ಗುತ್ತಿಗೆದಾರನಿಂದ ಕಮಿಷನ್ ರೂಪದಲ್ಲಿ 5 ಲಕ್ಷ ರೂ. ಲಂಚ ಪಡೆಯುತ್ತಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ‘ರೆಡ್‌ಹ್ಯಾಂಡ್’ಆಗಿ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆ ಬಳಿ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಾಸಕ ಚಂದ್ರು ಲಮಾಣಿ, ಅವರ ಇಬ್ಬರು ಪಿಎಗಳಾದ ಮಂಜುನಾಥ್ ಮತ್ತು ಗುರುನಾಯಕ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸುವ ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆಯನ್ನು ಚಿಂಚೋಳಿಯ ಕ್ಲಾಸ್-1 ಗುತ್ತಿಗೆದಾರ ವಿಜಯ್ ಪೂಜಾರ್ ಅವರು ಪಡೆದುಕೊಂಡಿದ್ದರು. ಈ ಗುತ್ತಿಗೆಯನ್ನು ಕೊಡಿಸಲು ವಿಜಯ್ ಬಳಿ ಶಾಸಕ ಚಂದ್ರು ಲಮಾಣಿ 11 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಲಂಚದ ಬೇಡಿಕೆ ಕುರಿತು ಗುತ್ತಿಗೆದಾರ ವಿಜಯ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ವಿಜಯ್ ಅವರನ್ನು ಮುಂದೆಬಿಟ್ಟು, ದಾಳಿ ನಡೆಸಿದ್ದಾರೆ. ಆರೋಪಿಗಳು 5 ಲಕ್ಷ ರೂ. ಲಂಚ ಪಡೆಯುವಾಗ ಬಂಧಿಸಿದ್ದಾರೆ.




