ್ಲಿ ಒಟ್ಟು 8 ಜನರಿಗೆ ಗಾಯಗೊಂಡಿದ್ದು, ಅವರಲ್ಲಿ 6 ಜನ ಪುಟ್ಟ ಮಕ್ಕಳಿದ್ದಾರೆ. ಇಬ್ಬರು ವಯಸ್ಕರಿದ್ದಾರೆ. ಗಾಯಗೊಂಡ 8 ಜನರಲ್ಲಿ 2 ಮಕ್ಕಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ನಾಲ್ಕು ಜನ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಗಾಯಗೊಂಡ ಉಳಿದಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಹಾಗೂ ಸೋಲಾಪುರಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಘಟನೆ ವಿಷಯ ತಿಳಿದ ಬಳಿಕ ಸ್ಥಳಕ್ಕೆ ಪೊಲೀಸ್ ಹಾಗೂ ಫಾರೆನ್ಸಿಕ್ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗ್ರಾಮದಲ್ಲಿ ಕೆಲ ಮನೆ ಮಾಲೀಕರು ಪೇಂಟಿಂಗ್ ಶೈನಿಂಗ್‌ಗಾಗಿ ಫೈಬರ್ ಡೋಸ್ ಸಂಬಂಧಿತ ಕೆಲಸಗಳನ್ನು ಮಾಡುತ್ತಿರುವುದು ಕಂಡು ಬಂದಿದೆ. ಮನೆಗಳಲ್ಲಿ ಪೇಂಟ್ಸ್ ಹಾಗೂ ವಿವಿಧ ಕೆಮಿಕಲ್ಸ್ ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಲಾಗಿದೆ. ಅವಧಿ ಮೀರಿದ ಕೆಮಿಕಲ್‌ಗಳನ್ನು ಸಂಗ್ರಹಿಸಿಟ್ಟ ಕಾರಣ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಫಾರೆನ್ಸಿಕ್ ತಂಡ ಶಂಕೆ ವ್ಯಕ್ತಪಡಿಸಿದೆʼ ಎಂದು ಹೇಳಿದರು.
ಕಳೆದ ಆರು ತಿಂಗಳಲ್ಲಿ ಐದಾರು ಸಲ ಈ ರೀತಿ ಆಕಸ್ಮಿಕ ಸ್ಪೋಟ ಸಂಭವಿಸಿದೆ. ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಮತ್ತೊಮ್ಮೆ ದುರ್ಘಟನೆ ನಡೆದಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂಬುದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಡಿಸಿ ಶಿಲ್ಪಾ ಶರ್ಮಾ
ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಆಕಸ್ಮಿಕವಾಗಿ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಹೈದರಾಬಾದ್‌ನ ಮಲ್ಲರೆಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಬ್ಬಾರ್ ಎಂಬುವವರನ್ನು ಶನಿವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.

ಮೊಳಕೇರಾ ಗ್ರಾಮಕ್ಕೆ ನಾಳೆ ಸಚಿವ ಈಶ್ವರ ಖಂಡ್ರೆ ಭೇಟಿ
ಆಕಸ್ಮಿಕ ಸ್ಫೋಟದಿಂದ ಎಂಟು ಜನರು ಗಾಯಗೊಂಡಿರುವ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮಕ್ಕೆ ನಾಳೆ ಬೆಳಿಗ್ಗೆ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





