ಕೂಸಿನ ಮನೆ ಮುಚ್ಚುವುದರಿಂದ ಮಹಿಳೆಯರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಹಾಲುಣಿಸಲು ಮನೆಗೆ ಬರಬೇಕಾಗುತ್ತದೆ. ನಂತರ ಕೆಲಸಕ್ಕೆ ಹೋಗಬೇಕಾಗುತ್ತದೆ. ಇವೆಲ್ಲವೂ ಮಹಿಳೆಯರ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಮತ್ತಷ್ಟು ಒತ್ತಡ ಹೆಚ್ಚಿಸುತ್ತವೆ.
ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಅಡಿಯಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಮಕ್ಕಳ ಆರೈಕೆಗಾಗಿ ಜಾರಿಯಲ್ಲಿರುವ ಕೂಸಿನ ಮನೆ ಯೋಜನೆಯ ಆರೈಕೆದಾರರಿಗೆ(ಕೇರ್ ಟೇಕರ್‌ಗಳಿಗೆ) ನೀಡುತ್ತಿದ್ದ ಗೌರವಧನವನ್ನು ನಿಲ್ಲಿಸುವ ಕೇಂದ್ರ ಸರ್ಕಾರದ ಆದೇಶ ಹೊಸ ಸವಾಲುಗಳನ್ನು ತಂದಿದೆ. ಈ ಆದೇಶದಿಂದಾಗಿ ಈಗಾಗಲೇ ಹಲವು ಕಡೆ ಕೂಸಿನ ಮನೆಗಳು ಮುಚ್ಚುತ್ತಿವೆ. ಆರೈಕೆದಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಗ್ರಾಮೀಣ ಮಹಿಳಾ ಕಾರ್ಮಿಕರ ಕುಟುಂಬಗಳಿಗೂ ಪರೋಕ್ಷವಾಗಿ ಒತ್ತಡ ಉಂಟಾಗುತ್ತದೆ.
ಕೂಸಿನಮನೆ ಯೋಜನೆಯನ್ನು ಕರ್ನಾಟಕ ಸರ್ಕಾರ 2023ರಲ್ಲಿ ಆರಂಭಿಸಿತ್ತು. ಮನರೇಗಾ ಕಾರ್ಮಿಕರ 6 ತಿಂಗಳಿಂದ 3 ವರ್ಷ ವಯಸ್ಸಿನ ಮಕ್ಕಳ ಲಾಲನೆ-ಪಾಲನೆಗಾಗಿ ಸ್ಥಾಪಿಸಲಾದ ಶಿಶುಪಾಲನಾ ಕೇಂದ್ರಗಳೇ ಕೂಸಿನಮನೆ. ರಾಜ್ಯದಲ್ಲಿ 4,000ಕ್ಕೂ ಅಧಿಕ ಕೇಂದ್ರಗಳನ್ನು ನಿರ್ಮಿಸಲು ಯೋಜನೆ ಇದ್ದು, ಈಗ ‘ಮನೆ’ಗಳ ಸಂಖ್ಯೆ 3,679ಕ್ಕೆ ಇಳಿದಿದೆ. 46,723 ಮಕ್ಕಳ ನೋಂದಣಿಯಾಗಿದೆ. ಕಲಬುರಗಿ ಜಿಲ್ಲೆಯೊಂದರಲ್ಲೇ ಪ್ರಸ್ತುತ 2,142 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮನರೇಗಾ ಕೆಲಸದ ಅವಧಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 5.30ರವರೆಗೆ ತೆರೆದಿರುವ ಈ ಮನೆಗಳಲ್ಲಿ ಮಕ್ಕಳು ಆರೈಕೆದಾರರ ನಿಗಾದಲ್ಲಿ ಇರುತ್ತಾರೆ.
ಕೂಸಿನ ಮನೆಗಳಲ್ಲಿ ಮಕ್ಕಳ ಆರೈಕೆಗೆ ಸಕ್ರಿಯ ಮನರೇಗಾ ಜಾಬ್‌ಕಾರ್ಡ್ ಹೊಂದಿರುವ ಇಬ್ಬರು ಮಹಿಳೆಯರಿಗೆ ಕೆಲಸ ನಿಯೋಜಿಸಲಾಗುತ್ತದೆ. ಮನರೇಗಾ ಕೂಲಿಗೆ ಬರುವ ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ 25ರಿಂದ 45 ವರ್ಷದೊಳಗಿನವರನ್ನು ಆರೈಕೆದಾರರಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಿಗೂ ದಿನಕ್ಕೆ ₹316ರಂತೆ ಸಂಬಳ ನೀಡಲಾಗುತ್ತದೆ. ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಆರೈಕೆಗೆ ಬೇಕಾದ ಕೌಶಲ ಹಾಗೂ ಮನೆಯ ನಿರ್ವಹಣೆ ಕುರಿತು ಏಳು ದಿನ ತರಬೇತಿ ನೀಡಲಾಗುತ್ತದೆ. ಆರೈಕೆದಾರರು ಈ ಮಕ್ಕಳ ಆಟ-ಪಾಠ, ಆಹಾರದ ಜತೆಗೆ ಆರೋಗ್ಯವನ್ನೂ ನೋಡಿಕೊಳ್ಳುತ್ತಾರೆ.

ಇದು ಅವರ ಮೂಲಭೂತ ಆದಾಯ ಮೂಲವಾಗಿತ್ತು. ಆದರೆ ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದಂತೆ, ಈ ಅನುದಾನವನ್ನು ನಿಲ್ಲಿಸಲು ಸೂಚನೆ ನೀಡಿದೆ. ಏಕೆಂದರೆ ಯೋಜನೆಯ ಅಡಿಯಲ್ಲಿ ಮಕ್ಕಳ ದಾಖಲೆ ಕಡಿಮೆಯಿದೆ ಮತ್ತು ಆರ್ಥಿಕ ಭಾರ ಹೆಚ್ಚಾಗಿದೆ. ಇದರಿಂದ ಆರೈಕೆದಾರರು ತಮ್ಮ ಕೆಲಸವನ್ನು ಮುಂದುವರೆಸಲು ಸಾಧ್ಯವಿಲ್ಲದಂತಾಗಿದೆ ಎಂಬ ಸಬೂಬು ಹೇಳುವ ಮೂಲಕ ಕೇಂದ್ರ ಸರ್ಕಾರ ನುಣುಚಿಕೊಳ್ಳುವ ಹುನ್ನಾರ ನಡೆಸಿದೆ.
ಕೇಂದ್ರ ಆದೇಶದ ಪರಿಣಾಮ: ಆರೈಕೆದಾರರ ಸಂಕಷ್ಟ
ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಸ್ಥಾಪಿತವಾದ ಏಕೈಕ ಕೂಸಿನ ಮನೆ ಮಕ್ಕಳ ಕೊರತೆಯಿಂದಾಗಿ ನಾಲ್ಕು ತಿಂಗಳಲ್ಲಿಯೇ ಮುಚ್ಚುವಂತಾಯಿತು. ಬಳಿಕ ಸಂಪೂರ್ಣವಾಗಿ ಜುಲೈ 2025ರಿಂದ ಸ್ಥಗಿತಗೊಂಡಿದೆ. ಇದೇ ರೀತಿ ಬೆಂಗಳೂರು, ಮೈಸೂರು, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹಲವು ಕೇಂದ್ರಗಳು ಬಂದ್ ಆಗುವ ಸಾಧ್ಯತೆಗಳಿವೆ.

ಗೌರವಧನ ನಿಲ್ಲಿಸಲ್ಪಟ್ಟಿದ್ದರಿಂದ ಕೂಸಿನಮನೆ ಆರೈಕೆದಾರರು (ಬಹುತೇಕ ಮಹಿಳೆಯರು) ಆದಾಯದಿಂದ ವಂಚಿತರಾಗಿದ್ದಾರೆ. ಬಾಗಲಕೋಟೆಯಲ್ಲಿ ಇದೇ ರೀತಿಯ ವಿಳಂಬಗಳಿಂದಾಗಿ ಕಾರ್ಮಿಕರು 7 ತಿಂಗಳ ಬಾಕಿ ವೇತನಕ್ಕಾಗಿ ಪ್ರತಿಭಟಿಸಿದ್ದಾರೆ. ಅಲ್ಲದೆ ಈಗ ಅನುದಾನವನ್ನೇ ನೀಡುವುದಿಲ್ಲ ಎನ್ನುತ್ತಿರುವುದು ಮಹಿಳೆಯರಿಗೆ ಇನ್ನಷ್ಟು ಆರ್ಥಿಕ ಹೊರೆಯಾಗುತ್ತದೆ.
ಗ್ರಾಮ ಪಂಚಾಯಿತಿಗಳು ಈ ಯೋಜನೆಯ ಆರ್ಥಿಕ-ಆಡಳಿತ ಭಾರ ಹೊರಲು ಹಿಂಜರಿಯುತ್ತಿವೆ. 2024ರಲ್ಲಿ ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರು ಸರ್ಕಾರದ ವಿರುದ್ಧ ಠರಾವುಗಳನ್ನು ಅಂಗೀಕರಿಸಿದ್ದರು. ಏಕೆಂದರೆ ಕೇಂದ್ರಗಳನ್ನು ನಿರ್ವಹಿಸಲು ಸ್ಥಳೀಯ ಅನುದಾನದಲ್ಲಿ ₹35,000 ವೆಚ್ಚ ಮಾಡುವುದು ಕಷ್ಟಕರವಾಗಿತ್ತು.
ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಮನರೇಗಾ ಕಾರ್ಮಿಕರಾದ ಗಂಗಮ್ಮ, “ಪಂಚಾಯಿತಿಗೆ ಒಂದರಂತೆ ಕೂಸಿನಮನೆ ತೆರೆಯಲಾಗಿದೆ. ಇದರಿಂದ ಹೆಣ್ಣುಮಕ್ಕಳು ತಮ್ಮ ಸಣ್ಣ ಮಕ್ಕಳನ್ನು ಅಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಅನುಕೂಲವಾಗುತ್ತದೆ. ಈಗ ಅನುದಾನದ ನೆಪ ಹೇಳಿ ಆ ಯೋಜನೆಯನ್ನೂ ನಿಲ್ಲಿಸಿದರೆ ಕೂಲಿಗೆ ಹೋಗುವ ತಾಯಂದಿರಿಗೆ ಸಂಕಷ್ಟ ಎದುರಾಗುತ್ತದೆ. ಮನರೇಗಾ ಕೆಲಸಗಳು ಮೊದಲೇ ಸರಿಯಾಗಿ ಸಿಗುವುದಿಲ್ಲ. ಮಕ್ಕಳನ್ನೂ ನೋಡಿಕೊಂಡು ಸಿಗುವ ಕೆಲಸಕ್ಕೂ ಹೋಗದಂತಾಗುತ್ತದೆ. ಹೀಗಾದರೆ ಮಹಿಳೆಯರು ಆರ್ಥಿಕವಾಗಿ ದುರ್ಬಲರಾಗುತ್ತಾರೆ. ಮನರೇಗಾ ಕೂಲಿಯನ್ನು ನಂಬಿಕೊಂಡು ಇರುವವರ ತಿನ್ನುವ ಅನ್ನ ಕಸಿದಂತಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಗುಡಿಗೆರೆ ಮಂಜುನಾಥ್ ಜಿ ಬಿ, “ಮಂಡ್ಯ ಜಿಲ್ಲೆಯ ಕೆ ಪಿ ದೊಡ್ಡಿ ಗ್ರಾಮದಲ್ಲಿ ʼಕೂಸಿನ ಮನೆʼ ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳನ್ನು ಬಿಟ್ಟು ತಾಯಂದಿರು ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಇಲ್ಲಿ ತಂದು ಬಿಟ್ಟು ಹೋಗುತ್ತಾರೆ. ಎಲ್ಲ ಮಕ್ಕಳು ಬೆರೆತು ಜತೆಯಲ್ಲಿ ಆಟವಾಡುತ್ತಾರೆ. ಜವಾಬ್ದಾರಿಯುತವಾಗಿ ನೋಡಿಕೊಳ್ಳುವ ತಾಯಂದಿರು ಇರುತ್ತಾರೆ, ಅವರಿಗೆ ಈ ಬಗ್ಗೆ ತರಬೇತಿಯನ್ನೂ ಕೊಡಲಾಗುತ್ತದೆ. ಹಾಗಾಗಿ ಮಕ್ಕಳನ್ನು ಶಿಸ್ತುಬದ್ಧವಾಗಿ ಆಟ ಪಾಠಗಳೊಂದಿಗೆ ನೋಡಿಕೊಳ್ಳಲಾಗುತ್ತದೆ” ಎಂದು ತಿಳಿಸಿದರು.

“ನಮ್ಮ ಪಂಚಾಯಿತಿಯ ಕೂಸಿನಮನೆಯಲ್ಲಿ ಎಂಟು ಮಂದಿ ಮಕ್ಕಳಿದ್ದಾರೆ. ಎಲ್ಲರೂ ಎರಡರಿಂದ ಎರಡೂವರೆ ವರ್ಷದೊಳಗಿನ ಮಕ್ಕಳು ಇಲ್ಲ ಅಂದ್ರೆ ಮಕ್ಕಳನ್ನು ಕಿಂಡರ್ ಗಾರ್ಡನ್‌ಗೆ ಕಳುಹಿಸಬೇಕಾಗುತ್ತದೆ. ಎಲ್ಲರಿಗೂ ಅಂತಹ ಅನುಕೂಲವಿರುವುದಿಲ್ಲ. ಎಲ್ಲ ಹಳ್ಳಿಯಲ್ಲೂ ಮಕ್ಕಳನ್ನು ನೋಡಿಕೊಳ್ಳುವಂತಹ ವ್ಯವಸ್ಥೆ ಇದೆಯಾ? ಇಲ್ಲ.
ಅಂಗನವಾಡಿ ಮತ್ತು ಕೂಸಿನಮನೆ ಎರಡನ್ನೂ ಒಟ್ಟುಗೂಡಿಸಿ, ಅಂಗನವಾಡಿ ಅನುದಾನದಲ್ಲಿ ಅಂಗನವಾಡಿ ಮಕ್ಕಳನ್ನು ನೋಡಿಕೊಂಡು, ಮನರೇಗಾ ಅಡಿ ಕೂಸಿನ ಮನೆ ಮಕ್ಕಳನ್ನೂ ಅಂಗನವಾಡಿಯಲ್ಲಿಯೇ ಇರುವಂತಾಗಬೇಕು. ಆಗ ಇನ್ನೂ ಅನುಕೂಲವಾಗುತ್ತದೆ. ಪ್ರತಿ ಹಳ್ಳಿಯಲ್ಲೂ ಅಂಗನವಾಡಿ ಇರುವುದರಿಂದ ಕೂಸಿನಮನೆ ಮಕ್ಕಳನ್ನು ಅಲ್ಲಿ ಬಿಡಬಹುದು. ಅಲ್ಲಿಯ ಮನರೇಗಾ ಕಾರ್ಮಿಕರು ಆ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಹೀಗಾದರೆ ಒಳಿತು. ಆಗ ಮಕ್ಕಳಿಗೆ ತಮ್ಮ ಎರಡನೇ ವಯಸ್ಸಿನಿಂದ ಆಡುತ್ತಲೇ ಬೇಸಿಕ್ ಶಿಕ್ಷಣ ಪಡೆದುಕೊಳ್ಳುತ್ತಾರೆ, ಶಿಸ್ತು ಕಲಿಯುತ್ತಾರೆ.
ಇಂತಹ ಕೂಸಿನಮನೆ ಯೋಜನೆ ನಮ್ಮ ಪಂಚಾಯಿತಿಯಲ್ಲಿ ತುಂಬಾ ಯಶಸ್ವಿಯಾಗಿ ನಡೆಯುತ್ತಿದೆ. ಕೊಠಡಿಯನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದು, ಮಕ್ಕಳಲ್ಲಿಯೂ ಒಳ್ಳೆಯ ಶಿಸ್ತು ಬರುತ್ತಿದೆ. ಮಕ್ಕಳು ಕೂಡ ನೀಟಾಗಿ ಕಾಣುತ್ತಾರೆ, ಖುಷಿ ಆಗುತ್ತದೆ. ನಿಜವಾಗಿಯೂ ಈ ಯೋಜನೆ ತುಂಬಾ ಉತ್ತಮವಾಗಿದೆ” ಎಂದು ಹೇಳಿದರು.

“ಕೂಸಿನಮನೆ ಯೋಜನೆಗೆ ಪ್ರತ್ಯೇಕ ಅನುದಾನವನ್ನು ಕೊಡುತ್ತಿಲ್ಲ. ಮನರೇಗಾ ಕಾರ್ಮಿಕರಿಗೆ ಬರುವ ಅನುದಾನದಲ್ಲಿಯೇ ಇಬ್ಬರಿಗೆ ಹಾಜರಾತಿಯಲ್ಲಿ ವಿನಾಯಿತಿ ನೀಡಿ, ಆ ಹಣವನ್ನು ಅಂದರೆ 100 ದಿನಗಳ ಮಾನವ ಕೆಲಸಕ್ಕೆ ಎಷ್ಟು ಹಣ ಸಿಗುತ್ತದೆಯೋ ಆ ಹಣವನ್ನೇ ಆರೈಕೆದಾರರಿಗೆ ಕೊಡಲಾಗುತ್ತದೆ” ಎಂದು ತಿಳಿಸಿದರು.
ಉಡುಪಿ ಜಿಲ್ಲೆಯ ಪಡುಬಿದ್ರೆ ಗ್ರಾಮ ಪಂಚಾಯಿತಿ ಪಿಡಿಒ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನರೇಗಾ ಕೆಲಸಗಳು ಹೆಚ್ಚು ನಡೆಯುವುದಿಲ್ಲ. ಕೂಸಿನ ಮನೆ ಆರಂಭಿಸಿದೆವು. ಆದರೆ ಮಕ್ಕಳು ಬಾರದ ಕಾರಣ ನಾಲ್ಕು ತಿಂಗಳಲ್ಲಿಯೇ ಸಂಪೂರ್ಣವಾಗಿ ಮುಚ್ಚಲಾಯಿತು” ಎಂದು ತಿಳಿಸಿದರು.
ಮಹಿಳಾ ಕಾರ್ಮಿಕರ ಮೇಲಿನ ಪರಿಣಾಮ: ಕೂಸಿನ ಮನೆ ಮುಚ್ಚುವುದರಿಂದ ಮಹಿಳೆಯರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಹಾಲುಣಿಸಲು ಮನೆಗೆ ಬರಬೇಕಾಗುತ್ತದೆ. ನಂತರ ಕೆಲಸಕ್ಕೆ ಹೋಗಬೇಕಾಗುತ್ತದೆ. ಇವೆಲ್ಲವೂ ಮಹಿಳೆಯರ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಮತ್ತಷ್ಟು ಒತ್ತಡ ಹೆಚ್ಚಿಸುತ್ತವೆ.
ಆದರೆ, ಕೆಲ ದಿನಗಳ ಹಿಂದೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ರಾಜ್ಯದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೆ ಪತ್ರ ಬರೆದಿದ್ದು, ‘ಆರೈಕೆದಾರರ ಗೌರವಧನವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಭರಿಸಲು ಮನರೇಗಾ ಕಾಯ್ದೆಯ ಶೆಡ್ಯೂಲ್–2ರಲ್ಲಿ ಅವಕಾಶವಿಲ್ಲ’ ಎಂದು ತಿಳಿಸಿದೆ. ಆರೈಕೆದಾರರಿಗೆ ತಕ್ಷಣದಿಂದ ವಿನಾಯಿತಿ ರದ್ದುಪಡಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯ ಸರ್ಕಾರ ಈ ಆದೇಶವನ್ನು ವಿರೋಧಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಗೌರವ ಧನವನ್ನು ಮರಳಿ ಆರಂಭಿಸುವಂತೆ ಒತ್ತಾಯಿಸಿದೆ. ಗೃಹ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ಸಾಮಾಜಿಕ ಜಾಲತಾಣದಲ್ಲಿ ಈ ಯೋಜನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.

“ಮಹಿಳಾ ಕಾರ್ಮಿಕರು ಮಕ್ಕಳನ್ನು ‘ಕೂಸಿನಮನೆ’ಗಳಲ್ಲಿ ಬಿಟ್ಟು ನಿಶ್ಚಿಂತೆಯಿಂದ ಮನರೇಗಾದಲ್ಲಿ ದುಡಿದು ಕೂಲಿ ಪಡೆಯುತ್ತಿದ್ದಾರೆ. ಕೂಸಿನಮನೆಯ ಆರೈಕೆದಾರರೂ ಮನರೇಗಾ ಭಾಗವೇ ಆಗಿದ್ದಾರೆ. ಆದ್ದರಿಂದ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರದ ಈ ಆದೇಶ ಸರಿಯಿಲ್ಲ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ವಿನಾಯಿತಿ ನೀಡುವಂತೆ ಮನವಿ ಮಾಡಲಾಗುವುದು” ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದರ ನಡುವೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಕರ್ನಾಟಕಕ್ಕೆ ₹622 ಕೋಟಿ ಬಿಡುಗಡೆ ಮಾಡದೆ ಬಾಕಿ ಇರಿಸಿಕೊಂಡಿದೆ.
ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಈ ಬಗ್ಗೆ ಉತ್ತರ ನೀಡಿದ್ದಾರೆ. ರಾಜ್ಯಕ್ಕೆ ಕೂಲಿ ಮೊತ್ತ ₹8.94 ಕೋಟಿ, ಸಾಮಗ್ರಿ ವೆಚ್ಚ ₹576 ಕೋಟಿ ಹಾಗೂ ಆಡಳಿತಾತ್ಮಕ ₹37 ಕೋಟಿ ಬಿಡುಗಡೆ ಮಾಡಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾರ್ಮಿಕ ಬಜೆಟ್, ಕೆಲಸದ ಬೇಡಿಕೆ, ಬಳಕೆಯ ಮಾದರಿಗಳು, ಬಾಕಿ ಇರುವ ಹೊಣೆಗಾರಿಕೆಗಳು ಮತ್ತು ರಾಜ್ಯಗಳು ಅಗತ್ಯ ದಾಖಲೆಗಳ ಸಲ್ಲಿಕೆಯನ್ನು ಆಧರಿಸಿ ಅನುದಾನ ಬಿಡುಗಡೆಯಾಗುತ್ತದೆ. ಅಗತ್ಯ ದಾಖಲೆಗಳ ಸಲ್ಲಿಕೆಯಲ್ಲಿ ತಡೆಯಾಗಿರುವುದು ಹಣ ಬಿಡುಗಡೆಯಾಗದಿರುವುದಕ್ಕೆ ಕಾರಣವಾಗಿದೆ. ಮನರೇಗಾ ಒಂದು ʼಬೇಡಿಕೆ-ಚಾಲಿತʼಯೋಜನೆಯಾಗಿದ್ದು, ರಾಜ್ಯಗಳು ಸರಿಯಾದ ಮಾಹಿತಿ ನೀಡದಿದ್ದರೆ ಹಣ ಬಿಡುಗಡೆ ಸ್ಥಗಿತಗೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ.
2025-26 ಆರ್ಥಿಕ ವರ್ಷದಲ್ಲಿ ನವೆಂಬರ್ 26ರವರೆಗೆ ದೇಶಾದ್ಯಂತ ₹68,394 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ₹57,854 ಕೋಟಿ ಕೂಲಿಗೆ ಮತ್ತು ₹10,540 ಕೋಟಿ ಸಾಮಗ್ರಿ/ಆಡಳಿತಕ್ಕೆ ಸೇರಿದೆ. ಆದರೆ ಕರ್ನಾಟಕದಂತಹ ರಾಜ್ಯಗಳಲ್ಲಿ ಈ ಹಣದ ತಗಾದೆಗಳು ಗ್ರಾಮೀಣ ಕೆಲಸಗಾರರ ಮೇಲೆ ಪರಿಣಾಮ ಬೀರುತ್ತವೆ.
ಮನರೇಗಾ ಕಾರ್ಮಿಕರು ಕೂಲಿ ಪಡೆಯದಿದ್ದರೆ, ಅವರ ಕುಟುಂಬಗಳು ಹಸಿವು ಮತ್ತು ಬಡತನಕ್ಕೆ ತುತ್ತಾಗುತ್ತವೆ. ಉದಾಹರಣೆಗೆ, ರಾಜ್ಯದ ಗ್ರಾಮೀಣ ಭಾಗಗಳಾದ ಕಲಬುರಗಿ, ಬೀದರ್ ಹಾವೇರಿ, ಗದಗದಂತಹ ಜಿಲ್ಲೆಗಳಿಗೆ ಈ ಅನುದಾನ ಬರದಿದ್ದರೆ ಕೆಲಸದ ದಿನಗಳು ಕಡಿಮೆಯಾಗಿ, ಕುಟುಂಬ ನಿರ್ವಹಣೆಯ ಆಧಾರವನ್ನೇ ಕಳೆದುಕೊಳ್ಳುವಂತಾಗುತ್ತದೆ.
ಇದನ್ನೂ ಓದಿದ್ದೀರಾ? ಕೇಂದ್ರದ ಕದ ತಟ್ಟಿದ ‘ಸ್ಕೀಮ್’ ನೌಕರರು; ಭರವಸೆ ಪೂರೈಸುವುದೇ ಮೋದಿ ಸರ್ಕಾರ?
ಕರ್ನಾಟಕವು ಮನರೇಗಾ ಯೋಜನೆಯಲ್ಲಿ ಉತ್ತಮವಾಗಿ ಯಶಸ್ವಿಗೊಳ್ಳುತ್ತಿದ್ದರೂ ಕೇಂದ್ರದಿಂದ ಹಣ ಬಿಡುಗಡೆಯಾಗದಿರುವುದು ಗ್ರಾಮೀಣ ಕಾರ್ಮಿಕರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಇದರಿಂದ ಗ್ರಾಮೀಣ ಕಾರ್ಮಿಕರ ಗೌರವ ಮತ್ತು ಆತ್ಮವಿಶ್ವಾಸ ಕಡಿಮೆಯಾಗುತ್ತದೆಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ.
ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆಯವರು ಮೇ 2025ರಲ್ಲಿಯೂ ಈ ಬಗ್ಗೆ ಚೌಹಾಣ್ ಅವರಿಗೆ ಪತ್ರ ಬರೆದಿದ್ದು, ₹787 ಕೋಟಿ ಬಿಲ್‌ಗಳು ಬಾಕಿಯಿರುವುದಾಗಿ ತಿಳಿಸಿದ್ದರು. ಆದರೂ ಕೂಡ ಸಮಸ್ಯೆ ಮುಂದುವರೆದಿದೆ. ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ಸಲ್ಲಿಸಿ, ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು.





