ಫ್ಯಾಮಿಲಿ ಪ್ಲಾನಿಂಗ್ ಶಸ್ತ್ರಚಿಕಿತ್ಸೆ ನಂತರ ಅನಾರೋಗ್ಯಕ್ಕೀಡಾಗಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೀದರ್ ನಗರದ ಫ್ಯಾಮಲಿ ಪ್ಲಾನಿಂಗ್ ಅಸೋಷಿಯನ್ ಆಫ್ ಇಂಡಿಯಾ (FPA) ಆಸ್ಪತ್ರೆಯಲ್ಲಿ ನಡೆದಿದೆ.
ಬೀದರ್ ತಾಲೂಕಿನ ಚಿಮಕೋಡ ಗ್ರಾಮದ ಮೀನಾಕ್ಷಿ ಬಸವರಾಜ (22) ಮೃತ ಮಹಿಳೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಒಂದು ತಿಂಗಳ ಹಿಂದೆ ಮೀನಾಕ್ಷಿ ಅವರ ಹೆರಿಗೆಯಾಗಿದೆ. ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದರು. ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಸೋಮವಾರ (ಜ.19)ರಂದು ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮಂಗಳವಾರ ಬೆಳಿಗ್ಗೆ ಆರೋಗ್ಯವಾಗಿಯೇ ಇದ್ದರು. ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು, ಆ ವೇಳೆ ವೈದ್ಯರು ಮಹಿಳೆಗೆ ತುರ್ತು ಚಿಕಿತ್ಸೆ ನೀಡದ ಪರಿಣಾಮ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಬಳಿಕ ಆಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ಕರೆಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ : ಔರಾದ್ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ : ಲಾಂಛನ ಬಿಡುಗಡೆ
ಮೃತ ಮಹಿಳೆಗೆ ಒಂದು ಮಗು ಸೇರಿ ನಾಲ್ಕು ಜನ ಮಕ್ಕಳಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಬಾಣಂತಿ ಮಹಿಳೆ ಸಾವಿಗೆ ವ್ಯೆದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಆಸ್ಪತ್ರೆಯಲ್ಲಿಈ ಹಿಂದೆಯೂ ಇಂತಹ ಘಟನೆಗಳು ನಡೆದಿದವು. ಕೂಡಲೇ ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು. ಕೂಡಲೇ ತಪ್ಪಿಸ್ಥರ ವೈದ್ಯರ ವಿರುದ್ಧ ದೂರು ದಾಖಲಿಸಿ, ಬಂಧಿಸಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕುಟುಂಸ್ಥರು, ವಿವಿಧ ಸಂಘಟನೆಗಳ ಪ್ರಮುಖರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಘೋಷಣೆ ಕೂಗಿದರು.





