ಭಾನುವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಇದು ಸಂಪೂರ್ಣ ನಿರಾಶಾದಾಯಕವಾಗಿದೆ. ಹಳೆಯ ಬಾಟಲಿಯಲ್ಲಿ ಹೊಸ ದ್ರಾಕ್ಷಾರಸ ತುಂಬಿದಂತಿರುವ ಈ ಬಜೆಟ್ ದೇಶದ ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಟೀಕಿಸಿದ್ದಾರೆ.
ʼಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಬಜೆಟ್‌ನಲ್ಲಿ ಯಾವುದೇ ಗಣನೀಯ ಸುಧಾರಣೆ ಕಾಣಿಸಿಲ್ಲ. ಸರ್ಕಾರಿ ವೆಚ್ಚಗಳ ಮೇಲೆ ನಿಯಂತ್ರಣದ ಲಕ್ಷಣವೂ ಇಲ್ಲ. ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾದ ಕರ್ನಾಟಕಕ್ಕೆ ಹೇಳಿಕೊಳ್ಳುವಂತಹ ಪ್ರಯೋಜನ ಈ ಬಜೆಟ್‌ನಲ್ಲಿ ಕಾಣುವುದಿಲ್ಲʼ ಎಂದಿದ್ದಾರೆ.
ʼಹೈದ್ರಾಬಾದ್–ಬೆಂಗಳೂರು ಹೈಸ್ಪೀಡ್ ರೈಲು ಯೋಜನೆ ಸಮಾಧಾನಕರ ಬಹುಮಾನವಷ್ಟೇ. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ವಿಫಲವಾಗಿದೆʼ ಎಂದರು.
ಶ್ರೀಗಂಧದ ಬೆಳೆಗೆ ಉತ್ತೇಜನದ ಮಾತು ಮಾತ್ರ:
ʼಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಶ್ರೀಗಂಧ ಬೆಳೆಗೆ ಉತ್ತೇಜನದ ಮಾತುಗಳನ್ನಾಡಿದೆ. ಆದರೆ, ಅದು ಹೇಗೆ ಕಾರ್ಯಗತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸ್ವಾಭಾವಿಕವಾಗಿ ಬೆಳೆಯುವ ಶ್ರೀಗಂಧದಲ್ಲಿ ತೈಲದ ಅಂಶ ಹೆಚ್ಚು ಇರುತ್ತದೆ. ರೈತರು ಜಮೀನಿನಲ್ಲಿ ಗೊಬ್ಬರ ಹಾಕಿ ಬೆಳೆಯುವ ಶ್ರೀಗಂಧಕ್ಕೆ ಹೆಚ್ಚಿನ ಬೆಲೆ ದೊರಕುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ರೈತರು ಸಂಕಷ್ಟ ಅನುಭವಿಸುವ ಸಾಧ್ಯತೆ ಇದೆʼ ಎಂದು ತಿಳಿಸಿದ್ದಾರೆ.
ʼರಾಜ್ಯ ಸರ್ಕಾರ ಈಗಾಗಲೇ ನೂತನ ಶ್ರೀಗಂಧ ನೀತಿಯನ್ನು ರೂಪಿಸಿದೆ. ಕಡಲ ಆಮೆಗಳ ಸಂರಕ್ಷಣೆಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿ ಮಾದರಿಯ ಕೆಲಸ ಮಾಡಿದೆ. ಮಂಗಳೂರು ಮತ್ತು ಕಾರವಾರ ಭಾಗಗಳಲ್ಲಿ ಕಡಲ ಆಮೆಗಳ ಮೊಟ್ಟೆಗಳ ಸಂರಕ್ಷಣೆ ಮತ್ತು ಮರಿಗಳ ರಕ್ಷಣೆಗೆ ಪರಿಣಾಮಕಾರಿ ಕ್ರಮ ಕೈಗೊಂಡಿದೆʼ ಎಂದರು.
ಇದನ್ನೂ ಓದಿ : ಬಜೆಟ್‌ನಲ್ಲಿ ಬಂಗಾಳದ ಬಗ್ಗೆ ಪ್ರಸ್ತಾಪವಿಲ್ಲ, ಕೇಂದ್ರ ನಮ್ಮನ್ನು ‘ಬಾಂಗ್ಲಾದೇಶಿಗಳು’ ಎಂಬಂತೆ ನೋಡುತ್ತೆ: ಅಭಿಷೇಕ್ ಬ್ಯಾನರ್ಜಿ
ʼಕಳೆದ 12 ವರ್ಷಗಳಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದರೂ, ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಬಜೆಟ್‌ನಲ್ಲಿಯೂ ರಾಜ್ಯದ ಯುವಕರಿಗೆ ಭರವಸೆ ನೀಡುವಂತಹ ಯಾವುದೇ ಯೋಜನೆ ಕಾಣುತ್ತಿಲ್ಲʼ ಎಂದಿದ್ದಾರೆ.





