ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಬೈಂದೂರಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬುಧವಾರ 135 ದಿನ ಪೂರೈಸಿತು. ಈ ಹಿನ್ನೆಲೆಯಲ್ಲಿ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು.
ರೈತ ಮುಖಂಡರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ರೈತರ ಬೇಡಿಕೆಗೆ ಜಿಲ್ಲಾಡಳಿತ ಪೂರ್ಣ ಸಹಮತ ನೀಡಿದ್ದು, ಸಂಬಂಧಿತ ಸಂಪೂರ್ಣ ವರದಿಯನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಹೇಳಿದರು. ಸರಕಾರದ ಮಟ್ಟದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದು ಬಾಕಿ ಉಳಿದಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ರೈತರ ಧರಣಿ ಹಾಗೂ ಬೇಡಿಕೆಗಳು ಸರಕಾರದ ಗಮನದಲ್ಲಿವೆ ಎಂದರು.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ನಾಲ್ಕು ತಿಂಗಳುಗಳಿಂದ ನೂರಾರು ರೈತರು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತಿದ್ದಾರೆ. ಜಿಲ್ಲೆಯ ಪ್ರಮುಖರು ಪಕ್ಷಾತೀತವಾಗಿ ಸರಕಾರದ ಮಟ್ಟದಲ್ಲಿ ಈ ವಿಚಾರವನ್ನು ಗಮನ ಸೆಳೆಯಬೇಕು. ಬಡ ರೈತರನ್ನು ಸತಾಯಿಸದೆ ಆದಷ್ಟು ಶೀಘ್ರ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್., ಬೈಂದೂರು ತಹಶೀಲ್ದಾರ ರಾಮಚಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ರೈತ ಮುಖಂಡರಾದ ಅರುಣ್ ಕುಮಾರ್ ಶಿರೂರು, ವೀರಭದ್ರ ಗಾಣಿಗ, ಪದ್ಮಾಕ್ಷ ಗೋಳಿಬೇರು, ಹೆರಿಯಣ್ಣ ಪೂಜಾರಿ, ಸುಭಾಷ್ ಗಂಗನಾಡು, ರಾಮ ಮಯ್ಯಾಡಿ, ಸ್ಕರಿಯನ್, ನಾರಾಯಣ ಪೂಜಾರಿ, ಯಳಜಿತ್, ಪೌಲೂಸ್ ಹಾಗೂ ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಬಿಜೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.





