ತನ್ನ ಕಾರಿಗೆ ಪೆಟ್ರೋಲ್ ಸುರಿದು, ಅದರೊಳಗೆ ಕುಳಿತು ಬೆಂಕಿಹಚ್ಚಿಕೊಂಡು ಬಿಜೆಪಿ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಮೃತದನ್ನು ದಾವಣರೆಗೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಕೋಳ್ ಚಂದ್ರಶೇಖರ್ (56) ಎಂದು ಗುರುತಿಸಲಾಗಿದೆ.
ದಾವಣೆಗೆರೆ ತಾಲೂಕಿನ ನಾಗನೂರು ಸಮೀಪದ ಬಿಸ್ಲೇರಿ ಗ್ರಾಮದ ತೋಟದಲ್ಲಿ ಸಂಕೋಳ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವು ಗುರುತು ಸಿಗದಷ್ಟು ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಕೋಳ್ ಸಾವಿನ ಸುದ್ದಿ ಕೇಳಿ, ಅವರ ಮಗ ಮತ್ತು ಮಗಳು ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಸಿಮೆಂಟ್ ಮತ್ತು ಕಬ್ಬಿಣದ ಅಂಗಡಿ ಇಟ್ಟುಕೊಂಡಿದ್ದ ಶಾಮನೂರು ಗ್ರಾಮದ ಸಂಕೋಳ್ ಅವರು ಈ ಹಿಂದೆ ಬಿಜೆಪಿ ಉಪಾಧ್ಯಕ್ಷರೂ ಆಗಿದ್ದರು. ಬಿಸ್ಲೇರಿ ಮತ್ತು ಶಾಮನೂರಿನಲ್ಲಿ ಆಸ್ತಿ ಹೊಂದಿದ್ದರು. 2007ರಲ್ಲಿ ಶಾಮನೂರು ಕ್ಷೇತ್ರದಿಂದ ಅವರು ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




