ಕರ್ನಾಟಕ ಏಕೀಕರಣ ಚಳುವಳಿ ಮತ್ತು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಮಹಾನ್ ವ್ಯಕ್ತಿಗಳಾದ ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಅವರ ಹೆಸರಿನಲ್ಲಿ ಪ್ರತ್ಯೇಕ ಟ್ರಸ್ಟ್‌ಗಳನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕನ್ನಡ ನಾಡು-ನುಡಿಗಾಗಿ ಬದುಕಿನುದ್ದಕ್ಕೂ ಹೋರಾಡಿದ ಈ ಇಬ್ಬರು ಮಹನೀಯರ ಹೆಸರಿನಲ್ಲಿ ಟ್ರಸ್ಟ್ ರಚಿಸಿ, ಗಡಿ ಭಾಗದಲ್ಲಿ ಅವರ ಆಶಯದಂತೆ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ದಶಕಗಳ ಬೇಡಿಕೆ 2023ರಲ್ಲಿ ಮುನ್ನೆಲೆಗೆ ಬಂದಿತು. ಪ್ರಸ್ತಾವನೆ ಸಲ್ಲಿಕೆಯಾಗಿ ಎರಡು ವರ್ಷಗಳ ಬಳಿಕ ಕೊನೆಗೂ ಸರ್ಕಾರ ಟ್ರಸ್ಟ್‌ಗಳು ರಚಿಸಿದೆ.
2023ರ ನವೆಂಬರ್ 7ರಂದು ಬೀದರ್ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ್ ರಚನೆಗೆ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಬೀದರ್ ಜಿಲ್ಲಾಡಳಿತವು 2023ರ ಡಿಸೆಂಬರ್ 5ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಇಬ್ಬರ ಹೆಸರಿನಲ್ಲಿ ಟ್ರಸ್ಟ್ ರಚಿಸುವ ಸಂಬಂಧ ಪ್ರಸ್ತಾವ ಸಲ್ಲಿಸಿತ್ತು. 2025-26ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಹೊಸದಾಗಿ ರಚನೆಯಾಗುವ ಟ್ರಸ್ಟ್‌ಗಳಿಗೆ ₹35 ಲಕ್ಷಗಳನ್ನು ಅವಕಾಶ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಬೀದರ್ ಜಿಲ್ಲೆಯಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಅವರ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ರಚಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಸಂಸ್ಕೃತಿ) ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ 2026ರ ಜ.1ರಂದು ಆದೇಶ ಹೊರಡಿಸಿದ್ದಾರೆ.
ಹಿರಿಯ ಸಾಹಿತಿ ಡಾ.ಬಸವರಾಜ ಬಲ್ಲೂರ ಮಾತನಾಡಿ, ʼಬೇರೆ ಭಾಗದಲ್ಲಿ ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಬಸವರಾಜ ಕಟ್ಟಿಮನಿ ಹೀಗೆ ಮಹನೀಯರ ಹೆಸರಿನಲ್ಲಿ ಟ್ರಸ್ಟ್, ಪ್ರತಿಷ್ಠಾನಗಳಿವೆ. ಆದರೆ, ಕನ್ನಡ ನಾಡು-ನುಡಿ, ಭಾಷೆಗಾಗಿ ಶ್ರಮಿಸಿದ ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಹೆಸರಿನಲ್ಲಿ ಟ್ರಸ್ಟ್ ಇರಲಿಲ್ಲ. ಜಿಲ್ಲೆಯ ಸಾಹಿತ್ಯಾಸಕ್ತರ ಬೇಡಿಕೆಗೆ ಸರ್ಕಾರ ಇದೀಗ ಸ್ಪಂದಿಸಿ ಟ್ರಸ್ಟ್‌ಗಳು ರಚಿಸಿದ್ದು ಅತ್ಯಂತ ಸಂತಸ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಲ್ಲ ಅಧಿಕಾರಿಗಳ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಇಬ್ಬರು ಮಹನೀಯರ ಹೆಸರಿನಲ್ಲಿ ಟ್ರಸ್ಟ್ ಗಳು ರಚನೆಯಾಗಿವೆ. ಇದು ಜಿಲ್ಲೆಯ ಎಲ್ಲಾ ಕನ್ನಡಪರ ಚಿಂತಕರಿಗೆ, ಸಾಹಿತ್ಯಾಸಕ್ತರಿಗೆ ಹೆಮ್ಮೆ ಮೂಡಿಸಿದೆʼ ಎಂದು ಹೇಳಿದರು.
ಲೇಖಕ ಭೀಮಾಶಂಕರ ಬಿರಾದಾರ ಅವರು ಮಾತನಾಡಿ, ʼಡಾ.ಜಯದೇವಿ ತಾಯಿ ಲಿಗಾಡೆ ಅವರು ಸ್ವಾತಂತ್ರ್ಯ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ತೊಡಗಿಸಿಕೊಂಡವರು. ಕನ್ನಡ ಮತ್ತು ಮರಾಠಿಯನ್ನು ಭಾಷಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬಾಂಧವ್ಯ ಬೆಸೆದಿದ್ದರು. ಮಹಿಳಾ ಶಿಕ್ಷಣ ಮತ್ತು ಸ್ವಾವಲಂಬನೆಗೆ ಆದ್ಯತೆ ನೀಡಿದ್ದರು. ಕನ್ನಡ ಶಾಲೆಗಳನ್ನು ಆರಂಭಿಸಿ ಕನ್ನಡ ಮಾಧ್ಯಮ ಶಿಕ್ಷಣ ಮುನ್ನೆಲೆಗೆ ತಂದಿದ್ದರು. ಅವರು ಬಹುವಾಗಿ ಪ್ರೀತಿಸುವ ವಚನ ಸಾಹಿತ್ಯದ ಪ್ರಸರಣ ಕನ್ನಡ ಕಲಿಕೆಯ ಮೂಲಕ ಸಾಧ್ಯವೆಂದು ನಂಬಿದ್ದರು. ಹಾಗೆಯೇ ಕನ್ನಡ ಜಗತ್ತು ಕಟ್ಟಲು ತಮ್ಮ ಇಡೀ ಬದುಕು ಮುಡಿಪಾಗಿಟ್ಟಿದ್ದರು. ಜಿಲ್ಲೆಯಲ್ಲಿ ಮಹನೀಯರ ಹೆಸರಿನಲ್ಲಿ ಯಾವುದೇ ಟ್ರಸ್ಟ್, ಪ್ರತಿಷ್ಠಾನಗಳು ಇಲ್ಲದಿರುವ ಕಾಲಕ್ಕೆ ಜಯದೇವಿ ತಾಯಿ ಹಾಗೂ ಪ್ರಭುರಾವ ಕಂಬಳಿವಾಲೆ ಟ್ರಸ್ಟ್‌ಗಳನ್ನು ರಚಿಸಿ ಸರ್ಕಾರ ಆದೇಶಿಸಿದ್ದು ಎಲ್ಲ ಸಾಹಿತ್ಯಾಸಕ್ತರಲ್ಲಿ ಹರ್ಷ ಮೂಡಿಸಿದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ನಲ್ಲಿ 2025ರ ಜೂನ್ 29ರಂದು ʼಪ್ರಭುರಾವ ಕಂಬಳಿವಾಲೆ, ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನ ರಚನೆ ನನೆಗುದಿಗೆ : ಬೇಕಿದೆ ಇಚ್ಚಾಶಕ್ತಿ!ʼ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದು ಇಲ್ಲಿ ಸ್ಮರಿಸಬಹುದು.





