ಹುಮನಾಬಾದ ಪಟ್ಟಣ ಹೊರವಲಯದ ಮಾಣಿಕ ಪ್ರಭು ಸಂಸ್ಥಾನದಲ್ಲಿ ಗಾನಯೋಗಿ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ 112ನೇ ಜಯಂತಿ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ರೇವಣಸಿದ್ದಯ್ಯ ಹಿರೇಮಠ ಅವರು ಮಾತನಾಡಿ, ʼಅರಮನೆಗಳಲ್ಲಿ ಸೀಮಿತವಾಗಿದ್ದ ಸಂಗೀತವನ್ನು ಗುರುಮನೆಗೆ ತಂದು ಮನೆ-ಮನೆಗೂ ತಲುಪಿಸಿದ ಮಹಾನ್ ವ್ಯಕ್ತಿ ಪುಟ್ಟರಾಜ ಕವಿ ಗವಾಯಿಗಳು. ಅಂಧರು, ಅನಾಥರು ಹಾಗೂ ದೀನದಲಿತರ ಬದುಕಿಗೆ ಆಶಾಕಿರಣವಾಗಿ ಅನ್ನ, ವಿದ್ಯೆ ಮತ್ತು ವಸತಿ ಒದಗಿಸಿ ಸಮಾಜ ಸೇವೆಗೈದ ಮಹಾನ್ ಚೇತನರುʼ ಎಂದು ನುಡಿದರು.
ಸಾಹಿತಿ ಮಾಣಿಕ ನೇಳಗಿ ಮಾತನಾಡಿ, ʼಪುಟ್ಟರಾಜ ಕವಿ ಗವಾಯಿಗಳು ಕೇವಲ ವ್ಯಕ್ತಿಯಲ್ಲ, ಅವರು ಸಂಗೀತ ಮತ್ತು ಸಾಹಿತ್ಯ ಲೋಕದ ಮಹಾನ್ ಶಕ್ತಿಯಾಗಿದ್ದಾರೆ. ಗವಾಯಿಗಳ ಸಂಗೀತ ಸೇವೆ ಸಮಾಜಕ್ಕೆ ಅನನ್ಯವಾಗಿದೆʼ ಎಂದರು.
ಸಂಸ್ಥಾನದ ಆನಂದರಾಜ ಮಾಣಿಕ ಪ್ರಭುಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಕುಪೇಂದ್ರ ಹುಲಸೂರ ವಹಿಸಿದ್ದರು. ಪಿಎಸ್‌ಐ ಸುರೇಶ ಚೌವ್ಹಾಣ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಪಂಚಾಕ್ಷರ ಪ್ರಶಸ್ತಿ ಪುರಸ್ಕೃತ ಮಡಿವಾಳಯ್ಯ ಸಾಲಿ ಅಲ್ಲೂರು ಹಾಗೂ ಪುಟ್ಟರಾಜ ಪ್ರಶಸ್ತಿ ಪುರಸ್ಕೃತ ಏಕನಾಥ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶರದಕುಮಾರ ನಾರಾಯಣ ಪೇಟಕರ, ಡಾ.ಸಾರಿಕಾ ಎಸ್.ಗಂಗಾ, ಪ್ರಭು ಎಂ.ಹಂಜಾಳ, ವೈಜಿನಾಥ ಬಂಡೆನೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಸವಕಲ್ಯಾಣ | ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ
ಗುರುಕುಮಾರ ಹಿರೇಮಠರ ವಾಯಲಿನ್ ವಾದನ ಕಾರ್ಯಕ್ರಮ ವಿಶೇಷವಾಗಿತ್ತು. ಮಾಣಿಕ ಪ್ರಭು ಶಾಲೆಯ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು. ಯಲ್ಲಾಲಿಂಗ ರೊಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭದ್ರ ಆರ್. ಗಿರಿ ಸ್ವಾಗತಿಸಿದರು. ತುಕಾರಾಂ ನಿರೂಪಿಸಿದರು ಹಾಗೂ ವಿವೇಕಾನಂದ ಗುರುಮೂರ್ತಿ ವಂದಿಸಿದರು.





