ಔರಾದ್ ಪಟ್ಟಣದಲ್ಲಿ ಫೆ.4ರಂದು ನಡೆಯಲಿರುವ ಔರಾದ್ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಹೆಸರು ಕೊನೆಗೂ ಅಂತಿಮಗೊಂಡಿದೆ. ಹಿರಿಯ ಸಾಹಿತಿ, ಪ್ರಾಚಾರ್ಯ ಡಾ.ಮನ್ಮಥ ಡೋಳೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ಬುಧವಾರ ಸಂಜೆ ತಾಲೂಕು ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಮನ್ಮಥ ಡೋಳೆ ಅವರು ಆಯ್ಕೆಯಾಗಿದ್ದಾರೆ ಎಂದು ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ತಿಳಿಸಿದ್ದಾರೆ.
ಈ ಹಿಂದೆ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಸಾಹಿತಿಗಳು, ಸಾಹಿತ್ಯೇತರ ಕ್ಷೇತ್ರಗಳ ಸಾಧಕರ ಹೆಸರು ಪ್ರಸ್ತಾಪವಾಗಿತ್ತು. ಸಾಹಿತಿ ಮನ್ಮಥ ಡೋಳೆ ಅವರ ಹೆಸರು ಅಂತಿಮವಾಗಿದೆ.
ಡಾ.ಮನ್ಮಥ ಡೋಳೆ ಪರಿಚಯ :
ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಮನ್ಮಥ ಡೋಳೆ ಅವರು ಔರಾದ್ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ 1ನೇ ಜೂನ್ 1970ರಲ್ಲಿ ಜನಿಸಿದ್ದಾರೆ. ಎಂಎ, ಎಂಫಿಲ್, ಪಿಎಚ್‌ಡಿ ಪೂರೈಸಿದ್ದು, ಕಳೆದ 2 ದಶಕದಿಂದ ಔರಾದ್ ಪಟ್ಟಣದ ನಾಲಂದಾ ಪದವಿ ಪೂರ್ವ ಕಾಲೇಜಿನ (ಅನುದಾನಿತ) ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2013ರಲ್ಲಿ ʼಮಿಡಿ ಮಾವುʼ ಚುಟುಕು ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು, ಅನಂತರ ʼಬೀದರ್ ಜಿಲ್ಲಾ ದಲಿತ ಸಿರಿʼ, ʼಬಿಡಿ ಬರಹಗಳ ಪ್ರಬಂಧ ಮಾಲೆʼ ಪ್ರಕಟಿತ ಕೃತಿಗಳು. ಬಸವೇಶ್ವರ ಮತ್ತು ʼಅಂಬೇಡ್ಕರ್ ಅವರ ಚಿಂತನೆಯ ನೆಲೆ ಮತ್ತು ನಿಲುವುಗಳುʼ ಅವರ ಸಂಶೋಧನಾ ಗ್ರಂಥವಾಗಿದೆ.

ಈ ಹಿಂದೆ ಪತ್ರಕರ್ತರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು ಘಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಕನ್ನಡ ನಾಡು-ನುಡಿ, ಭಾಷಾ ಬೆಳವಣಿಗೆಗೆ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. 16 ವರ್ಷಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ದಲಿತ-ಬಂಡಾಯ ಸಾಹಿತ್ಯಕ್ಕಾಗಿ ಶ್ರಮಿಸಿದ್ದಾರೆ. ಬೀದರ್ ಜಿಲ್ಲಾ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಸಂಘಟಿಸಿದ ಕೀರ್ತಿ ಅವರದ್ದಾಗಿದೆ. ಸದ್ಯ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ : ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ
ಕಳೆದ ಮೂರು ದಶಕದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಗುರುತಿಸಿ ಸಮ್ಮೇಳನ ಸರ್ವಾಧ್ಯಕ್ಷನಾಗಿ ಆಯ್ಕೆ ಮಾಡಿದ್ದು ಅತ್ಯಂತ ಸಂತೋಷ ತಂದಿದೆ. ನನ್ನನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳಿಗೆ, ಕನ್ನಡ ಸಾಹಿತ್ಯಾಸಕ್ತರಿಗೆ, ಸಂಘಟಕರಿಗೆ ಕೃತಜ್ಞನಾಗಿದ್ದೇನೆʼ ಎಂದು ಮನ್ಮಥ ಡೋಳೆ ಅವರು ʼಈದಿನʼ ಜೊತೆ ಮಾತನಾಡಿ ತಿಳಿಸಿದ್ದಾರೆ.
ಇಂದಿನ ಸಭೆಯಲ್ಲಿ ಪ್ರಮುಖರಾದ ಡಾ.ವೈಜಿನಾಥ ಬುಟ್ಟೆ, ಗುರುನಾಥ ದೇಶಮುಖ, ಜಗನ್ನಾಥ ದೇಶಮುಖ, ಮಲ್ಲಿಕಾರ್ಜುನ ಟಂಕಸಾಲೆ, ಅಮೃತರಾವ ಬಿರಾದಾರ, ವಿರೇಶ ಅಲಮಾಜೆ, ಗೋವಿಂದ ಪಾಟೀಲ್, ಶರಣಬಸವ ಸಾವಳೆ, ಮಹಾನಂದಾ ಎಂಡೆ, ಮಾರುತಿ ಚವ್ಹಾಣ, ವಿರೇಶ ಮೀಸೆ, ಕೈಲಾಸಪತಿ ಕೇದಾರೆ, ಶಮಶೊದ್ದಿನ್ ಮುಲ್ಲಾ, ಸಂದೀಪ ಪಾಟೀಲ್, ಅಶೋಕ ಶೆಂಬೆಳ್ಳೆ, ಅಂಬಾದಾಸ ನಳಗೆ, ಧನರಾಜ ಮಾನೆ, ಶಿವಕುಮಾರ ಪಾಟೀಲ್, ಝರೆಪ್ಪ ಬಿರಾದಾರ, ಗುರುನಾಥರೆಡ್ಡಿ ಕೌಡಾಳೆ, ಜ್ಞಾನೇಶ್ವರ ವಾಡೇಕರ್, ಎಂಡಿ ಸಾಜೀದ್, ಜಗನ್ನಾಥ ಬಿರಾದಾರ ಸೇರಿದಂತೆ ಇನ್ನಿತರರಿದ್ದರು.





