ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆಯ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ “ವನ್ಯಜೀವಿ ಸಂರಕ್ಷಣೆ ಮತ್ತು ಜನರ ಭದ್ರತೆ ಸಮಾನವಾಗಿ ಮಹತ್ವದ್ದಾಗಿವೆ. ಇಲಾಖೆಯು ಜನರ ನಂಬಿಕೆ ಗಳಿಸಿ, ವಿಜ್ಞಾನಾಧಾರಿತ ಹಾಗೂ ಮಾನವೀಯ ದೃಷ್ಟಿಕೋನದಿಂದ ಕಾರ್ಯ ನಿರ್ವಹಿಸಬೇಕು” ಎಂದು ಹೇಳಿದರು.
ರಾಜ್ಯದಾದ್ಯಂತ ಹೆಚ್ಚಾಗುತ್ತಿರುವ ವನ್ಯಜೀವಿ-ಮಾನವ ಸಂಘರ್ಷದ ಸಮಸ್ಯೆ ಕುರಿತು ಚರ್ಚೆ ನಡೆಸಿ, ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು, ‘ವನ್ಯಜೀವಿ-ಮಾನವ ಸಂಘರ್ಷ ನಿರ್ವಹಣಾ ಕಾರ್ಯಪಡೆ’ ರಚನೆ. ರಾಜ್ಯದ ಎಲ್ಲಾ ಅರಣ್ಯ ವಲಯಗಳಲ್ಲಿ ಸಂಭವಿಸುತ್ತಿರುವ ವನ್ಯಜೀವಿ ದಾಳಿಗಳು ಮತ್ತು ಸಂಘರ್ಷ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯಮಟ್ಟದ ಕಾರ್ಯಪಡೆ ರಚಿಸುವಂತೆ ಸಚಿವರು ನಿರ್ದೇಶಿಸಿದರು. ಈ ಕಾರ್ಯಪಡೆಗೆ ಸ್ಥಳೀಯ ಜನಪ್ರತಿನಿಧಿಗಳು, ಪರಿಸರ ತಜ್ಞರು, ಹಾಗೂ ಎನ್‌ಜಿಒಗಳು ಸಹಭಾಗಿಯಾಗಲಿದ್ದಾರೆ ಎಂದರು.
‘ಪ್ರಮಾಣಿತ ಕಾರ್ಯಪದ್ಧತಿ’ (SOP) ಅನುಸರಣೆ ಮೂಲಕ ಹುಲಿ, ಕಾಡಾನೆ, ಚಿರತೆ ಮುಂತಾದ ವನ್ಯಜೀವಿಗಳು ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡ ಸಂದರ್ಭಗಳಲ್ಲಿ, ಜನರ ಸುರಕ್ಷತೆಗೆ ತಕ್ಷಣದ ಕ್ರಮ ಕೈಗೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ಸೆಕ್ಷನ್ 155 ಅಡಿಯಲ್ಲಿ ನಿರ್ಬಂಧಾಜ್ಞೆ ವಿಧಿಸಲು ಸೂಚಿಸಿದರು.
‘ತಾಂತ್ರಿಕ ಸಾಧನ’ಗಳ ಬಳಕೆಯ ಮೂಲಕ ವನ್ಯಜೀವಿಗಳ ಚಲನೆಗಳ ಮೇಲಿನ ನಿಗಾ ವಹಿಸಲು ಮತ್ತು ತ್ವರಿತ ಮಾಹಿತಿ ವಿನಿಮಯಕ್ಕೆ ಥರ್ಮಲ್ ಕ್ಯಾಮರಾ, ಡ್ರೋನ್ ತಂತ್ರಜ್ಞಾನ, ವಾಟ್ಸ್‌ಆಪ್ ಎಚ್ಚರಿಕೆ ವ್ಯವಸ್ಥೆ ಮತ್ತು ಕಮಾಂಡ್ ಸೆಂಟರ್ ಬಳಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
‘ಜನಜಾಗೃತಿ ಮತ್ತು ಶೈಕ್ಷಣಿಕ ಚಟುವಟಿಕೆ’ಗಳ ಮೂಲಕ ಕಾಡಿನಂಚಿನ ಗ್ರಾಮಗಳಲ್ಲಿ, ಜನರಲ್ಲಿ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆಯ ಮಹತ್ವ ತಿಳಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕಾರ್ಯಪಡೆ ಸದಸ್ಯರು, ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಸ್ನೇಹಸೇತುವೆಯಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಹೆದ್ದಾರಿ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಿ: ಸಂಸದ ಸುನೀಲ್ ಬೋಸ್
ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ ವರ್ತಿಸಿ, ವನ್ಯಜೀವಿ ದಾಳಿಯಂತಹ ಘಟನೆಗಳಲ್ಲಿ ತಕ್ಷಣದ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದರು.
ಈ ವಿಶೇಷ ವಿಡಿಯೋ ನೋಡಿ https://youtu.be/YFQAjyMLUY0?si=Qfiwxj6LDDWH46WB
ಸಭೆಯಲ್ಲಿ ಗುಂಡ್ಲುಪೇಟೆಯ ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್, ಹೆಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಪ್ರಭಾಷ್ ಚಂದ್ರ ̧ರೇ , ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮನೋಜ್ ರಾಜನ್, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಪೋಲಿಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹುಲಿ ಯೋಜನೆ ನಿರ್ದೇಶಕ ಡಾ. ರಮೇಶ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಸೇರಿದಂತೆ ಇನ್ನಿತರೇ ಅಧಿಕಾರಿಗಳು ಸಭೆಯಲ್ಲಿ ಇದ್ದರು.





