ತಮ್ಮ ಹಳ್ಳಿಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ. ಅಂತರ್ಜಲವನ್ನು ವೃದ್ಧಿಸಲು, ಕೃಷಿಗೆ ನೀರೊದಗಿಸಲು ಏತ ನೀರಾವರಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸರು, ಶೆಟ್ಟಿಹಳ್ಳಿ ಹಾಗೂ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಗೆ ಶುಕ್ರವಾರ 33ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಆಳುವವರಿಂದ ಯಾವುದೇ ಸ್ಪಂದನೆ ದೊರೆತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ವಡಕೆಹಳ್ಳ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆಗೆ ತಮ್ಮ ಗ್ರಾಮಗಳಿಗೆ ನೀರು ಒದಗಿಸಬೇಕು. ಯೋಜನೆಗೆ ಡಿಪಿಆರ್ ಮಾಡಿಸಬೇಕು” ಎಂದು ಅಗ್ರಹಿಸಿದ್ದಾರೆ.
ಪ್ರತಿಭಟನಾನಿರತ ರೈತ ಮುಖಂಡ ಆರ್ ಅರ್ಪುದರಾಜ್ ಮಾತನಾಡಿ, “ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಈವರೆಗೆ ತಾಲೂಕು ಆಡಳಿತ ಸ್ಪಂದಿಸಿಲ್ಲ. ಸರ್ಕಾರವು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ತಹಶೀಲ್ದಾರ್ ತಿಳಿಸಬೇಕು. ಅವರು ಧರಣಿ ನಡೆಯುತ್ತಿರು ಸ್ಥಳಕ್ಕೆ ಬಂದು, ಮಾಹಿತಿ ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಅಧಿಕಾರಿಗಳು ಮತ್ತು ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ, ವಡಕೆಹಳ್ಳ ವೃತ್ತದಲ್ಲಿ ರಸ್ತೆ ತಡೆ ಚಳುವಳಿ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಧರಣಿಯಲ್ಲಿ ಪುಟ್ಟಸ್ವಾಮಿ, ಅಂಥೋನಿ ,ಸೂಸೈ ಮಾಣಿಕ್ಯಂ, ಪೀಟರ್,ಲಾಸರ್, ಪೌಲ್ ಧರ್ಮರಾಜು,ರಾಜ, ಫ್ರಾನ್ಸಿಸ್, ರವೀನಾ ಜೆಲ್ಲಿಫರ್, ಮಾದಮ್ಮ, ಪ್ರೇಮ,ಸೂಸೈರಾಜ್, ಆರೋಗ್ಯ ಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.




