ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲ ಗ್ರಾಮ ಹಾಗೂ ತಾಂಡಾಗಳಿಗೆ ಸ್ಮಶಾನ ಭೂಮಿಯನ್ನು ಕಲ್ಪಿಸಬೇಕೆಂದು ಮಾಜಿ ಸಚಿವ, ಶಾಸಕ ಪ್ರಭು ಬಿ. ಚವ್ಹಾಣ ಅವರು ಸರ್ಕಾರಕ್ಕೆ ಆಗ್ರಹಿಸಿದರು.
ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಅವರು ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ವಿಷಯ ಪ್ರಸ್ತಾಪಿಸಿದ ಅವರು, ʼಔರಾದ(ಬಿ) ಕ್ಷೇತ್ರದಲ್ಲಿ 154 ಗ್ರಾಮ, 157 ತಾಂಡಾಗಳಿವೆ. ಕೆಲ ಗ್ರಾಮಗಳು ಹಾಗೂ ತಾಂಡಾಗಳಿಗೆ ಇನ್ನೂ ಸ್ಮಶಾನಭೂಮಿ ಇಲ್ಲ. ಪ್ರತಿ ವರ್ಷ ಗ್ರಾಮ ಸಂಚಾರದ ವೇಳೆ ಜನರಿಂದ ಸ್ಮಶಾನಭೂಮಿ ಕುರಿತಾಗಿ ಅನೇಕ ಮನವಿಗಳು ಬರುತ್ತಿವೆʼ ಎಂದು ಹೇಳಿದರು.
ಸ್ಮಶಾನ ಭೂಮಿ ಕೊರತೆಯಿಂದ ಈ ಹಿಂದೆ ಗಣೇಶಪೂರ(ಯು) ಮತ್ತು ಲಿಂಗಿ ಗ್ರಾಮಗಳಲ್ಲಿ ರಸ್ತೆಯ ಮೇಲೆಯೇ ಅಂತಿಮ ಸಂಸ್ಕಾರ ನಡೆಸಿದ ಘಟನೆಗಳು ನಡೆದಿವೆ. ಇದರಿಂದ ಗಲಾಟೆಗಳು ಹಾಗೂ ಪ್ರಕರಣಗಳು ದಾಖಲಾಗಿವೆ ಎಂದು ಸದನಕ್ಕೆ ಅವರು ಮನವರಿಕೆ ಮಾಡಿಕೊಟ್ಟರು.
ಸರ್ಕಾರಿ ಜಮೀನು ಲಭ್ಯವಿರುವ ಕಡೆ ತಕ್ಷಣವೇ ಸ್ಮಶಾನಕ್ಕಾಗಿ ಕಾಯ್ದಿರಿಸಬೇಕು. ಜಮೀನಿಲ್ಲದ ಕಡೆ ಖಾಸಗಿಯವರಿಂದ ಖರೀದಿಸಲು ವ್ಯವಸ್ಥೆ ಮಾಡಬೇಕು. ಸ್ಮಶಾನಗಳಿಗೆ ರಸ್ತೆ, ಚಿತಾಗಾರ, ಕಾಂಪೌಂಡ್, ವಿದ್ಯುತ್ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ʼಕಳೆದ ಹತ್ತು ವರ್ಷಗಳಿಂದ ಎಲ್ಲ ಸರ್ಕಾರಗಳು ಗ್ರಾಮಗಳಿಗೆ ಸ್ಮಶಾನಭೂಮಿ ಒದಗಿಸಲು ಪ್ರಯತ್ನಿಸುತ್ತಿವೆ. ಹೈಕೋರ್ಟ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಆದರೂ ಕೆಲವು ಗ್ರಾಮಗಳಿಗೆ ಇನ್ನೂ ಸ್ಮಶಾನಭೂಮಿ ನೀಡಲು ಸಾಧ್ಯವಾಗದೇ ಇರುವುದು ವಿಷಾದನೀಯʼ ಎಂದರು.
ʼಸರ್ಕಾರಿ ಜಮೀನನ್ನು ಬೇರೆ ಉದ್ದೇಶಗಳಿಗೆ ನೀಡುವುದರಿಂದ ಸ್ಮಶಾನ ಭೂಮಿಗೆ ಜಾಗ ಕೊರತೆ ಉಂಟಾಗಿದೆ. ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ಖಾಸಗಿ ಜಮೀನನ್ನು ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹಣ ನೀಡಿ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸ್ಮಶಾನಭೂಮಿ ಖರೀದಿಗೆ 58 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆʼ ಎಂದು ಮಾಹಿತಿ ನೀಡಿದರು.
ʼಔರಾದ(ಬಿ) ಕ್ಷೇತ್ರದಲ್ಲಿ 154 ವಸತಿ ಪ್ರದೇಶಗಳ ಪೈಕಿ 9 ಪ್ರದೇಶಗಳಲ್ಲಿ ಸ್ಮಶಾನಭೂಮಿ ಇಲ್ಲ ಎಂಬ ಮಾಹಿತಿ ದೊರೆತಿದೆ. ಈ ಪೈಕಿ ಎರಡು ಗ್ರಾಮಗಳಲ್ಲಿ ಸರ್ಕಾರಿ ಜಮೀನಿದ್ದು, ವಾರದೊಳಗೆ ಸ್ಮಶಾನಕ್ಕೆ ಕಾಯ್ದಿರಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಉಳಿದ ಕಡೆಗಳಲ್ಲಿ ಪಕ್ಕದ ಊರುಗಳಲ್ಲಿ ಜಮೀನು ಕಾಯ್ದಿರಿಸಲು 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಸ್ಮಶಾನಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆʼ ಎಂದು ಭರವಸೆ ನೀಡಿದರು.
ಈ ವಿಷಯದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ, ರಾಜ್ಯದಲ್ಲಿ ಸ್ಮಶಾನಭೂಮಿಗೆ ಖರ್ಚಾಗಿರುವ 58 ಕೋಟಿ ಎಲ್ಲ ತಾಲ್ಲೂಕುಗಳಿಗೆ ಸಾಕಾಗುವುದಿಲ್ಲ. ಸರ್ಕಾರಿ ಜಮೀನು ನೀಡುವಾಗ ಶಾಲೆ, ಅಂಗನವಾಡಿ ಹಾಗೂ ಸ್ಮಶಾನಭೂಮಿಗೆ ಮೊದಲ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದೇ ವೇಳೆ ಶಾಸಕ ಪ್ರಭು ಚವ್ಹಾಣ ಅವರು ಬೀದರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಂಡಾಗಳಿದ್ದು, ಔರಾದ ಕ್ಷೇತ್ರದಲ್ಲಿ 157 ತಾಂಡಾಗಳಿವೆ. ಈ ಪೈಕಿ 30 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಉಳಿದ ತಾಂಡಾಗಳನ್ನೂ ಮಾನದಂಡಗಳ ಅನ್ವಯ ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಗೋಮಾಳ ಸೇರಿದಂತೆ ಸರ್ಕಾರಿ ಜಮೀನುಗಳ ಅತಿಕ್ರಮಣವನ್ನು ನಿಯಂತ್ರಿಸಬೇಕು ಎಂದರು. ಇದಕ್ಕೆ ʼತಾಂಡಾಗಳ ಪಟ್ಟಿ ಒದಗಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆʼ ಎಂದು ಸಚಿವರು ತಿಳಿಸಿದರು.
ಸ್ಮಶಾನ ಭೂಮಿಯಿಲ್ಲದ ಯಾವ ಊರು,ತಾಂಡಾ :
ಔರಾದ (ಬಿ) ವಿಧಾನ ಸಭಾ ಕ್ಷೇತ್ರದ ಮದನೂರ, ರಂಡ್ಯಾಳ, ಜೀರ್ಗಾ(ಕೆ), ಮೇಡಪಳ್ಳಿ, ವಡಗಾಂವ, ಸಂಗನಾಳ, ಅಲ್ಲಾಪೂರ, ಸುಂಕನಾಳ, ಜೀರ್ಗಾ (ಬಿ) ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಸರ್ಕಾರಿ ಜಮೀನು ಲಭ್ಯವಿರುವುದಿಲ್ಲ. ಜಮೀನು ಲಭ್ಯವಿದ್ದ ಕಡೆ ಪರಿಶೀಲಿಸಿ ಮಂಜೂರು ಮಾಡಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಉತ್ತರಿಸಿದರು.
ಇದನ್ನೂ ಓದಿ : ಬೀದರ | ಬಸವಣ್ಣ-ಅಕ್ಕಮಹಾದೇವಿ ಅವಹೇಳನ : ಕ್ರಮಕ್ಕೆ ಆಗ್ರಹ
ಈಗಾಗಲೇ ಗುರುತಿಸಿದ ಸ್ಮಶಾನ ಭೂಮಿಗಳ ಅಭಿವೃದ್ಧಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕಾಂಪೌಂಡ್, ರಸ್ತೆ, ನೀರು, ಗಿಡಮರಗಳನ್ನು ಬೆಳೆಸಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.





