ಸಾರ್ವಜನಿಕ ಸಭೆಯೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿಯಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 20ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅಪಮಾನ ಮಾಡಿ, ಗರ್ಭಿಣಿಯರನ್ನು ನಿಂದಿಸಿದ್ದರು. ಈ ಸಂಬಂಧ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ವಿವಾದಾತ್ಮಕ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು
ದೂರಿನ ಆಧಾಯದಲ್ಲಿ ಅಪರಾಧ ಕ್ರಮಾಂಕ 118/2025, ಭಾರತೀಯ ನ್ಯಾಯ ಸಂಹಿತೆ (BNS) 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರನ್ನು ಅಪಮಾನಿಸಿದ್ದರು. ಹಾಗೆಯೇ ಕೋಮು ಪ್ರಚೋಧನಕಾರಿ ಹೇಳಿಕೆಯನ್ನು ನೀಡಿದ್ದರು. ಪ್ರಭಾಕರ್ ವಿಡಿಯೋವನ್ನು ಕಹಳೆ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ.





