ಬ್ರಿಟಿಷ್ ಸಾಮ್ರಾಜ್ಯಕ್ಕೆ ದುಸ್ಸ್ವಪ್ನದಂತಿದ್ದ, ಕೇವಲ 25 ವರ್ಷಗಳ ಬದುಕಿನಲ್ಲೇ ಸ್ವಾತಂತ್ರ್ಯ ಚಳವಳಿಗೆ ಅಮೋಘ ಚೈತನ್ಯ ತುಂಬಿದ ಆದಿವಾಸಿ ಜನನಾಯಕ ಬಿರ್ಸಾ ಮುಂಡಾ. ಆದಿವಾಸಿಗಳ ಪಾಲಿಗೆ ʼಧರ್ತಿ ಅಬ್ಬಾʼ (ಭೂಮಿಯ ತಂದೆ) ಆಗಿ ಚಿರಸ್ಥಾಯಿಯಾಗಿದ್ದಾರೆ. ಈ ಬಿರುದು ಅವರಿಗೆ ದೊರೆತದ್ದು ಹೋರಾಟದ ನಾಯಕತ್ವಕ್ಕಾಗಿಯಲ್ಲದೆ, ತಮ್ಮ ಜನಾಂಗದ ಭೂಮಿ, ನಂಬಿಕೆ, ಬದುಕುಗಳನ್ನು ಕಾಪಾಡಲು ಅವರು ತೋರಿದ ಪ್ರಾಣ ಪಣದ ನಿಜಾರ್ಥವೇ ಆಗಿದೆ.
‘ಧರ್ತಿ ಅಬ್ಬಾ’ ಜನಿಸಿ ಇಂದಿಗೆ ಭರ್ತಿ 150 ವರ್ಷ. ಆದಿವಾಸಿ ಬುಡಕಟ್ಟುಗಳ ಅಸ್ಮಿತೆಯ ಹರಿಕಾರನ ಬಲಿದಾನಕ್ಕೆ 125 ವರ್ಷಗಳು. 25ರ ಹರಯದಲ್ಲೇ ತನ್ನವರಿಗಾಗಿ ಹೋರಾಡುತ್ತಲೇ ಇಹಲೋಕ ತ್ಯಜಿಸಿದ ಬಿರ್ಸಾ ಮುಂಡಾ, ಜಾರ್ಖಂಡ್‌ನ ರಾಂಚಿ ಬಳಿಯ ಉಳಿಹಾತು ಹಾಡಿಯಲ್ಲಿ ಸುಗನ ಮುಂಡಾ ಮತ್ತು ಕರ್ಮಿಹಾತು ಮಗನಾಗಿ 1875ರ ನವೆಂಬರ್ 15ರಂದು ಜನಿಸಿದರು. ಬಾಲ್ಯದಲ್ಲಿಯೇ ಆದಿವಾಸಿ ಜೀವನದ ಅತಂತ್ರ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು. ಕಾನೂನು, ದರ್ಪ, ಒತ್ತಡಗಳಿಂದ ಬ್ರಿಟಿಷರು ಮುಂಡಾ ಸಮುದಾಯದ ಮೇಲೆ ಹಿಡಿತ ಸಾಧಿಸಲು ಹಪಹಪಿಸುತ್ತಿದ್ದರು. ತನ್ನ ಪೀಳಿಗೆಯ ಅಸ್ತಿತ್ವ ಪರಕೀಯರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ನೋವು ಮುಂದೆ ಅವರೆದೆಯಲ್ಲಿ ಕ್ರಾಂತಿಯ ಬೆಂಕಿಯುಂಡೆಯಾಗಿ ಬದಲಾಯಿತು.
ಅಂದಿಗೆ ಬಡತನಕ್ಕೆ ಸಿಲುಕಿ ನಲುಗಿದ್ದ ಬಿರ್ಸಾ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಆ ಸಂದರ್ಭದಲ್ಲಿ ‘ದೌದ್ ಪುರ್ತಿ’ ಎಂದು ಮರುನಾಮಕರಣಗೊಂಡಿದ್ದರು. ಈ ಕಾರಣದಿಂದಾಗಿ ಬಾಲ್ಯದಲ್ಲಿ ಕ್ರಿಶ್ಚಿಯನ್ ಶಾಲೆಗಳಲ್ಲಿ ತಕ್ಕಮಟ್ಟಿನ ವಿದ್ಯಾಭ್ಯಾಸಕ್ಕೆ ಅವಕಾಶವೂ ಸಿಕ್ಕಿತ್ತು. ಬ್ರಿಟಿಷರು ಸಂಪತ್ಭರಿತವಾದ ಭಾರತದ ಕಾಡುಗಳ ಮೇಲೆ ಕಣ್ಣಿಟ್ಟು, ತಮ್ಮ ಅಧಿಕಾರ ಸ್ಥಾಪಿಸುವ ಹುನ್ನಾರದ ಮೊದಲ ಹಂತವಾಗಿ, ಕಾಡಿನ ಉತ್ಪನ್ನಗಳನ್ನು ಯಾರೂ ಸಂಗ್ರಹಿಸುವಂತಿಲ್ಲ ಎಂದು ಆಜ್ಞೆ ಹೊರಡಿಸಿದರು. ಅಲ್ಲದೇ ಆದಿವಾಸಿ ಬುಡಕಟ್ಟು ಸಮುದಾಯದವರನ್ನು ಲೇವಾದೇವಿಗಾರರು, ವ್ಯಾಪಾರಸ್ಥರು ಸುಲಿಗೆ ಮಾಡುತ್ತಿದ್ದರು. ಇದರೊಟ್ಟಿಗೆ ಧಾರ್ಮಿಕ ಮೂಲಭೂತವಾದಿಗಳು ಸಾಮಾನ್ಯರನ್ನು, ಆಯಾ ಧರ್ಮದವರನ್ನು ತಮ್ಮ ತಮ್ಮ ಧರ್ಮಗಳಿಗೆ ಸೆಳೆಯುವ ಅಪಾಯಕಾರಿ ಕೆಲಸಕ್ಕೆ ಮುಂದಾಗಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೊಂದಿದ್ದ ಆದಿವಾಸಿ ಸಮುದಾಯ ಅಲ್ಲಲ್ಲಿ ಪ್ರತಿಭಟನೆ ಮಾಡಲು ಆರಂಭಿಸಿತ್ತು.

ಅದುವರೆಗೆ ಏನೂ ಅರಿಯದ ಬಿರ್ಸಾ, ಬೊಹೋಂಡಾ ಕಾಡುಗಳಲ್ಲಿ ಕುರಿ ಕಾಯುತ್ತಾ, ಆಟವಾಡಿಕೊಂಡು ತಮ್ಮ ಪಾಡಿಗೆ ಇದ್ದರಂತೆ ಎಂದು ಚತ್ತೀಸ್‌ಗಢದ ಜನಪದಗಳು ಉಲ್ಲೇಖಿಸುತ್ತವೆ. 13ನೇ ವಯಸ್ಸಿನ ಸುಮಾರಿನಲ್ಲಿ ಆದಿವಾಸಿ ಸಂಸ್ಕೃತಿಯನ್ನು ಹೀಗಳೆಯುವರ ವಿರುದ್ಧ ಆಕ್ರೋಶಗೊಂಡು ವ್ಯಾಪಾರಸ್ಥರ ದೌರ್ಜನ್ಯ, ಲೇವಾದೇವಿದಾರರ ಸುಲಿಗೆ, ಬ್ರಿಟಿಷರ ದಬ್ಬಾಳಿಕೆಯಿಂದ ಆದಿವಾಸಿ ಸಮುದಾಯ ಭೂಮಿ ಕಳೆದುಕೊಂಡು ಕೂಲಿಯಾಳಾಗುವುದನ್ನು ಸಹಿಸಲಾರದೇ ಸಿಡಿದೆದ್ದಿದ್ದರು ಬಿರ್ಸಾ ಮುಂಡಾ.
ತಮ್ಮ ಸಮುದಾಯದ ಹೀನಾಯ ಸ್ಥಿತಿ ನೋಡಿ ಕಂಗೆಟ್ಟ ಬಿರ್ಸಾ, ಕ್ರಿಶ್ಚಿಯನ್ ಧರ್ಮ ತ್ಯಜಿಸಿ ಆದಿವಾಸಿ ಬುಡಕಟ್ಟಿನ ಕಡೆಗೆ ಮುಖ ಮಾಡುತ್ತಾರೆ. ತಮ್ಮ 17ನೇ ವಯಸ್ಸಿನಲ್ಲಿ ಆದಿವಾಸಿ ಹುಡುಗಿಯನ್ನು ಪ್ರೇಮಿಸಿದ್ದರೆನ್ನಲಾಗಿದೆ. ಇದೇ ಸಮಯದಲ್ಲಿ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಹೋರಾಡಲು ಆದಿವಾಸಿಗಳಲ್ಲಿ ಹೊಸ ಚೈತನ್ಯ ಮೂಡಿಸುವ ಕಾರಣಕ್ಕಾಗಿ ತಮ್ಮನ್ನು ತಾವೇ ದೇವರ ಅವತಾರ ‘ಧರ್ತಿ ಅಬ್ಬಾ'(ಭೂಮಿಯ ತಂದೆ) ಎಂದು ಘೋಷಿಸಿಕೊಂಡರು. ಆ ಮೂಲಕ ಪ್ರಕೃತಿಯೇ ದೇವರೆಂಬ ನಂಬಿಕೆಯ ಬುನಾದಿ ಮೇಲೆ ಹೊಸದಾಗಿ ಬುಡಕಟ್ಟು ಧರ್ಮ ಸ್ಥಾಪಿಸಿದರು.

ಬ್ರಿಟಿಷ್ ಸರ್ಕಾರ 1893-94ರ ಹೊತ್ತಿಗೆ ಆ ಪ್ರದೇಶದಲ್ಲಿದ್ದ ಹಳ್ಳಿಗಳನ್ನೂ ಸೇರಿಸಿದಂತೆ ಕಾಡುಗಳೆಲ್ಲವನ್ನೂ ರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿತು. ಈ ಮೂಲಕ ಆದಿವಾಸಿ ಬುಡಕಟ್ಟು ಜನರ ಹಕ್ಕುಗಳನ್ನು ಕಿತ್ತುಕೊಂಡಿತು. ಇದರಿಂದ ಸಿಡಿದೆದ್ದ ಬಿರ್ಸಾ, ಹೋರಾಟಕ್ಕೆ ಸನ್ನದ್ಧರಾಗುವಂತೆ ಜನರನ್ನು ಪ್ರೇರೇಪಿಸಿದರು. 1894ರ ಅಕ್ಟೋಬರ್ 1ರಂದು ಛೋಟಾ ನಾಗಪುರ್ ಎಂಬಲ್ಲಿ ಬೃಹತ್ ಮೆರವಣಿಗೆ ನಡೆಸಿ ‘ಉಳುವವನೆ ಭೂಮಿಯ ಒಡೆಯನಾಗಬೇಕು ಹಾಗೂ ಬ್ರಿಟನ್ ಮಹಾರಾಣಿಯ ಆಡಳಿತ ಕೊನೆಗಾಣಿಸಬೇಕು’ ಎಂದು ಒತ್ತಾಯಿಸಿದರು. ಪ್ರತಿಭಟನೆ ಯಶಸ್ವಿಯಾಗಿ ದಿನೇ ದಿನೆ ಅವರ ಖ್ಯಾತಿ ಹೆಚ್ಚಿದ್ದು ಬ್ರಿಟಿಷರಿಗೆ ಸಹಿಸಲಾಗದೆ, ಹಜಿರಾಬಾದ್ ಜೈಲಿಗೆ ದೂಡಿದರು. ಎರಡು ವರ್ಷ ಕಾರಾಗೃಹ ವಾಸ ಮುಗಿಸಿ, ಭೂಗತನಾಗಿದ್ದುಕೊಂಡು ಹೋರಾಟ ಮುಂದುವರೆಸಿದರು.
ಬ್ರಿಟಿಷರ ಬೆಂಲಿಸುತ್ತಿದ್ದವರ ಮೇಲೆ ಗೆರಿಲ್ಲಾ ಯುದ್ಧ ಸಾರಿದರು. ನೂರಾರು ಪೊಲೀಸರ ಹತ್ಯೆಗೈದರು. ಬ್ರಿಟಿಷ್ ಕಟ್ಟಡಗಳನ್ನು ನೆಲಸಮ ಮಾಡಿದರು. 1899ರ ಮಾರ್ಚ್ ತಿಂಗಳಿನಲ್ಲಿ ಚಕ್ರ ದರ್ಫುರ್ ಕಾಡಿನಲ್ಲಿ ಬಿರ್ಸಾ ಮುಂಡಾ ಅವರನ್ನು ಬಂಧಿಸಲಾಯಿತು. 1900ರ ಜೂನ್. 9ರಂದು ಜೈಲಿನಲ್ಲಿ ಕೇವಲ 25 ವರ್ಷ ಪ್ರಾಯದವರಿದ್ದಾಗಲೇ ಕೊನೆಯುಸಿರೆಳೆದರು.
ನ.15ರಂದು ಬಿರ್ಸಾ ಮುಂಡಾ ಜನ್ಮ ದಿನವನ್ನು ‘ಜನಜಾತಿಯ ಗೌರವ್ ದಿವಸ್’ ಎಂದು ಆಚರಿಸಲಾಗುತ್ತದೆ. ಭಾರತದ ಸಾಮಾಜಿಕ, ಸಾಂಸ್ಕೃತಿಕ ರಚನೆಯಲ್ಲಿ ಬುಡಕಟ್ಟು ಸಮುದಾಯಗಳ ಪ್ರಾಮುಖ್ಯತೆ ಅಗಾಧವಾಗಿದೆ. ಬುಡಕಟ್ಟು ಸಮಾಜದ ಸ್ಥಿತಿ ಮತ್ತು ದಿಕ್ಕನ್ನು ಬದಲಿಸುವಲ್ಲಿ ಅವರು ವಹಿಸಿದ ಪಾತ್ರ ಬಹುದೊಡ್ಡದು. ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟ, ಸಮುದಾಯದವರ ಮೇಲಿನ ಶೋಷಣೆ ವಿರುದ್ಧದ ಹೋರಾಟ, ಸಮುದಾಯಕ್ಕಾಗಿ ನೀಡಿದ ಕೊಡುಗೆ, ತಮ್ಮ ತ್ಯಾಗದಿಂದ ಇತಿಹಾಸ ಪುಟ ಸೇರಿದ ಮಹಾನ್ ವೀರ. ಅಲ್ಪಾವಧಿಯಲ್ಲೇ ಬುಡಕಟ್ಟು ಸಮುದಾಯಗಳ ಏಕೀಕರಣ ಶಿಲ್ಪಿಯಾಗಿಬಿಟ್ಟರು.

ಲೇಖಕ ಅಮ್ಮತ್ತಿಯ ಅರ್ಜುನ್ ಮೌರ್ಯ ಈದಿನ.ಕಾಮ್ ಜೊತೆ ಮಾತನಾಡಿ, “ಒಂದು ಸಮುದಾಯದ ಅಸ್ತಿತ್ವದ ಮೇಲೆ ಯಾವುದೇ ಬಲವಂತ, ಒತ್ತಡಗಳನ್ನು ಹೇರುವ ಧರ್ಮ, ಬಲಾಢ್ಯ ಸಮುದಾಯಗಳನ್ನು ವಿರೋಧಿಸಲೇಬೇಕಾದ ಅಗತ್ಯತೆ, ಅನಿವಾರ್ಯತೆಯನ್ನು ನಾಯಕನಾದದವನು ಹುಟ್ಟು ಹಾಕಬೇಕು. ತನ್ನ ಸಮುದಾಯದ ಅಸ್ಮಿತೆ, ಪರಂಪರೆ, ಸಂಸ್ಕೃತಿ, ಕೃಷಿ, ಜೀವನ ವಿಧಾನಗಳ ಮೇಲೆ ಕೊಡಲಿಪೆಟ್ಟು ಬಿದ್ದಾಗ ಒಬ್ಬ ಛಲಗಾರ ನಾಯಕ ಹುಟ್ಟಬೇಕು. ಮಹಾ ಹೋರಾಟಕ್ಕೆ ನಾಂದಿ ಹಾಡಬೇಕು ಎಂಬುದರ ಸಂಕೇತವೇ ಬಿರ್ಸಾ ಮುಂಡಾ. ಆದಿವಾಸಿ ಯೋಧರ ಚಳವಳಿ (ಮಹಾ ಹೋರಾಟ) ಯುದ್ಧಕ್ಕೂ ಬ್ರಿಟಿಷ್ ಜಮೀನ್ದಾರಿ ವ್ಯವಸ್ಥೆ ಹಾಗೂ ಬ್ರಿಟಿಷ್ ಅರಣ್ಯ ಕಾಯ್ದೆ ಕಾನೂನು ಹಾಗೂ ಸ್ಥಳೀಯ ಜಮೀನ್ದಾರಿ ವ್ಯವಸ್ಥೆ ವಿರುದ್ಧದ ಹೋರಾಟ, ಭೂಹಕ್ಕುಗಳು, ಭೂ ಸಂರಕ್ಷಣೆಗಳ ಬಗ್ಗೆ ಅವತ್ತಿನ ಮುಂಡಾ ಜನಾಂಗದ ಹೋರಾಟಗಳು ಇವತ್ತಿನ ಜಡ್ಡು ಕಟ್ಟಿದ ನಾಯಕತ್ವಗಳಿಗೆ ಪಾಠವಾಗಬೇಕು. ರಾಜಕೀಯ ಒಳ ಒಪ್ಪಂದಗಳಂತೆ ಗೋಚರಿಸುವ ಇವತ್ತಿನ ಕೆಲ ಬುಡಕಟ್ಟು ಹೋರಾಟದ ಜನನಾಯಕರಿಗೆ ಬಿರ್ಸಾ ಮುಂಡಾ ನಾಯಕತ್ವ ಆದರ್ಶವಾಗಬೇಕು. ಅವರ ಕ್ರಾಂತಿಕಾರಿ ನಾಯಕತ್ವದಲ್ಲಿ ನಡೆದ ಭೂಸಂರಕ್ಷಣೆ ಹಕ್ಕು, ಬ್ರಿಟಿಷ್ ಅರಣ್ಯ ಕಾಯ್ದೆ, ಆಧ್ಯಾತ್ಮಿಕ ಪರಂಪರೆಯ ಹೊಸ ಅಧ್ಯಾಯ ಇವೆಲ್ಲವೂ ಭಾರತದ ಬುಡಕಟ್ಟು ಇತಿಹಾಸದ ಮೈಲಿಗಲ್ಲುಗಳು. ಅಂಡಮಾನಿನ ಬುಡಕಟ್ಟು ಜರವಾ ಜನಾಂಗದ ಹೋರಾಟದ ಸ್ವರೂಪಗಳನ್ನು ನಾವು ರಹಮತ್ ತರೀಕೆರೆಯವರ ಲೇಖನಗಳಲ್ಲಿ ಓದಿದ್ದೇವೆ. ಜರವಾ ಜನಾಂಗ ಕೂಡ ತನ್ನ ಭೂಹಕ್ಕಿಗಾಗಿ ಮಾಡಿದ ಹೋರಾಟಗಳು, ಅಬರದಿನ್ ದಾಳಿ ಪ್ರಕರಣಗಳು ಇವತ್ತಿಗೂ ‘ಅಸ್ಮಿತೆ’ ವಿಚಾರ ಬಂದಾಗ ಹೋರಾಟ ಹೇಗೆ ಅನಿವಾರ್ಯ ಎಂಬುದನ್ನು ಕಲಿಸುತ್ತದೆ. ಹಾಗಾಗಿ, ಬಿರ್ಸಾ ಮುಂಡಾ ಬದುಕಿದ್ದು ಕಡಿಮೆ ಅವಧಿಯಾಗಿದ್ದರೂ ಅವರ ಹೋರಾಟ, ಚಳವಳಿ ಇವತ್ತಿಗೂ ಶ್ರೇಷ್ಠ” ಎಂದು ಅಭಿಪ್ರಾಯಪಟ್ಟರು.
ಜಗತ್ತು ಆಧುನಿಕತೆಗೆ ತೆರೆದುಕೊಂಡರೂ ಆದಿವಾಸಿಗಳ ಬದುಕು ಬದಲಾಗಿಲ್ಲ. ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿಗೊಂಡು 75 ವರ್ಷಗಳೇ ಕಳೆದರೂ ಚಿಕ್ಕ ಸೂರಿಗೂ ಕಷ್ಟಪಡುತ್ತಿದೆ ಸಮುದಾಯ. ಆಳುವ ಸರ್ಕಾರಗಳು ಅವರನ್ನು ಮತಗಳ ಸರಕಾಗಿಸಿಕೊಂಡಿವೆಯೇ ಹೊರತು ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ. ಸಂವಿಧಾನ ದತ್ತವಾದ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡು ನಾಗರಿಕ ಸಮಾಜಕ್ಕೂ ತಮಗೂ ಸಂಬಂಧವಿರದಂತೆ ಬದುಕುತ್ತಿರುವ ಶೋಷಿತ ಸಮುದಾಯವದು.

ಆದಿವಾಸಿ ಬುಡಕಟ್ಟು ಮಂದಿ ತಮ್ಮ ಅಸ್ಮಿತೆಗಾಗಿ ಬಿರ್ಸಾ ಮುಂಡಾರಂತೆ ಹೋರಾಡಬೇಕಿದೆ. ತಮ್ಮ ಹಕ್ಕುಗಳನ್ನು ತಾವುಗಳೇ ಪಡೆದುಕೊಳ್ಳಬೇಕಿದೆ. ದೀನ ದಲಿತರಿಗೆ, ದಮನಿತರಿಗೆ, ಶೋಷಿತರಿಗೆ ಅಂಬೇಡ್ಕರ್ ಶಕ್ತಿಯಾದಂತೆ, ಸ್ವಾಭಿಮಾನದ ಹೋರಾಟಗಾರ ಬಿರ್ಸಾ ಮುಂಡಾ ಆದಿವಾಸಿಗಳ ಶಕ್ತಿಯಾಗಬೇಕು. ಮುಗ್ದತೆಯಿಂದ, ಹಿಂಜರಿಕೆಯಿಂದ ಹೊರಬಂದು ಸಂವಿಧಾನದ ಆಶಯದಂತೆ ಬಾಳಬೇಕು, ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿಕೊಳ್ಳಬೇಕು. ‘ನಂಗ ಕಾಡ್, ನಂಗ ಜಮ್ಮಾ’ ಆದಿವಾಸಿಗಳ ಹಕ್ಕಾಗಿ, ನಾಗರಿಕ ಸಮಾಜದ ಭಾಗವಾಗಿ, ಎತ್ತರೆತ್ತರದ ಸ್ಥಾನಮಾನಗಳನ್ನು ಪಡೆಯುವಂತಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಾರಿ ಕೆರೆಹಾಡಿ ಭೇಟಿ ಸಂದರ್ಭದಲ್ಲಿ ‘ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಮುಂದಿನ ಬಜೆಟ್ ವೇಳೆಗೆ ಅದು ಘೋಷಣೆಯಾಗಬೇಕು ಎಂಬುದು ಆದಿವಾಸಿ ಬುಡಕಟ್ಟು ಜನರ ಆಶಯ. ಮೂಲಭೂತ ಸೌಕರ್ಯವಾದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಿದ್ಯುತ್, ಒಳ ಚರಂಡಿ, ವಸತಿ ಯೋಜನೆಗಳು ಪರಿಪೂರ್ಣವಾಗಿ ಅನುಷ್ಠಾನ ಆಗಬೇಕು.
ಈ ಸುದ್ದಿ ಓದಿದ್ದೀರಾ? ಕೆ ಆರ್ ನಗರ | ಮಕ್ಕಳ ದಿನಾಚರಣೆಯಂದು ಮಕ್ಕಳ ಹಕ್ಕುಗಳ ಅರಿವಿನ ಕಾರ್ಯಕ್ರಮ
ಹಲ್ಲು ಕಿತ್ತ ಹಾವಂತಾಗಿರುವ ಐಟಿಡಿಪಿ ಇಲಾಖೆ (ಗಿರಿಜನ ಅಭಿವೃದ್ಧಿ ಇಲಾಖೆ) ಅಧಿಕಾರಿಗಳಿಗೆ ತಮ್ಮ ಕರ್ತವ್ಯದ ಹೊಣೆಗಾರಿಕೆಯ ಅರಿವನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ತಿಳಿಸಿಕೊಡಬೇಕು. ಆದಿವಾಸಿ ಬುಡಕಟ್ಟು ಸಮುದಾಯದ ಅಭಿವೃದ್ದಿಗೆ ಮುಂದಾಗಬೇಕು. ಬಿರ್ಸಾ ಮುಂಡಾ ಜನ್ಮ ದಿನ ಬರೀ ಆಚರಣೆ ಆಗದೆ, ಅನುಷ್ಠಾನದ ಮೂಲಕ ಶಕ್ತಿಯಾಗಿ ರೂಪುಗೊಳ್ಳಬೇಕು. ಆದಿವಾಸಿ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಬುಡಕಟ್ಟು ಉಪ ಯೋಜನೆ (ಟಿಎಸ್ಪಿ)ಯಡಿ ಜನರ ಬದುಕಿಗೆ ಕ್ರಿಯಾಯೋಜನೆ ಸಿದ್ದಪಡಿಸಿ ಆರ್ಥಿಕವಾಗಿ ಬಲ ತುಂಬಬೇಕು. ಆಗ ಮಾತ್ರ ಬಿರ್ಸಾ ಮುಂಡಾ ಅವರ ಕನಸು ನನಸಾಗಲು ಸಾಧ್ಯ.





