ಬೀದರ್ ನಗರದ ಪಾಪನಾಶ ದೇವಸ್ಥಾನ ಅಭಿವೃದ್ಧಿ ನನ್ನ ಕನಸಾಗಿದ್ದು, ಅದಕ್ಕಾಗಿ ನಾನು ಮಂಜೂರಿ ಮಾಡಿಸಿ, 2024ರ ಮಾರ್ಚ್ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಶಂಕುಸ್ಥಾಪನೆ ಮಾಡಿದರು. ಈಗ ಅದೇ ಕಾಮಗಾರಿಗೆ ಪುನಃ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಸಚಿವ ಈಶ್ವರ ಖಂಡ್ರೆ ಹಾಗೂ ಅವರ ಮಗ ಸಂಸದ ಸಾಗರ ಖಂಡ್ರೆ ಅವರು ಪ್ರಧಾನಿಯವರಿಗೆ ಅಗೌರವ ತೋರುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವಿರೋಧ ವ್ಯಕ್ತಪಡಿಸಿದ್ದಾರೆ.
ʼವರ್ಷದ ಹಿಂದೆಯೇ ಪಾಪನಾಶ ದೇಗುಲದ ಕಾಮಗಾರಿ ಆರಂಭಗೊಳ್ಳಬೇಕಿತ್ತು. ಆದರೆ, ದುರುದ್ದೇಶದಿಂದ ಗುತ್ತಿಗೆದಾರರಿಗೆ ಕೆಲಸ ಮಾಡಲು ಬಿಟ್ಟಿಲ್ಲ. ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿರುವುದರಲ್ಲಿ ಈಶ್ವರ ಖಂಡ್ರೆ ಹಾಗೂ ಸಾಗರ ಖಂಡ್ರೆ ಕೊಡುಗೆ ದೊಡ್ಡ ಶೂನ್ಯ. ಪುನಃ ಶಂಕುಸ್ಥಾಪನೆ ಹೆಸರಿನಲ್ಲಿ ಸತ್ಯ ಮರೆಮಾಚುವುದಕ್ಕಾಗಿ ಬೀದರ್ ನಗರದಾದ್ಯಂತ ಕಟೌಟ್‌ಗಳನ್ನು ಹಾಕಿಸಿದ್ದಾರೆʼ ಎಂದು ಭಗವಂತ ಖೂಬಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ʼಜನರು ಪಾಪನಾಶ ದೇವಸ್ಥಾನದ ದರ್ಶನ ಮಾಡಿ, ಜನ ತನ್ನ ಪಾಪಗಳು ಕಳೆದುಕೊಳ್ಳುತ್ತಾರೆ, ಆದರೆ ತಂದೆ(ಈಶ್ವರ ಖಂಡ್ರೆ) ಮಗ (ಸಾಗರ ಖಂಡ್ರೆ) ದೇವರ ವಿಷಯದಲ್ಲೂ ಸುಳ್ಳು ಹೇಳಿ ಪಾಪದ ಕೂಪಕ್ಕೆ ಬೀಳ್ತಾ ಇದ್ದಾರೆ, ತನ್ನ ಗುಂಡಿ ತಾನೇ ತೋಡಿಕೊಳ್ತಾ ಇದ್ದಾರೆ. ಒಂದು ವೇಳೆ ಪಾಪನಾಶ ದೇಗುಲ ಅಭಿವೃದ್ಧಿ ಕಾಮಗಾರಿ ಅವರ ಪ್ರಯತ್ನದಿಂದ ಆಗಿದ್ದರೆ ಇಬ್ಬರೂ ಪಾಪನಾಶ ಶಿವಲಿಂಗದ ಮೇಲೆ ಕೈಯಿಟ್ಟು ಆಣೆ ಪ್ರಮಾಣ ಮಾಡಬೇಕು. ನಾನು ಕೂಡ ಬರುವೆʼ ಎಂದು ಭಗವಂತ ಖೂಬಾ ಸವಾಲೆಸೆದರು.
ʼಸಚಿವ ಈಶ್ವರ ಖಂಡ್ರೆ ಅವರು ಅಭಿವೃದ್ಧಿ ದೃಷ್ಟಿಹೀನ ರಾಜಕಾರಣಿಯಾಗಿದ್ದಾರೆ. ಅವರು ಹೇಗೆ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬುದು ಇಡೀ ಜಿಲ್ಲೆಗೆ ಗೊತ್ತಿದೆ. 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಆ ಅಧಿಕಾರದಲ್ಲಿ ಭಾಲ್ಕಿಯಿಂದ ಬಿಜೆಪಿ ಪಕ್ಷದ ಶಾಸಕ ಗೆದ್ದು ಬರುತ್ತಾರೆ ಎಂಬುದು ಶತಸಿದ್ಧ. ನಾಳೆ ಯಾವುದೇ ಕಾರಣಕ್ಕೂ ಪಾಪನಾಶ ದೇಗುಲದ ʼಪ್ರಸಾದ್ʼ ಯೋಜನೆಯ ಕಾಮಗಾರಿ ಶೀಲಾನ್ಯಾಸ ಕಾರ್ಯಕ್ರಮಕ್ಕೆ ಆಗಬಾರದುʼ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಧಾನಿಗಳ ಶಂಕುಸ್ಥಾಪನೆಗೆ ಗೌರವಿಸದೆ ಈಶ್ವರ ಖಂಡ್ರೆ ಹಾಗೂ ಸಾಗರ ಖಂಡ್ರೆ ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ. ಒಂದು ವೇಳೆ ಪುನಃ ಶಂಕುಸ್ಥಾಪನೆ ಮಾಡಿದರೆ ಪಕ್ಷದಿಂದ ಧರಣಿ ನಡೆಸಲಾಗುವುದು. ನಾಳೆ (ಫೆ.7) ಬೆಳಿಗ್ಗೆ 10ಕ್ಕೆ ಪಕ್ಷದ ವತಿಯಿಂದ ಪಾಪನಾಶ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ಹಮ್ಮಿಕೊಳ್ಳಲಾಗಿದೆʼ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ʼಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಶಂಕುಸ್ಥಾಪನೆಗೊಂಡ ಅನೇಕ ಯೋಜನೆಗಳಿಗೆ ಪುನಃ ಶಂಕುಸ್ಥಾಪನೆ ಮಾಡಿ, ತಮ್ಮದೆಂದು ಹೇಳಿಕೊಳ್ಳುವುದು ಕಾಂಗ್ರೆಸ್ ಅವರ ಚಾಳಿ ಎಲ್ಲೆಡೆ ಆಗಿದೆ. ಮುಖ್ಯಮಂತ್ರಿಯಿಂದ ಕಳೆದ ವರ್ಷ ಚಾಲನೆ ಕೊಡಿಸಿದ ₹2,025 ಕೋಟಿ ಮೊತ್ತದ ಯೋಜನೆಗಳಿಗೂ ಹಿಂದೆಯೇ ಚಾಲನೆ ಕೊಡಲಾಗಿತ್ತು. ಶಾಶ್ವತವಾಗಿ ಇವರದ್ದೇ ಸರ್ಕಾರ ಇರಲ್ಲ ಎಂಬುದನ್ನು ಮರೆಯಬಾರದುʼ ಎಂದು ಎಚ್ಚರಿಸಿದರು.
ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ವತಿಯಿಂದ ʼಪ್ರಸಾದʼ ಯೋಜನೆಯಡಿ ಬೀದರ ನಗರದ ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಆಯ್ಕೆಯಾಗಿದ್ದು, ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ನಾಳೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಬೀದರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಬಸ್ ತಡೆದು ಚಾಲಕನಿಗೆ ಥಳಿತ ಪ್ರಕರಣ : ಆರೋಪಿಗಳ ಬಂಧನಕ್ಕೆ ಆಗ್ರಹ
ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಮುಖಂಡರಾದ ರಾಜಶೇಖರ್ ನಾಗಮೂರ್ತಿ, ನಾಗಭೂಷಣ್ ಕಮಠಾಣೆ, ಬಾಬುರಾವ್ ಕಾರಬಾರಿ, ರಾಕೇಶ್ ಪಾಟೀಲ್, ರಾಜೇಂದ್ರ ಪೂಜಾರಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿವಾಸ್ ಚೌಧರಿ ಹಾಜರಿದ್ದರು.





