ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ನಲ್ಲಿ ಪರೀಕ್ಷೆಯಲ್ಲೂ ಅವ್ಯವಹಾರ ನಡೆಯುತ್ತಿದೆ. ಹಣ ಕೊಟ್ಟರೆ ಪರೀಕ್ಷೆಯಲ್ಲಿ ಕಾಪಿ (ನಕಲು) ಮಾಡಲು ಅವಕಾಶ ನೀಡಲಾಗುತ್ತದೆ. ಒಂದು ವಿಷಯಕ್ಕೆ 1,000ದಿಂದ 1,500 ರೂ. ಲಂಚ ನೀಡಬೇಕಾಗುತ್ತದೆ ಎಂದು ಮಾತನಾಡಿರುವ ವಿಧ್ಯಾರ್ಥಿ ಮತ್ತು ಪ್ರಾಧ್ಯಾಪಕರ ನಡುವಿನ ಮಾತುಕತೆಯ ಆಡಿಯೋವೊಂದು ವೈರಲ್ ಆಗಿದೆ.
ಕೆಎಸ್‌ಒಯು ಅಧಿನದಲ್ಲಿರುವ ರಾಜ್ಯದ ನಾನಾ ವಿಭಾಗಗಳಲ್ಲಿ ಲಂಚದ ಕರ್ಮಕಾಂಡ ನಡೆಯುತ್ತಿದೆ ಎಂದು ಆರೋಪಿಲಾಗಿದೆ. ಸದ್ಯ ವೈರಲ್ ಆಗಿರುವ ಆಡಿಯೋದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿರುವ ಕೆಎಸ್‌ಒಯು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಂದ ಲಂಚ ಪಡೆಯುತ್ತಿರುವ ಬಗ್ಗೆ ವಿದ್ಯಾರ್ಥಿಯೊಬ್ಬ ಆರೋಪ ಮಾಡಿದ್ದಾನೆ.
ಆಡಿಯೋದಲ್ಲಿರುವಂತೆ, “ಎಂಎಸ್‌ಸಿ ಕೋರ್ಸ್ ಪರೀಕ್ಷೆಯಲ್ಲಿ ನಕಲು ಮಾಡಲು ಪ್ರಶ್ನೆ ಪತ್ರಿಕೆಗೆ 1,500 ರೂ. ಹಾಗೂ ಎಂಎ, ಎಂಕಾಮ್‌ಗೆ 1,000 ರೂ. ಕೊಡಬೇಕು. ಹಣ ಕೊಟ್ಟವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತದೆ. ಹಣ ಕೊಡದವರನ್ನು ಬೇರೆ ಕೊಠಡಿಗಳಲ್ಲಿ ಕೂರಿಸಿ ಕಟ್ಟುನಿಟ್ಟಾಗಿ ಪರೀಕ್ಷೆ ಬರೆಸುತ್ತಾರೆ” ಎಂದು ವಿದ್ಯಾರ್ಥಿ ಹೇಳಿರುವುದು ಕೇಳಿಬಂದಿದೆ.
“ಚಿತ್ರದುರ್ಗ ಪರೀಕ್ಷಾ ಕೇಂದ್ರದಲ್ಲಿ ಒಂದು ಸೆಮಿಸ್ಟರ್‌ಗೆ 3,000 ರೂ. ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದ ಯುವತಿಯೊಬ್ಬರು, ಪರೀಕ್ಷಾ ಕೇಂದ್ರವನ್ನು ದಾವಣಗೆರೆಗೆ ಬದಲಿಸಿಕೊಂಡಿದ್ದರು. ಆದರೆ, ಅಲ್ಲ, ಪ್ರತಿ ಪ್ರಶ್ನೆ ಪತ್ರಿಕೆಗೇ 1,000 ರೂ. ತೆಗೆದುಕೊಳ್ಳಲಾಗುತ್ತಿದೆ. ದಾವಣಗೆರೆ ಕೇಂದ್ರದ ಕೊಠಡಿಯಲ್ಲಿ 36 ಮಂದಿ ಪರೀಕ್ಷಾರ್ಥಿಗಳಿದ್ದರು. ಅಲ್ಲಿ, ನೋಂದಣಿ ಪ್ರಕಾರ ಕೂರಿಸದೇ, ಯಾರು ಎಲ್ಲಿ ಬೇಕಾದರೂ ಕೂರಲು ಅವಕಾಶ ನೀಡಲಾಗಿತ್ತು. ಆ ಬಗ್ಗೆ ಪ್ರಶ್ನಸಿದರೆ, ‘ಇನ್ವಿಜಿಲೇಟರ್’ ಬೇಜವಾಬ್ದಾರಿತನದ ಉತ್ತರ ನೀಡಿದ್ದಾರೆ” ಎಂದು ಆಡಿಯೋದಲ್ಲಿ ವಿದ್ಯಾರ್ಥಿ ಆರೋಪಿಸಿದ್ದಾರೆ.




