ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೈಸೂರಿನ ಕೇಂದ್ರ ಸಂವಹನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜನಜಾತೀಯ ಗೌರವ ದಿವಸ ಅಂಗವಾಗಿ ಆಯೋಜಿಸಲಾಗಿದ್ದ ಕ್ರಾಂತಿಕಾರಿ ಬುಡಕಟ್ಟು ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಬುಡಕಟ್ಟು ಜನರಿಗೆ ಸ್ವಾತಂತ್ರ್ಯದ ಜನಜಾಗೃತಿ ಮೂಡಿಸಿದ ನಾಯಕ ಬಿರ್ಸಾ ಮುಂಡಾ ಎಂದು ಹೇಳಿದರು.
“ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯಗಳನ್ನು ಮೆಟ್ಟಿನಿಂತು, ಅರಣ್ಯ ಸಂಪತ್ತು ರಕ್ಷಣೆಯ ಹಕ್ಕುಗಳಿಗಾಗಿ ಬುಡಕಟ್ಟು ಜನರನ್ನು ಸಂಘಟಿಸಿದ ಸ್ವಾತಂತ್ರ್ಯ ಹೋರಾಟಗಾರ ಆದಿವಾಸಿಗಳ ಅಸ್ಮಿತೆಯಾಗಿದ್ದಾರೆ. ಭಾರತದ ಸ್ವಾತಂತ್ರ್ಯಕ್ಕಾಗಿ ಸಾಲು ಸಾಲು ನಾಯಕರು ಹೋರಾಟ ನಡೆಸಿದ್ದಾರೆ. ಕಾಡನ್ನು ಪ್ರವೇಶಿಸಿ ಆದಿವಾಸಿಗಳನ್ನು ಮತಾಂತರ ಮಾಡಿ ದೌರ್ಜನ್ಯ ನಡೆಸಿ ಕಾಡಿನ ಸಂಪತ್ತನ್ನು ದೋಚುತ್ತಿದ್ದ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಬಿರ್ಸಾ ಮುಂಡಾ ಕಾಡಿದರು. ದೇಶದ ಹಲವು ಭಾಗಗಳಲ್ಲಿದ್ದ ಬುಡಕಟ್ಟು ಜನರಿಗೆ ಸ್ವಾತಂತ್ರ್ಯದ ಜನಜಾಗೃತಿ ಮೂಡಿಸಿ ಗೆರಿಲ್ಲಾ ಯುದ್ಧತಂತ್ರದ ಮೂಲಕ ಬ್ರಿಟಿಷರನ್ನು ಹಿಮ್ಮೆಟ್ಟಿಸಿದರು”.
ಆದರೂ, “ಪಿರಂಗಿಗಳ ಆಧುನಿಕ ಯುದ್ದೋಪಕರಣಗಳ ಮುಂದೆ ತಲೆಬಾಗಿ ಸೆರೆಯಾದ ಬಿರ್ಸಾ ಮುಂಡಾ ಅವರು ಆದಿವಾಸಿ ಸಂಸ್ಕೃತಿಗೆ ಮರುಹುಟ್ಟು ನೀಡಿದರು. ಬುಡಕಟ್ಟು ಜನರ ದನಿಯಾದ ಬಿರ್ಸಾ ಮುಂಡ ಅವರ ತ್ಯಾಗ, ಬಲಿದಾನ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡಿದ ಬಿರ್ಸಾ ಮುಂಡಾ ಅವರು ಕಾಡಿನ ಜನರ ಅಸ್ಮಿತೆಯಾಗಿದ್ದಾರೆ ಎಂದರೆ ತಪ್ಪಾಗಲಾರದು” ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, “ಚಾಮರಾಜನಗರ ಜಿಲ್ಲೆಯಲ್ಲಿ ಶೇ.50ಕ್ಕೂ ಹೆಚ್ಚು ಅರಣ್ಯ ಪ್ರದೇಶವಿದ್ದು, ಆದಿವಾಸಿಗಳ ದಿನನಿತ್ಯದ ಜೀವನ ಕಾಡಿನೊಂದಿಗೆ ಆರಂಭವಾಗಲಿದೆ. ಕಾಡಿನ ನಿಜವಾದ ರಕ್ಷಕರು ನೀವು, ಅರಣ್ಯ ಸಂಪತ್ತು, ವನ್ಯಜೀವಿ ಸಂರಕ್ಷಣೆ ನಿಮ್ಮ ಕಾಯಕವಾಗಿದೆ. ಅರಣ್ಯ ರಕ್ಷಣೆ ಕಾರ್ಯದಲ್ಲಿ ನಿರಂತರವಾಗಿ ಮುಂದುವರೆಯಬೇಕು. ಪ್ರಜಾಪ್ರಭುತ್ವ ಎಲ್ಲರಿಗೂ ಬದುಕುವ ಹಕ್ಕು ನೀಡಿದೆ. ಆದಿವಾಸಿಗಳು ಅರಣ್ಯ ಹಾಗೂ ಅರಣ್ಯದ ವನ್ಯಜೀವಿಗಳೊಂದಿಗೆ ಸಹಜೀವನ ನಡೆಸಬೇಕಾದ ಅಗತ್ಯವಿದೆ. ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ. ಆದಿವಾಸಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು” ಎಂದು ಹೇಳಿದರು.
ಆದಿವಾಸಿ ಯುವಕರು ಚಿಕ್ಕವಯಸ್ಸಿಗೆ ದುಶ್ಚಟಗಳಿಗೆ ಬಲಿಯಾಗಬಾರದು. ಬಾಲ್ಯವಿವಾಹದ ವಿರುದ್ಧ ಜಾಗೃತರಾಗಬೇಕು. ಆರೋಗ್ಯ ಇಲಾಖೆಯಿಂದ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ತಡೆಯಲು ಮೊಬೈಲ್ ಅನಿಮಿಯಾ ಕಿಟ್ ನೀಡಲಾಗುತ್ತಿದೆ. ಮದುವೆಯಾಗಿರುವ 250 ಹೊಸ ಜೋಡಿಗಳನ್ನು ತಪಾಸಣೆ ನಡೆಸಿ ಸ್ಥಿರ ಆರೋಗ್ಯದ ಮಾಹಿತಿ ಪಡೆಯಲಾಗಿದೆ. ಹೆಣ್ಣುಮಕ್ಕಳು ಮುಟ್ಟಿನ ತೊಂದರೆ ಅನುಭವಿಸದಿರಲು ಪ್ರಾಣಸಖಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಹಾಡಿಗಳಿಗೆ ಮೂಲಸೌಲಭ್ಯ ಒದಗಿಸಲು ₹42 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿ ಮನೆಮನೆಗೂ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ತಾಂತ್ರಿಕ ಸಮಸ್ಯೆಯನ್ನು ಸದ್ಯದಲ್ಲಿಯೇ ಸರಿಪಡಿಸಲಾಗುವುದು. ರಸ್ತೆ, ಕುಡಿಯುವ ನೀರು, ಅರಣ್ಯ ಹಕ್ಕುಪತ್ರ, ಆಧಾರ್ ಕಾರ್ಡ್ ಸೌಲಭ್ಯಗಳನ್ನು ಒದಗಿಸಿ ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಮಾತನಾಡಿ, “ಚಿಕ್ಕವಯಸ್ಸಿನಲ್ಲಿಯೇ ಅತ್ಯಂತ ಚುರುಕು ಬುದ್ದಿಯ ಬಿರ್ಸಾ ಮುಂಡಾ ಅವರು ಬ್ರಿಟಿಷರ ಧರ್ಮಾಂದತೆ, ಅದಿವಾಸಿಗಳ ಮೂಲ ಸಂಸ್ಕೃತಿ ನಾಶಕ್ಕೆ ಕಾರಣವಾಗಿತ್ತು. ಪೊಲೀಸರ ಬೆದರಿಕೆ, ತೆರಿಗೆ ಹೆಚ್ಚಳದ ಹಿಂಸೆ ಸೇರಿದಂತೆ ಬ್ರಿಟಿಷರ ಅನ್ಯಾಯವನ್ನು ಸಹಿಸದ ಅವರು ಆದಿವಾಸಿಗಳ ಆಶಾಕಿರಣವಾಗಿ ಮೂಡಿಬಂದರು. ದನಿ ಇಲ್ಲದವರಿಗೆ ಗಟ್ಟಿಧ್ವನಿಯಾಗಿದ್ದರು” ಎಂದರು.

ಬಿರ್ಸಾ ಮುಂಡಾ ಅವರ ಹೋರಾಟಗಳನ್ನು ಪರಿಗಣಿಸಿ ಬ್ರಿಟಿಷರು 1908ರಲ್ಲಿ ಛೋಟಾ ನಾಗ್ಪುರ್ ಟೆನೆನ್ಸಿ ಆಕ್ಟ್ ಜಾರಿಗೊಳಿಸಿ ಆದಿವಾಸಿಗಳ ಭೂಮಿಯ ಹಕ್ಕನ್ನು ಇತರರಿಗೆ ವರ್ಗಾಯಿಸದಂತೆ ಆದೇಶ ಹೊರಡಿಸಿದರು. ಇದು ಬಿರ್ಸಾ ಮುಂಡಾ ಅವರ ಹೋರಾಟಗಳಿಗೆ ಸಿಕ್ಕ ಜಯವಾವಾಗಿತ್ತು. ಆದಿವಾಸಿಗಳು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಜಾಗೃತರಾಗಬೇಕು. ನಗರದಲ್ಲಿ ಬಿರ್ಸಾ ಮುಂಡಾ ಅಧ್ಯಯನ ಪೀಠ ತೆರೆದು ಯುವ ಪೀಳಿಗೆಗೆ ಬಿರ್ಸಾ ಮುಂಡಾ ಅವರ ಆದರ್ಶದ ಹೋರಾಟಗಳನ್ನು ಇನ್ನಷ್ಟು ಪರಿಚಯಿಸಬೇಕು ಎಂದು ತಿಳಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಆದಿವಾಸಿಗಳ ಅಸ್ಮಿತೆಯ ಹರಿಕಾರ ಬಿರ್ಸಾ ಮುಂಡಾ
ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೈಸೂರಿನ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಾಧಿಕಾರಿ ಶೃತಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಬುಡಕಟ್ಟು ಜನಾಂಗದ ಮುಖಂಡರಾದ ರಂಗೇಗೌಡ, ಜಡೇಗೌಡ, ಕೋಣೂರೇಗೌಡ, ಮುದ್ದಯ್ಯ, ಕೇತಮ್ಮ, ರತ್ನಮ್ಮ, ಪುಟ್ಟಮ್ಮ, ದೊಡ್ಡಸಿದ್ದಯ್ಯ ಸೇರಿದಂತೆ ಹಲವರು ಇದ್ದರು.





