“ಜಾತಿ ವ್ಯವಸ್ಥೆ ಎನ್ನುವುದು ಈ ದೇಶದಲ್ಲಿ ಎರಡು ಸಾವಿರ ವರ್ಷಗಳಿಂದ ಅಘೋಷಿತ, ಒಂದು ರೀತಿಯ ಘೋಷಿತವಾದ್ದ ಮನುವಾದಿಗಳ ಮನುಸ್ಮೃತಿ ಹಿಡಿತ ಸಾಧಿಸಿದೆ. ಸಮಾಜದಲ್ಲಿ ಇಂದಿಗೂ ಸಮಾನತೆ ಬಾರದೆ, ಅಸಮಾನತೆ ವಿಜೃಂಭಿಸಲು ಕಾರಣವಾಗಿದೆ. ದೇವಸ್ಥಾನಗಳಲ್ಲಿ ಇರುವ ಪ್ರಾಧಾನ್ಯತೆ, ಮೀಸಲಾತಿ, ಸಮಾಜದಲ್ಲಿ ಇಲ್ಲದಿರುವುದು ಶೋಚನೀಯ” ಎಂದು ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕರಾದ ಡಾ ಎಚ್ ವಿ ವಾಸು ಅವರು ಹೇಳಿದರು.
ಮೈಸೂರಿನ ಮಾನಸ ಗಂಗೋತ್ರಿಯ, ಸೆನೆಟ್ ಭವನದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಚಾರಿತ್ರಿಕ ಹಿನ್ನಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ’ ವಿಚಾರಗೋಷ್ಠಿಯಲ್ಲಿ ಮಾತನಾಡಿ, “ದೇಶದ ಬಹುಸಂಖ್ಯಾತ ಜನರನ್ನು ಶಿಕ್ಷಣದಿಂದ ವಂಚಿಸಿ, ದೇಶದ ಅಭಿವೃದ್ಧಿ ಸಾಧಿಸಲು ಹೇಗೆ ಸಾಧ್ಯ? ಜಾತಿ ವ್ಯವಸ್ಥೆಯೇ, ಅಭಿವೃದ್ಧಿಯ ವಿರೋಧಿ” ಎಂದು ಕಳವಳ ವ್ಯಕ್ತಪಡಿಸಿದರು.
“ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಕೇಂದ್ರ ಸಚಿವ ವಿ. ಸೋಮಣ್ಣ ಹೇಳ್ತಾರೆ ‘ಈ ಸಮೀಕ್ಷೆ ನಡೆಸುತ್ತಿರುವುದು ಮೇಲ್ಜಾತಿಯವರನ್ನು ತುಳಿಯುವ ಉದ್ದೇಶದಿಂದ’ ಎಂದು. ಇನ್ನೂ ಒಂದೆಜ್ಜೆ ಮುಂದೆ ನೋಡುವುದಾದರೆ ಇನ್ಫೋಸಿಸ್ ನಾರಾಯಣ ಮೂರ್ತಿ, ರಾಜ್ಯಸಭಾ ಸದಸ್ಯೆ ಸುಧಾ ನಾರಾಯಣಮೂರ್ತಿ ಅವರು ಬಹಿರಂಗವಾಗಿ ವಿರೋಧಿಸಿದ್ದಾರೆ. ಇದು ಹಿಂದುಳಿದ ವರ್ಗಗಳ ಸಮೀಕ್ಷೆ, ನಾವು ಹಿಂದುಳಿದ ವರ್ಗದವರಲ್ಲ ಎಂಬುದು ಅವರು ಕೊಟ್ಟಿರುವ ಕಾರಣ. ಬಹು ಮುಖ್ಯವಾಗಿ “ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಮೀಸಲಾತಿಗಾಗಿ ಹೋರಾಟ ನಡೆಸಿದ್ದು ಮೈಸೂರಿನ ಬ್ರಾಹ್ಮಣ ಸಮಾಜ. ಇದನ್ನ ಇತಿಹಾಸ ಹೇಳುತ್ತದೆ. ಹಾಗೆಯೇ, ಮದ್ರಾಸ್ ಬ್ರಾಹ್ಮಣರ ವಿರುದ್ಧ, ಮೈಸೂರು ಬ್ರಾಹ್ಮಣರು ನಡೆಸಿದ ಹೋರಾಟ ಮೊದಲಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ನ್ಯಾಯದ ಪರವಾಗಿ ಮೀಸಲಾತಿ ನೀಡುವಲ್ಲಿ ಮುಂದಾದಾಗ ಅಂದು ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯ ವಿರೋಧ ಮಾಡುತ್ತಾರೆ. ಇದನ್ನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಒಪ್ಪದಿದ್ದಾಗ ರಾಜೀನಾಮೆ ನೀಡಿದರು” ಇದನ್ನ ಅರಿಯುವುದು ಬಹುಮುಖ್ಯ ಎಂದರು.
“ಸಮಾಜದಲ್ಲಿ ಮೇಲರಿಮೆ, ಕೀಳರಿಮೆ ಇರಕೂಡದು. ಒಬ್ಬರಿಗೆ ಕೊಡುವ ಮೇಲರಿಮೆಯ ಹಿರಿತನ, ಇನ್ನೊರ್ವರಿಗೂ ಕೊಂಬುವ ಕೀಳರಿಮೆಯ ಹಿಂಜರಿಕೆ ಸಮಾಜದಲ್ಲಿ ಅಸಮಾನತೆ ಹೆಚ್ಚಿಸುತ್ತದೆ, ಹೊರತು ಸಾಮಾಜಿಕ ಘನತೆ ತಂದು ಕೊಡಲಾರದು. ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮಾನತೆ ನೀಡುವುದು ಸಂವಿಧಾನದ ಆದ್ಯತೆ. ಆದರೆ, ಪ್ರಸ್ತುತ ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ಸಮರ್ಪಕವಾದ ಮೀಸಲಾತಿ ಜಾರಿ ಮಾಡದೆ ಇದ್ದಾಗ, ಅನ್ಯಾಯದ ಮೀಸಲಾತಿ ಜಾರಿ ಮಾಡಿದಂತಾಗುತ್ತದೆ. ಈಗ ನಡೆಯುತ್ತಿರುವ ಸಮೀಕ್ಷೆಯನ್ನು ಮೇಲ್ವರ್ಗದ ಜನರು ವಿರೋಧಿಸುತ್ತಿದ್ದಾರೆ. ಹಾಗೆಯೇ, ಜನಪ್ರತಿನಿಧಿಗಳಾದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದರಾದ ಪ್ರಹ್ಲಾದ್ ಜೋಶಿ, ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಸುಳ್ಳು ಮಾಹಿತಿ ಹರಡುವುದರ ಮೂಲಕ ಸಮೀಕ್ಷೆಗೆ ವಿರೋಧ ವ್ಯಕ್ತ ಮಾಡುತ್ತಿದ್ದಾರೆ. ಇದರಿಂದಾಗಿಯೇ ಸಮೀಕ್ಷೆ ಪೂರ್ಣಗೊಳ್ಳುತ್ತಿಲ್ಲ, ಸಮೀಕ್ಷೆ ಹಿಂದುಳಿಯಲು, ಸಮೀಕ್ಷೆಗೆ ಮಾಹಿತಿ ನೀಡಲು ಹಿಂಜರಿಯುತ್ತಿರುವುದು ಕಾರಣ ಎಂದರು.
ಸರ್ಕಾರ ಜಾತಿ ಸಮೀಕ್ಷೆ ಅಷ್ಟೇ ಅಲ್ಲ, ಸಾಮಾಜಿಕ- ಆರ್ಥಿಕ- ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು. ಒಟ್ಟಾರೆ ದತ್ತಾಂಶದ ಮೇಲೆ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ. ಅದನ್ನ ಬಿಟ್ಟು ಬೇರೆ ಉದ್ದೇಶದಿಂದ ನಡೆಸುತ್ತಿದೆ ಎನ್ನುವುದು, ವಿರೋಧಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.





