ಸಂಪತ್ತಿದ್ದರೂ ಹಿಂದುಳಿದಿರುವ ಚಾಮರಾಜನಗರ; ಈ ಬಾರಿ ತುಸು ಹೆಚ್ಚೇ ಇದೆ ಬಜೆಟ್ ನಿರೀಕ್ಷೆ

Date:

ಜಾನಪದ ಸಂಸ್ಕೃತಿಯ ತವರೂರು ಹಾಗೂ ಸಮೃದ್ಧ ವನ್ಯಸಿರಿಯ ನಾಡು ಚಾಮರಾಜನಗರ. ಗಡಿ ಜಿಲ್ಲೆಯಾಗಿರುವ ಈ ಪ್ರದೇಶ ವಿಶಿಷ್ಟ ಭೌಗೋಳಿಕ ಮತ್ತು ಪರಿಸರ ವೈಶಿಷ್ಟ್ಯತೆಗಳನ್ನು ಹೊಂದಿದೆ. ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿರುವ ಈ ಜಿಲ್ಲೆ ಪ್ರಕೃತಿ ಸಂಪತ್ತಿನಲ್ಲಿ ಶ್ರೀಮಂತವಾಗಿದೆ. ಅರಣ್ಯ ಸಂಪತ್ತಿನ ಜೊತೆಗೆ ವೈವಿಧ್ಯಮಯ ಜೀವ ವೈವಿಧ್ಯತೆ, ಪರ್ವತ ಪ್ರದೇಶಗಳು ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲಕರವಾದ ಅನೇಕ ತಾಣಗಳನ್ನು ಹೊಂದಿರುವುದು ಜಿಲ್ಲೆಯ ವಿಶೇಷತೆ.

ಆದರೆ ಇಷ್ಟೆಲ್ಲ ಪ್ರಕೃತಿ ಸಂಪತ್ತು ಹೊಂದಿದ್ದರೂ ಅಭಿವೃದ್ಧಿಯ ವಿಷಯದಲ್ಲಿ ಚಾಮರಾಜನಗರ ಜಿಲ್ಲೆ ಇನ್ನೂ ಹಿಂದುಳಿದ ಜಿಲ್ಲೆಯಾಗಿಯೇ ಉಳಿದಿರುವುದು ವಿಷಾದಕರ. ಮೂಲಸೌಕರ್ಯಗಳ ಕೊರತೆ, ಕೈಗಾರಿಕಾ ಅಭಿವೃದ್ಧಿಯ ಅಭಾವ ಹಾಗೂ ಉದ್ಯೋಗಾವಕಾಶಗಳ ಸೀಮಿತತೆ ಜಿಲ್ಲೆಯ ಜನರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದರ ಜೊತೆಗೆ ಒಂದು ಕಡೆ ಮಳೆಯ ಕೊರತೆ ಮತ್ತು ಇನ್ನೊಂದು ಕಡೆ ಕೃಷಿಗೆ ಅನನುಕೂಲಕರ ಪರಿಸ್ಥಿತಿ ಜಿಲ್ಲೆಯ ರೈತರ ಬದುಕನ್ನು ಸಂಕಷ್ಟದತ್ತ ತಳ್ಳುತ್ತಿದೆ. ಕೃಷಿಯೇ ಪ್ರಮುಖ ಆಧಾರವಾಗಿರುವ ಜಿಲ್ಲೆಯ ಜನರು ನಿರಂತರ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರ್ಯಾಯ ವ್ಯವಸ್ಥೆಗಳು ಮತ್ತು ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೆ.ಎಚ್. ಪಟೇಲ್ ಅವರ ಆಡಳಿತಾವಧಿಯಲ್ಲಿ ಚಾಮರಾಜನಗರ ಜಿಲ್ಲೆ ರೂಪುಗೊಂಡಿದ್ದರೂ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ನಿರಂತರ ಯೋಜನೆಗಳು ರೂಪುಗೊಂಡಿಲ್ಲ ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಜಿಲ್ಲೆಯು ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಇನ್ನೂ ಹೋರಾಟ ನಡೆಸುತ್ತಿದೆ. ಜಿಲ್ಲಾಸ್ಥಾನವಾದ ಚಾಮರಾಜನಗರದಲ್ಲಿಯೇ ಹಲವಾರು ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತಿದ್ದು, ಕೆಲವೊಮ್ಮೆ ಅದು ತಾಲ್ಲೂಕು ಕೇಂದ್ರದಂತೆ ಕಾಣುತ್ತದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಜಿಲ್ಲೆಯಾಗಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗದೆ, ಅನೇಕ ಅಗತ್ಯಗಳಿಗಾಗಿ ಇಂದಿಗೂ ಮೈಸೂರು ಹಾಗೂ ಕೊಯಂಬತ್ತೂರು ನಗರಗಳ ಮೇಲೆ ಅವಲಂಬಿತವಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿಯೇ ಈ ಬಾರಿಯ ರಾಜ್ಯ ಬಜೆಟ್ ಮೇಲೆ ಚಾಮರಾಜನಗರ ಜಿಲ್ಲೆಯ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಇದರಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕೃಷಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಹೊಸ ಯೋಜನೆಗಳಿಗೆ ಅನುದಾನ ದೊರೆಯುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಕಾಯುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಗೆ ‘ಶಾಪಗ್ರಸ್ತ ಜಿಲ್ಲೆ’ ಎಂಬ ಮುದ್ರೆ ಅಂಟಿಕೊಂಡಿರುವುದು ಕೂಡ ಒಂದು ವಿಚಿತ್ರ ಸಂಗತಿಯಾಗಿದೆ. ಹಿಂದಿನ ದಿನಗಳಲ್ಲಿ ಆಡಳಿತದಲ್ಲಿದ್ದ ಕೆಲ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಂಡಿದ್ದರು ಎಂಬ ನಂಬಿಕೆ ಜನರಲ್ಲಿ ಬೇರೂರಿತ್ತು. ಆದರೆ ಆ ಮೂಢನಂಬಿಕೆಯನ್ನು ಮುರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿರುವುದು ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದಂತಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಗಮನ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ಇದರ ಜೊತೆಗೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮುಖ್ಯಮಂತ್ರಿಗಳ ವರುಣಾ ವಿಧಾನಸಭಾ ಕ್ಷೇತ್ರವೂ ಸೇರುವುದರಿಂದ ಸಹಜವಾಗಿಯೇ ಜನರ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ.

ಇನ್ನೊಂದೆಡೆ ಜಿಲ್ಲೆಯ ಸಮಸ್ಯೆಗಳು ಬಹುಮುಖವಾಗಿವೆ. ಅರಣ್ಯ ಪ್ರದೇಶ ಹೆಚ್ಚಾಗಿದ್ದರೂ ಮತ್ತು ಕಾವೇರಿ ನದಿ ಹರಿದರೂ ಸಹ ಕುಡಿಯುವ ನೀರಿನ ಸಮಸ್ಯೆ ಇನ್ನೂ ಗಂಭೀರವಾಗಿದೆ. ಅರಣ್ಯ ಪ್ರದೇಶದಲ್ಲಿಯೇ ಸಮರ್ಪಕ ಮಳೆಯ ಕೊರತೆ ಇರುವುದರಿಂದ ನೀರಿನ ಅಭಾವ ಅನೇಕ ಗ್ರಾಮಗಳನ್ನು ಕಾಡುತ್ತಿದೆ. ಹಲವಾರು ಕಡೆಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಕಲ್ಪಿಸಲಾಗಿಲ್ಲ. ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿಯೇ ಉದ್ಯೋಗಾವಕಾಶಗಳ ಕೊರತೆ, ಕೈಗಾರಿಕೆಗಳ ಅಭಾವ, ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಪ್ರಮುಖ ಸಮಸ್ಯೆಗಳಾಗಿ ಉಳಿದಿವೆ. ರಸ್ತೆ, ಒಳಚರಂಡಿ ಮತ್ತು ಇತರೆ ಮೂಲಭೂತ ಸೌಲಭ್ಯಗಳಲ್ಲಿಯೂ ಸಾಕಷ್ಟು ಕೊರತೆ ಕಂಡುಬರುತ್ತಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರದ ವಿಶೇಷ ಗಮನ ಅಗತ್ಯವಾಗಿದೆ.

ಕೊಳ್ಳೇಗಾಲ ತಾಲೂಕಿನ ಜಾಗೇರಿ ಹಾಗೂ ಹನೂರು ತಾಲೂಕಿನ ಪಾಲಾರ್ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳು ವಾಸವಾಗಿದ್ದರೂ ರೈತರ ಭೂಮಿಗೆ ಇದುವರೆಗೆ ಸಾಗುವಳಿ ಹಕ್ಕು ದೊರೆತಿಲ್ಲ ಎಂಬುದು ಪ್ರಮುಖ ಸಮಸ್ಯೆಯಾಗಿದೆ. ಹಲವು ವರ್ಷಗಳಿಂದ ವಾಸವಾಗಿರುವ ಮನೆಗಳಿಗೆ ಸಹ ಹಕ್ಕುಪತ್ರ ನೀಡಲಾಗಿಲ್ಲದ ಕಾರಣ ಕಂದಾಯ ಕಟ್ಟಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರದಿಂದ ಈವರೆಗೆ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಸಮಾಧಾನ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವಂತೆ ಭೂಹಕ್ಕು ಮತ್ತು ಮೂಲಸೌಕರ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಘೋಷಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಇದೇ ವೇಳೆ, ಚಾಮರಾಜನಗರ ಜಿಲ್ಲೆಯಲ್ಲಿ ಆದಿವಾಸಿ ಸಮುದಾಯಗಳ ಪ್ರಮಾಣವೂ ಹೆಚ್ಚಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸೋಲಿಗ ಸಮುದಾಯದ ಜನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ವಿಶೇಷವಾಗಿ ಹನೂರು ಭಾಗದ ಪಾಲಾರ್ ಹಾಗೂ ಗೋಪಿನಾಥಂ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇನ್ನೂ ತೀವ್ರವಾಗಿದೆ. ಕಾಡಿನೊಳಗಿನ ಅನೇಕ ಗ್ರಾಮಗಳಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪದೆ ಇರುವುದರಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾಭ್ಯಾಸವೂ ಮೊಟಕಾಗುತ್ತಿದ್ದು, ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗದೆ ಅನೇಕರು ಚಿಕ್ಕ ವಯಸ್ಸಿನಲ್ಲಿಯೇ ಕೂಲಿ ಕಾರ್ಮಿಕರಾಗಿ ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಯುವಜನತೆಗೆ ಶಿಕ್ಷಣ, ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಅವಕಾಶಗಳನ್ನು ಒದಗಿಸುವ ವಿಶೇಷ ಯೋಜನೆಗಳನ್ನು ಸರ್ಕಾರ ರೂಪಿಸಬೇಕೆಂಬ ನಿರೀಕ್ಷೆ ಸ್ಥಳೀಯರಲ್ಲಿ ಹೆಚ್ಚಾಗಿದೆ.

ಈ ಪ್ರದೇಶದ ಜನರು ವ್ಯಾಪಾರ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗಾಗಿ ತಮಿಳುನಾಡಿನ ಮೇಲೆಯೇ ಅವಲಂಬಿತರಾಗಿರುವುದು ಕೂಡ ಜಿಲ್ಲೆಯ ಅಭಿವೃದ್ಧಿ ಹಿನ್ನಡೆಯನ್ನು ತೋರಿಸುವ ಮತ್ತೊಂದು ಉದಾಹರಣೆಯಾಗಿದೆ. ಕಾವೇರಿ ನದಿಯನ್ನು ದಾಟಿದರೆ ತಮಿಳುನಾಡಿನ ಹೊಗೆನೇಕಲ್ ಪ್ರದೇಶವೇ ಸಮೀಪವಾಗಿರುವುದರಿಂದ ಅಲ್ಲಿನ ಆರೋಗ್ಯ ಸೇವೆಗಳು, ಶಾಲಾ–ಕಾಲೇಜುಗಳು ಹಾಗೂ ವ್ಯಾಪಾರಿಕ ವ್ಯವಸ್ಥೆಗಳನ್ನೇ ಜನರು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಥಮಿಕ ಚಿಕಿತ್ಸೆಗಳಿಂದ ಹಿಡಿದು ಪದವಿ ಪೂರ್ವ ಶಿಕ್ಷಣದವರೆಗೆ ಅಲ್ಲಿನ ಸೌಲಭ್ಯಗಳನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ. ಹೊಗೆನೇಕಲ್ ಪ್ರಮುಖ ಪ್ರವಾಸಿ ತಾಣವಾಗಿದ್ದು, ಅಲ್ಲಿ ಹಲವಾರು ಕುಟುಂಬಗಳಿಗೆ ಉದ್ಯೋಗದ ಆಸರೆಯೂ ದೊರಕಿದೆ. ಆದರೆ, ಈ ಭಾಗದಲ್ಲಿ ಸಮರ್ಪಕ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳ ಕೊರತೆಯಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಲು ಅಸೌಕರ್ಯ ಉಂಟಾಗುತ್ತಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕೆಂಬ ನಿರೀಕ್ಷೆ ಈ ಬಾರಿಯ ಬಜೆಟ್‌ ಮೇಲೂ ಇದೆ.

ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಹಾಡಿಗಳಲ್ಲೂ ಮೂಲಭೂತ ಸೌಲಭ್ಯಗಳ ಕೊರತೆ ಸ್ಪಷ್ಟವಾಗಿ ಕಾಣಿಸುತ್ತದೆ. ರಸ್ತೆ, ವಾಸಸ್ಥಳ, ಕುಡಿಯುವ ನೀರು ಸೇರಿದಂತೆ ಹಲವಾರು ಅಗತ್ಯ ಸೌಲಭ್ಯಗಳು ಇನ್ನೂ ಸಮರ್ಪಕವಾಗಿ ತಲುಪಿಲ್ಲ. ಇದಕ್ಕೆ ಜೊತೆಗೆ ಕಾಡುಪ್ರಾಣಿಗಳ ಹಾವಳಿಯೂ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಚಿರತೆ ಮತ್ತು ಆನೆಗಳ ದಾಳಿಯಿಂದ ಜೀವಹಾನಿ ಸಂಭವಿಸಿರುವ ಘಟನೆಗಳು ವರದಿಯಾಗುತ್ತಿವೆ. ಇದರಿಂದ ಗ್ರಾಮೀಣ ಜನರ ಭದ್ರತೆ ಕುರಿತ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಸಫಾರಿ ಯೋಜನೆಗಳು ಹಾಗೂ ಕಾಡುಪ್ರಾಣಿಗಳ ಹಾವಳಿ ಕುರಿತು ಹಲವು ಬಾರಿ ಹೋರಾಟಗಳು ನಡೆದಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಕಾಡುಪ್ರಾಣಿ–-ಮಾನವ ಸಂಘರ್ಷ ಕಡಿಮೆ ಮಾಡಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಸ್ಥಳೀಯರು ಒತ್ತಿಹೇಳುತ್ತಿದ್ದಾರೆ.

ಜಿಲ್ಲೆಯ ಮಲೆ ಮಹದೇಶ್ವರ, ಬಿಳಿಗಿರಿ ರಂಗನಾಥ, ಸಂಪಿಗೆ ಪೋಡು, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ, ಕೆ ಗುಡಿ, ಹೊಗೆನೆಕಲ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು ಉದ್ಯೋಗದ ದೃಷ್ಟಿಯಿಂದಲೂ, ಆರ್ಥಿಕ ಚೇತರಿಕೆ ದೃಷ್ಟಿಯಿಂದಲೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮ ಬಜೆಟ್ ನಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ.

ಜಿಲ್ಲೆಯಲ್ಲಿ ಸರಿಸುಮಾರು 148 ಸೋಲಿಗರ ಪೋಡುಗಳಿದ್ದು, ಸುಮಾರು 7,500 ಆದಿವಾಸಿ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿದ್ದಾರೆ. ಇದಲ್ಲದೆ 40 ಸಾವಿರಕ್ಕೂ ಅಧಿಕವಾಗಿ ಜೇನುಕುರುಬರು ಹಾಗೂ ಬೆಟ್ಟಕುರುಬರು ವಾಸವಾಗಿದ್ದಾರೆ. ಈ ಸಮುದಾಯಗಳ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಇನ್ನೂ ಉತ್ತಮವಾಗಿಲ್ಲ. ಶಿಕ್ಷಣದಿಂದ ವಂಚಿತರಾಗಿರುವ ಅನೇಕ ಕುಟುಂಬಗಳಲ್ಲಿ ಉದ್ಯೋಗದ ಆಸರೆ ಇಲ್ಲದೆ ಕೂಲಿನಾಲಿ ಮಾಡಿ ಬದುಕಬೇಕಾದ ಪರಿಸ್ಥಿತಿ ಇದೆ. ಸ್ಥಳೀಯವಾಗಿ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ತಲುಪಿಲ್ಲ. ಆದ್ದರಿಂದ ಈ ಬಾರಿಯ ಬಜೆಟ್‌ನಲ್ಲಿ ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂಬ ನಿರೀಕ್ಷೆ ಇದೆ.

ಜಾನಪದ ತವರೂರಾಗಿರುವ ಈ ಜಿಲ್ಲೆಯಲ್ಲಿ ಕಲಾವಿದರ ಕಡೆಗಣನೆ ಕೂಡ ಕಂಡುಬರುತ್ತಿದೆ. ಸಾಂಸ್ಕೃತಿಕವಾಗಿ ನಶಿಸಿ ಹೋಗುವ ಅಪಾಯದ ಹಂತಕ್ಕೆ ಕೆಲವು ಜಾನಪದ ಕಲೆಗಳು ತಲುಪಿವೆ. ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ಜಿಲ್ಲೆಯಲ್ಲಿ ಹಲವಾರು ಜಾನಪದ ಕಲಾವಿದರಿದ್ದಾರೆ. ಆದರೆ ಅವರಿಗೆ ಸಮರ್ಪಕ ಪ್ರೋತ್ಸಾಹ ಇಲ್ಲದಿರುವುದು ಬದುಕಿಗೆ ಕಂಟಕವಾಗಿದೆ. ಕಲಾವಿದರಿಗೆ ಸರ್ಕಾರದಿಂದ ವಿಶೇಷ ಸವಲತ್ತುಗಳು ಹಾಗೂ ಜಿಲ್ಲಾಡಳಿತದ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು. ಮೇಕೆದಾಟು ಅಣೆಕಟ್ಟು ಯೋಜನೆ ನೆರವೇರಿದರೆ ಈ ಭಾಗದಲ್ಲಿ ನೀರಿನ ಸಮಸ್ಯೆಗೆ ಬಹುಮಟ್ಟಿಗೆ ಪರಿಹಾರ ಸಿಗಲಿದೆ. ಇದರಿಂದ ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ರೈತರ ಬಹುಕಾಲದ ಕನಸಾಗಿದೆ.

ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿರುವುದರಿಂದ ಯುವಕರು ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿಯೇ ಹೊಸ ಉದ್ಯೋಗಾವಕಾಶಗಳು ಹಾಗೂ ಸ್ವಂತ ಉದ್ಯಮ ಆರಂಭಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕಿದೆ. ಜೊತೆಗೆ ಜಿಲ್ಲೆಯ ಸಾರಿಗೆ ವ್ಯವಸ್ಥೆಯಲ್ಲೂ ಕೊರತೆ ಇದ್ದು, ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ಸಂಪರ್ಕ ಒದಗಿಸುವ ಅಗತ್ಯವಿದೆ. ವಯಸ್ಸಾದ, ಅನಾರೋಗ್ಯ ಪೀಡಿತರನ್ನು ಡೋಲಿಯಲ್ಲಿ ಕರೆದುಕೊಂಡು ಹೋಗುವ ಘಟನೆಗಳು ಕಂಡುಬರುತ್ತಿದ್ದು ಇದಕ್ಕೆಲ್ಲ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ಈ ವಿಶೇಷ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ಸಾಂಸ್ಕೃತಿಕ ನಗರಿ ಮೈಸೂರಿನ ನಿರೀಕ್ಷೆಗಳೇನು? ಕಳೆದ ಬಜೆಟ್ ಕಡತದಲ್ಲೇ ಉಳಿಯಿತೇ?

ಇನ್ನು ವನ್ಯಜೀವಿ–ಮಾನವ ಸಂಘರ್ಷ ಹೆಚ್ಚುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಪ್ರಾಣಹಾನಿ ಹಾಗೂ ಬೆಳೆಹಾನಿ ಸಂಭವಿಸುತ್ತಿದೆ. ಈ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು. ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕು. ರೈಲ್ವೇ ಕಂಬಿ ಅಳವಡಿಕೆ, ಅರಣ್ಯ ಸಿಬ್ಬಂದಿ ಗಸ್ತು, ಡ್ರೋನ್ ಪಹರೆ, ಸಿಸಿ ಟಿವಿ ಕಣ್ಗಾವಲು, ಟ್ರಂಚ್ ಹೀಗೆ ಹಲವು ಮಾದರಿಯಲ್ಲಿ ಜನವಸತಿ ಇರುವಲ್ಲಿ ನಿಗಾ ವಹಿಸಲು ಕ್ರಮ ಕೈಗೊಳ್ಳಬೇಕಿದೆ.

ಈ ವಿಶೇಷ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ಕೊಡಗಿನ ಆದಿವಾಸಿ, ದಲಿತ, ಶೋಷಿತರ ಬದುಕು ಹಸನಾಗಲಿಲ್ಲ; ನಿರೀಕ್ಷೆ ತಪ್ಪಲಿಲ್ಲ!

ಒಟ್ಟಾರೆ, ಪ್ರಕೃತಿ ಸಂಪತ್ತು ಮತ್ತು ಸಾಂಸ್ಕೃತಿಕ ವೈಭವ ಹೊಂದಿರುವ ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸುವ ಅಗತ್ಯವಿದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಮೂಲಭೂತ ಸೌಲಭ್ಯಗಳು, ನೀರಾವರಿ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಆದಿವಾಸಿ ಸಮುದಾಯಗಳ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಘೋಷಣೆಯಾಗಬೇಕು ಎಂಬುದು ಜಿಲ್ಲೆಯ ಪ್ರಮುಖ ನಿರೀಕ್ಷೆಯಾಗಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಹಣದುಬ್ಬರಕ್ಕೆ ಅನುಗುಣವಾಗಿ ನಡೆಯುವ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ಏಪ್ರಿಲ್ 1ರಿಂದ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ

ದಿನಾಂಕ-07-03-2026ರಂದು ಮೈಸೂರು ಜಿಲ್ಲೆ, ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...