ಒಳ ಮೀಸಲಾತಿ ಜಾರಿಗೆ ವಿರೋಧಿಸಿ ಹಾಗೂ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟವು ಮಾರ್ಚ್ 25ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ ಎಂದು ಒಕ್ಕೂಟದ ಪ್ರಮುಖ ಬಾಬುರಾವ ಪಾಸ್ವಾನ್ ತಿಳಿಸಿದರು.
ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼರಾಜ್ಯ ಸರ್ಕಾರವು ನ್ಯಾ.ನಾಗಮೋಹನ್‌ದಾಸ್ ವರದಿಯನ್ನು ತಿರಸ್ಕರಿಸಿ, ಮತ್ತೊಮ್ಮೆ ಜಾತಿ ಜನಗಣತಿ ಸಮೀಕ್ಷೆ ನಡೆಸಬೇಕುʼ ಎಂದು ಒತ್ತಾಯಿಸಿದರು.
ʼರೋಸ್ಟರ್ ಪದ್ಧತಿಯ ಒಳಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. 56 ಸಾವಿರ ಹುದ್ದೆಗಳನ್ನು ಹಳೇ ಮೀಸಲಾತಿ ಆಧಾರದ ಮೇಲೆ ಭರ್ತಿಗೊಳಿಸಿ ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸಬೇಕು ಎಂದ ಅವರು, ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಬೆಂಬಲದಿಂದ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿದ್ದು, ಬಲಗೈ-ಎಡಗೈ ಸಮುದಾಯಗಳ ನಡುವೆ ಭಿನ್ನತೆ ಉಂಟುಮಾಡುತ್ತಿದೆʼ ಎಂದು ಆರೋಪಿಸಿದರು.
ʼ2024ರ ಆ.1ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಒಳಮೀಸಲಾತಿ ಜಾರಿಗೆ ರಾಜ್ಯಗಳಿಗೆ ಅಧಿಕಾರವಿದೆ ಎಂದಿದ್ದರೂ, ಅದು ಸಮರ್ಪಕ ಅಂಕಿ-ಅಂಶಗಳ ಆಧಾರದ ಮೇಲೆ ಮಾತ್ರ ಜಾರಿಯಾಗಬೇಕೆಂದು ಸ್ಪಷ್ಟಪಡಿಸಿದೆ. ಆದರೆ ರಾಜ್ಯ ಸರ್ಕಾರ ಈ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಆಯೋಗವು ಜನಸಂಖ್ಯೆ ಮಾಹಿತಿಯನ್ನು ತಪ್ಪಾಗಿ ವರ್ಗೀಕರಿಸಿದ್ದು, ಬಲಗೈ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಡಿಮೆಯಾಗುವಂತೆ ಮಾಡಲಾಗಿದೆ. ಇದರಿಂದ ಉನ್ನತ ಹುದ್ದೆಗಳ ಅವಕಾಶಗಳು ಕಡಿಮೆಯಾಗುವ ಸಾಧ್ಯತೆ ಇದʼ ಎಂದು ವಿವರಿಸಿದರು.
ಸರ್ಕಾರವು ಶೇ 15+3ರ ಮೀಸಲಾತಿ ಪ್ರಮಾಣದಲ್ಲಿ ನೇಮಕಾತಿ ಮಾಡಲು ಆದೇಶಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ಮತ್ತೆ ಜಾರಿಗೊಳಿಸುವ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಒಳ ಮೀಸಲಾತಿ ಜಾರಿಗೊಳಿಸದಂತೆ ಸರ್ಕಾರಕ್ಕೆ ಒತ್ತಾಯಿಸಲು ಒಕ್ಕೂಟದ ಅಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ, ಕಾರ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ, ಸಂಚಾಲಕರಾದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ಮಾಜಿ ಮಹಾಪೌರ ಸಂಪತರಾಜ್ ಸೇರಿದಂತೆ ಹಲವು ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಹೋರಾಟ ತೀವ್ರಗೊಳಿಸುವುದಾಗಿ ಅವರು ತಿಳಿಸಿದ್ದಾರೆ.

ಮುಖಂಡ ರಮೇಶ ಡಾಕುಳಗಿ ಮಾತನಾಡಿ, ʼಒಳ ಮೀಸಲಾತಿ ಜಾರಿಗೊಳಿಸಿದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ಇತ್ಯಾದಿ ರಾಜ್ಯಗಳಿಗೆ ತೆರಳಿ ಅಧ್ಯಯನ ನಡೆಸಿ ರಾಜ್ಯದಲ್ಲೂ ಅದನ್ನು ಸಮರ್ಪಕ ರೀತಿಯಲ್ಲಿ ಜಾರಿಗೊಳಿಸಲು ಮುಂದಾಗಬೇಕು. ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕದ ಜನರು ಬಲಗೈ ಹಾಗೂ ಎಡಗೈ ಸಮುದಾಯಗಳಲ್ಲಿ ಇದ್ದು, ಒಂದೇ ಪಂಗಡದಲ್ಲಿ ಅವರನ್ನು ಗುರುತಿಸುವ ಕಾರ್ಯವಾಗಬೇಕು, ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವ ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿ ರಾಜ್ಯ ಸರ್ಕಾರ ತಿರಸ್ಕರಿಸಬೇಕುʼ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿ-ಅಂಶಗಳೊಂದಿಗೆ ನಾಗಮೋಹನ್‌ದಾಸ್ ಆಯೋಗದ ಅಂಕಿ-ಅಂಶಗಳನ್ನು ಹೋಲಿಕೆ ನಡೆಸಬೇಕು. ವ್ಯತ್ಯಾಸ ಕಂಡುಬಂದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮೀಕ್ಷೆ ಪುನಃ ನಡೆಸಬೇಕು. ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು. ಜಾತಿ ಪ್ರಮಾಣ ಪತ್ರಗಳನ್ನು ಪ್ರವರ್ಗ-ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿರುವುದನ್ನು ಹಿಂಪಡೆದು ಮೂಲ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸೂಕ್ತ ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿ ಸಮುದಾಯಕ್ಕೆ ಈಗಾಗಲೇ ನೀಡಿರುವ ಖಾಯಂ ಜಾತಿ ಪ್ರಮಾಣ ಪತ್ರಗಳನ್ನು ಹೊಸ ಜಾತಿ ಪ್ರಮಾಣ ಪತ್ರಗಳೊಂದಿಗೆ ಪರಿಗಣಿಸಲು ಸೂಕ್ತ ಆದೇಶ ಹೊರಡಿಸಬೇಕುʼ ಆಗ್ರಹಿಸಿದರು.
ʼಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳನ್ನು ಬಲಗೈ ಗುಂಪಿನಲ್ಲಿ ಉದ್ಯೋಗ, ಶಿಕ್ಷಣ ಮತ್ತು ಇತರೆ ಸೌಲಭ್ಯ ಪಡೆಯಲು ಅಧಿಸೂಚನೆ ಹೊರಡಿಸಬೇಕು, ಚಿತ್ರದುರ್ಗ ಜಿಲ್ಲೆಯಲ್ಲಿ ಹೊಲೆಯ ಸಮುದಾಯ ಕೇವಲ 223 ಎಂದು ನ್ಯಾ.ನಾಗಮೋಹನ್‌ದಾಸ್ ವರದಿಯಲ್ಲಿ ದಾಖಲಿಸಿರುವುದನ್ನು ಮರು ಪರಿಶೀಲಿಸಿ ಉದ್ದೇಶ ಪೂರ್ವಕವಾಗಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿರುವ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಲು ವಿಶೇಷ ತನಿಖಾ ತಂಡ ರಚಿಸಬೇಕುʼ ಎಂದು ಡಾಕುಳಗಿ ಹೇಳಿದರು.
ಇದನ್ನೂ ಓದಿ : ಬೀದರ್ | ಬೈಕ್‌ಗೆ ಟಿಪ್ಪರ್ ಡಿಕ್ಕಿ : ಸ್ಥಳದಲ್ಲೇ ದಂಪತಿ ಸಾವು
ಒಕ್ಕೂಟದ ಇತರೆ ಪ್ರಮುಖರಾದ ಪ್ರದೀಪ ನಾಟೇಕರ್, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಸಂದೀಪ ಕಾಂಟೆ, ಅಶೋಕ ಮಾಳಗೆ, ಅಂಬಾದಾಸ ಗಾಯಕವಾಡ, ಸಾಯಿ ಶಿಂಧೆ, ರಘುನಾಥ ಗಾಯಕವಾಡ, ಅವಿನಾಶ ದೀನೆ, ರಾಜಕುಮಾರ ಶೇರಿಕಾರ, ಮೌಲಪ್ಪ ಮಾಳಗೆ, ಜನಾರ್ಧನ ದೀನೆ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿದ್ದರು





