“ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಾಜ್ಯಾದ್ಯಂತ ಆಯೋಜಿಸಿರುವ ಬಸವ ಸಂಸ್ಕೃತಿ ಅಭಿಯಾನವು ಸೋಮವಾರ ದಾವಣಗೆರೆಯಲ್ಲಿ ನಡೆಯುತ್ತಿದ್ದು ಇದರ ಅಂಗವಾಗಿ ದಾವಣಗೆರೆ ನಗರದ ಎವಿಕೆ ರಸ್ತೆಯ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವಚನ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ದೇಗುಲ, ವಚನ ಮತ್ತು ಕಾಯಕ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ
ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು “ಶರಣರು ಮನುಷ್ಯ ಎನ್ನುವುದನ್ನು ಬಿಟ್ಟು ‘ಭಕ್ತ ಮತ್ತು ಭವಿ’ ಎನ್ನುವ ಪದಗಳನ್ನು ಬಳಸುತ್ತಾರೆ. ಭಕ್ತ ಎಂದರೆ ಸದಾಚಾರಿ, ಭವಿ ಎಂದರೆ ದುರಾಚಾರಿ ಎನ್ನುವುದೇ ಇದರ ಅರ್ಥ. ಬಸವಣ್ಣ ದೇವಾಲಯ ಗುಡಿ ಗೋಪುರಗಳನ್ನು ಸಂಪೂರ್ಣವಾಗಿ ನಿರಾಕರಿಸಿದರು. ಎಲ್ಲರಿಗೂ ದೇಹವೇ ದೇವಾಲಯ ಎಂದು ತಿಳಿಸಿ ಇಷ್ಟಲಿಂಗ ಪ್ರಸಾದಿಸಿದರು. ಇದರಿಂದಾಗಿ ಎಲ್ಲಾ ವರ್ಗದ ಜನತೆ ದೇವರನ್ನು ಮುಟ್ಟುವ ಅವಕಾಶವನ್ನು ಮಾಡಿಕೊಟ್ಟವರು ಬಸವಾದಿ ಶರಣರು. ಕಾಯಕದಲ್ಲಿ ಭೇದಭಾವ ಮೇಲು ಕೀಳು ಇಲ್ಲ ಕಾಯಕವನ್ನು ಅರ್ಥ ಮಾಡಿಕೊಂಡಲ್ಲಿ ಅದರ ಮಹತ್ವವನ್ನು ತಿಳಿದುಕೊಂಡಲ್ಲಿ ಕಾಯಕದಲ್ಲಿರುವ ಮೇಲುಕೀಳು ಕಳೆದುಹೋಗುತ್ತದೆ. ಈ ಕಾಯಕದ ಮಹತ್ವವನ್ನು ಬಸವಾದಿ ಶರಣರು ಅರ್ಥ ಮಾಡಿಕೊಂಡಿದ್ದರು” ಎಂದು ವಿವರಿಸಿದರು.

ಬೀದರ್ ಬಾಲ್ಕಿ ಸಂಸ್ಥಾನದ ಬಸವಲಿಂಗಪಟ್ಟ ದೇವರು ವಿದ್ಯಾರ್ಥಿಗಳ ಮೌಡ್ಯ, ಮೂಡನಂಬಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ “ಸಾವಿರಾರು ವರ್ಷಗಳಿಂದ ವಚನ ಸಾಹಿತ್ಯ ಕಣ್ಮರೆಯಾಗಿತ್ತು. ಇತ್ತೀಚೆಗೆ ಒಂದು ನೂರು ವರ್ಷಗಳಲ್ಲಿ ಹಳಕಟ್ಟಿಯವರಿಂದ ಹಿಡಿದು ಅನೇಕರು ಸೇರಿ ಅದನ್ನು ಹೊರತರಲಾಗಿದೆ. ವಚನಗಳನ್ನು ಎಲ್ಲರಲ್ಲೂ ಭಿತ್ತಿ ಕುಟುಂಬಗಳಲ್ಲಿ ಬಸವಾದಿ ಶರಣರ ವಿಚಾರಧಾರೆಗಳನ್ನು ಮೂಡಿಸಿ ಮೌಢ್ಯತೆ ಕಳೆಯುವುದು ಬಸವಾದಿ ಶರಣರ ಉದ್ದೇಶವಾಗಿತ್ತು. ಇದಕ್ಕಾಗಿ ವಚನ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ, ಅಧ್ಯಯನ ಮಾಡಬೇಕಾಗಿದೆ. ಇದರ ಅಧ್ಯಯನ ಹೆಚ್ಚಾದಂತೆ ಮೂಡನಂಬಿಕೆ ಮತ್ತು ಮೌಢ್ಯತೆ ಕಳೆದು ಹೋಗಲಿದೆ” ಎಂದು ತಿಳಿಸಿದರು.

“ಮನುಕುಲದ ಎಲ್ಲಾ ವ್ಯಕ್ತಿಗಳಲ್ಲಿ ದೇವರಿದ್ದಾನೆ. ಮನುಷ್ಯರೆಲ್ಲರೂ ಒಂದೇ, ದೇವರೊಬ್ಬನೇ ತಂದೆ ಎಂದು ಶರಣರು ಸಾರಿದ್ದಾರೆ. ಸಮ ಸಮಾಜದ ಕನಸು ಶರಣದಿಂದ ಅಂದು ಸಾಕಾರಗೊಂಡಿತ್ತು. ಇಂದಿಗೂ ಕೂಡ ಬಸವ ಪರಂಪರೆಯ ಮಠಗಳಲ್ಲಿ ಸಾಕಾರಗೊಳ್ಳುತ್ತಿದೆ. ಎಲ್ಲ ವರ್ಗದ ಜನ ಬಸವಪರ ಮಠಗಳಲ್ಲಿ ಇದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹ
ಕಾರ್ಯಕ್ರಮದಲ್ಲಿ ಡಂಬಳ ಮಠದ ತೋಂಟದ ಸಿದ್ದರಾಮ ಶರಣರು, ದಾವಣಗೆರೆ ವಿರಕ್ತಮಠದ ಬಸವ ಪ್ರಭು ಶರಣರು, ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಶರಣರು ಸೇರಿದಂತೆ ವಿವಿಧ ಮಠಗಳ ಶರಣರು, ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕುರ್ಕಿ, ಲಿಂಗರಾಜು, ನಿವೃತ್ತ ಪ್ರಾಧ್ಯಾಪಕರಾದ ಪ್ರಭಾಕರ್, ಸಹ ಪ್ರಾಧ್ಯಾಪಕರಾದ ಅನಿತಾ ದೊಡ್ಡಗೌಡರ್, ಎವಿಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಮಲ ಸೇರಿದಂತೆ 20ಕ್ಕೂ ಹೆಚ್ಚು ಬಸವಪರ ಮಠಗಳ ಶರಣರು ಮತ್ತು ಬಸವಾಭಿಮಾನಿಗಳು, ಕದಳಿ ಮಹಿಳಾ ವೇದಿಕೆಯ ಶರಣರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು





