ಎಸ್ ಐ ಆರ್ (ವಿಶೇಷ ತೀವ್ರ ಪರಿಷ್ಕರಣೆ) ಎಂಬುದು ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳಲು, ತನ್ನದೇ ಮತಗಳನ್ನು ಹೆಚ್ಚಿಸಲು ಹೂಡಿರುವ ತಂತ್ರವಾಗಿದೆ. ಈ ಮೂಲಕ ತನ್ನ ವಿರೋಧಿಗಳನ್ನು ಮತದಾನ ಪ್ರಕ್ರಿಯೆಯಿಂದ ದೂರ ಇಟ್ಟು ಅಧಿಕಾರ ಮೆರೆಯುವ ದುರುದ್ದೇಶವಿದೆ, ಎಂದು ಖ್ಯಾತ ಲೇಖಕ ಶಿವಸುಂದರ್ ಹೇಳಿದರು.
ಮಂಗಳೂರಿನಲ್ಲಿ ಆಯೋಜಿಸಿದ್ದ ‘ನನ್ನ ಮತ, ನನ್ನ ಹಕ್ಕು ‘ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. “ಚುನಾವಣಾ ಆಯೋಗವನ್ನು ಬಲಹೀನಗೊಳಿಸುವುದು ಕಷ್ಟವಾದರೂ, ನಾಗರಿಕನ ಮತದ ಹಕ್ಕನ್ನು ಕಸಿಯುವುದು ಮೋದಿ ಸರಕಾರದ ಉದ್ದೇಶ. ಮತದಾನದ ಹಕ್ಕು ಕಳೆದುಕೊಂಡಾಗ ನಾಗರಿಕತ್ವದ ವಿಚಾರ ಬರುತ್ತದೆ. ಒಂದುದೇಶದ ನಾಗರಿಕ ಹಕ್ಕು ಕಳೆದುಕೊಳ್ಳುವುದು ಎಂದರೆ ಅದು ‘ನಾಗರಿಕ ಸಾವು’ ಎಂದ ಅವರು ಹೋರಾಟವೊಂದೇ ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಇರುವ ದಾರಿ” ಎಂದು ಪ್ರತಿಪಾದಿಸಿದರು.
“1995ರಲ್ಲಿ ನಾಗರಿಕರನ್ನು ಪೊಲೀಸ್ ವರದಿ ಮೇಲೆ ಮತದಾರರ ಪಟ್ಟಿಯಿಂದ ಕಿತ್ತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್,ಇದು ನ್ಯಾಯಾಧಿಕರಣ ಮಾಡಬೇಕಾದ ಕೆಲಸ, ಅಧಿಕಾರಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿತ್ತು. ಹಾಗಾಗಿ ಎಸ್ ಐ ಆರ್ ಕಾನೂನು ಉಲ್ಲಂಘನೆ ಯ ಕೆಲಸ. ಬಿಜೆಪಿ ತನ್ನ ಷಡ್ಯಂತ್ರ ದ ಮೂಲಕ ಅಧಿಕಾರ ದುರುಪಯೋಗ ಮಾಡುತ್ತಿರುವ ಈ ಪ್ರಕ್ರಿಯೆ ಮುಸ್ಲಿಂ ಸಮುದಾಯವನ್ನು ಗುರಿ ಮಾಡಿರುವುದಾಗಿದೆ” ಎಂದರು.
“ಬಿಎಲ್‌ಒ ನೀಡಿದ ವರದಿ ಆಧಾರದಲ್ಲಿ ಇಎಲ್‌ಒ ಒಬ್ಬನ ನಾಗರಿಕ ಹಕ್ಕನ್ನು ಕಸಿದುಕೊಳ್ಳುವುದು ಎಂದರೆ ಇದೊಂದು ದೇಶದ ಆಡಳಿತ ವ್ಯವಸ್ಥೆಯಲ್ಲಿ ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಬಹುದು. ಎಸ್ ಐ ಆರ್ ನಿಜವಾದ ಅರ್ಥದ ಮತದಾರರ ಪರಿಷ್ಕರಣೆ ಆಗಿದ್ದಲ್ಲಿ ಒಪ್ಪಿಕೊಳ್ಳಬಹುದಿತ್ತು. ಆದರೆ ಇದರ ಉದ್ದೇಶ ಬೇರೆಯೇ ಆಗಿದೆ, ಹಾಗಾಗಿ ಪ್ರಜ್ಞಾವಂತರು ಇದನ್ನು ವಿರೋಧಿಸಬೇಕಾಗಿದೆ” ಎಂದು ಶಿವಸುಂದರ್ ಹೇಳಿದರು.
“ರಾಜ್ಯ ಹೈಕೋರ್ಟ್ ನ್ಯಾಯವಾದಿ ಕ್ಲಿಪ್ಟನ್ ರೋಜಾರಿಯೋ ಮಾತನಾಡಿ, ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಶೀಲನೆ ನಡೆಯುತ್ತಿದೆ. ಇದರ ಹಿಂದಿನ ಉದ್ದೇಶ ಕೋಮುವಾದ ಮತ್ತು ಜಾತಿವಾದ ಎಂಬುದು ಗೊತ್ತಾಗಿದೆ. ನಮಗೆ ಹೋರಾಟ ಮಾತ್ರ ದಾರಿಯಾಗಿದೆ. ದೇಶದಲ್ಲಿ ಅರ್ಹ ನಾಗರಿಕರು ತಮ್ಮ ಮೂಲಭೂತ ಹಕ್ಕನ್ನು ಕಳೆದುಕೊಂಡಲ್ಲಿ ಪ್ರಜಾಪ್ರಭುತ್ವದ ಅರ್ಥ ಮಾಯವಾಗುತ್ತದೆ” ಎಂದರು.
ಮಂಗಳೂರು ಮಾಜಿ ಮೇಯರ್ ಕೆ. ಅಶ್ರಫ್, ಪಿಯುಸಿಎಲ್ ನ ಐಶ್ವರ್ಯ, ವೆಲ್ಫೇರ್ ಪಾರ್ಟಿಯ ಶ್ರೀಕಾಂತ್ ವೇದಿಕೆಯಲ್ಲಿದ್ದರು.




