ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ವರ್ಷಗಳ ನಿರೀಕ್ಷೆಗೆ ಸ್ಪಂದಿಸುವ ಘೋಷಣೆಗಳು ಹೊರಬಿದ್ದಿವೆ. ಜಿಲ್ಲೆಯ ಜನರು ಬಹುಕಾಲದಿಂದ ಬೇಡಿಕೆ ಇಟ್ಟಿದ್ದ ಸುಸಜ್ಜಿತ ವೈದ್ಯಕೀಯ ಸೌಲಭ್ಯ ಸೇರಿದಂತೆ ಕರಾವಳಿ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗುವ ಕೆಲವು ಯೋಜನೆಗಳನ್ನು ಸರ್ಕಾರ ಪ್ರಕಟಿಸಿದೆ.
ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಘೋಷಣೆಯಾಗಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಜಿಲ್ಲೆಯಲ್ಲಿ ತುರ್ತು ಮತ್ತು ಗಂಭೀರ ಚಿಕಿತ್ಸೆಗೆ ಸೂಕ್ತ ಸೌಲಭ್ಯಗಳ ಕೊರತೆಯಿಂದಾಗಿ ಹಲವರು ಗೋವಾ ಅಥವಾ ಮಂಗಳೂರಿನತ್ತ ತೆರಳಬೇಕಾಗಿರುವ ಪರಿಸ್ಥಿತಿಯನ್ನು ಮನಗಂಡು,
ಕಾರವಾರದಲ್ಲಿ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಈ ಆಸ್ಪತ್ರೆ ಸ್ಥಾಪನೆಯಿಂದ ಅಪಘಾತಗಳು ಹಾಗೂ ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ದೊಡ್ಡ ನೆರವಾಗಲಿದೆ.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಸರ್ಕಾರ ವಿಶೇಷ ಗಮನ ಹರಿಸಿದೆ. ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಸಂಪರ್ಕರಹಿತ ಪ್ರದೇಶಗಳಲ್ಲಿ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳ ಸುರಕ್ಷಿತ ಸಂಚಾರಕ್ಕಾಗಿ 300 ಕಾಲುಸಂಕಗಳು (Foot Bridge) ನಿರ್ಮಿಸುವ ಯೋಜನೆ ಘೋಷಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ 3 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣ ದೇಣಿಗೆ
ಅದರ ಜೊತೆಗೆ, ಜಿಐ (GI) ಮಾನ್ಯತೆ ಪಡೆದ ಉತ್ಪನ್ನಗಳ ಪ್ರಚಾರ ಮತ್ತು ಬ್ರಾಂಡಿಂಗ್‌ಗೆ ಉತ್ತೇಜನ ನೀಡುವ ಕ್ರಮಗಳೂ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದು, ಜಿಲ್ಲೆಯ ವಿಶಿಷ್ಟ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆ ಸಾಧ್ಯವಾಗಲಿದೆ.
ಜಿಲ್ಲೆಯ ಪ್ರಮುಖ ಭಾಷಾ ಸಮುದಾಯಗಳಲ್ಲಿ ಒಂದಾದ ಹವ್ಯಕ ಭಾಷೆ ಮತ್ತು ಸಾಹಿತ್ಯದ ಸಂರಕ್ಷಣೆಗೂ ಈ ಬಾರಿ ಬಜೆಟ್‌ನಲ್ಲಿ ಗಮನ ಹರಿಸಲಾಗಿದೆ. ಹವ್ಯಕ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗುವ ಕಾರ್ಯಕ್ರಮಗಳಿಗೆ ಸರ್ಕಾರ ಪ್ರೋತ್ಸಾಹ ನೀಡುವ ಕುರಿತು ಘೋಷಿಸಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ದೊರೆತಿರುವ ಈ ಪ್ರಮುಖ ಘೋಷಣೆಯಿಂದ ಜಿಲ್ಲೆಯ ಜನರಲ್ಲಿ ಸಂತಸ ವ್ಯಕ್ತವಾಗಿದೆ. ಆದರೆ ಅರಣ್ಯವಾಸಿಗಳ ದೀರ್ಘಕಾಲದ ಅತಿಕ್ರಮಣ ಭೂಮಿ ಮಂಜೂರಾತಿ ಸಮಸ್ಯೆ, ಮೀನುಗಾರರ ಡೀಸೆಲ್ ಸಬ್ಸಿಡಿ ಸೇರಿದಂತೆ ಕೆಲವು ಪ್ರಮುಖ ಬೇಡಿಕೆಗಳ ಬಗ್ಗೆ ಇನ್ನೂ ಸ್ಪಷ್ಟ ಘೋಷಣೆಗಳಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಒಟ್ಟಾರೆ, ಈ ಬಜೆಟ್ ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಸೇವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುವ ಪ್ರಯತ್ನವಾಗಿದೆ.





