ಎಸ್‌ಐಓ(ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ) ಕರ್ನಾಟಕದ ಪ್ರತಿನಿಧಿಗಳ ತಂಡವು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆಪಿಎಸ್ ಶಾಲೆ ಹಾಗೂ ಇತರೆ ಹಲವು ಶಾಲೆಗಳಿಗೆ ಭೇಟಿ ನೀಡಿ, ಕೆಪಿಎಸ್ “ಮ್ಯಾಗ್ನೆಟ್” ಶಾಲಾ ವಿಲೀನ ನೀತಿಯ ಸ್ಥಳೀಯ ಸತ್ಯಾಂಶಗಳನ್ನು ಅಧ್ಯಯನ ಮಾಡಿದ್ದು, ಅಲ್ಲಿನ ಪರಿಸ್ಥಿತಿಗಳನ್ನು ಗಮನಿಸಿದ ಬಳಿಕ ಶಾಲಾ ವಿಲೀನ ಆದೇಶಕ್ಕೆ ಎಸ್‌ಐಓ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸ್ಥಳೀಯ ಶಿಕ್ಷಕರೊಂದಿಗೆ ಚರ್ಚೆ ನಡೆಸಿದ ನಂತರ, ಸಮೀಪದ ನೆರೆಹೊರೆಯ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಸಂಸ್ಥೆಗಳೊಂದಿಗೆ ವಿಲೀನಗೊಳಿಸುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ ಎಂದು ಎಸ್‌ಐಓ ತಂಡ ಗಮನಿಸಿದೆ.
ಎಸ್‌ಐಓ ಪ್ರತಿನಿಧಿಗಳ ತಂಡವು, ಮಕ್ಕಳ ಹಕ್ಕುಗಳು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ (RTE Act, 2009)ಯಡಿಯಲ್ಲಿ “ನೆರೆಹೊರೆಯ ಶಾಲೆ” ನಿಯಮ (ಕಲಂ 6) ಪ್ರಕಾರ, ಪ್ರತಿ ಮಗುವಿನ ನಿವಾಸದಿಂದ ನಡೆದು ಹೋಗಬಹುದಾದ ದೂರದಲ್ಲಿ ಸರ್ಕಾರವು ಶಾಲೆಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.
ಇದನ್ನು ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ-ಜಿ ರಾಮ್ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?
ಸಮೀಪದ ಶಾಲೆಗಳನ್ನು ಮುಚ್ಚಿ ವಿಲೀನಗೊಳಿಸುವ ಆದೇಶವು ಈ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ. ಭೇಟಿಯ ಸಂದರ್ಭದಲ್ಲಿ, ತಂಡವು ಶಾಲಾ ಆಡಳಿತ ಮಂಡಳಿಗೆ ಎಸ್‌ಐಓ ನಡೆಸಿದ ಇತ್ತೀಚಿನ ಸಮೀಕ್ಷೆಯ ವಿವರಗಳನ್ನು ನೀಡಿತು.

ಈ ಸಮೀಕ್ಷೆಯು ಸರ್ಕಾರಿ ಶಾಲೆಗಳ ಸುತ್ತಲಿನ ವಿವಿಧ ಕಳವಳಕಾರಿ ಸಮಸ್ಯೆಗಳನ್ನು ಎತ್ತಿ ತೋರಿಸಿದೆ ಎಸ್‌ಐಓ ಇದಕ್ಕೂ ಮೊದಲು ನೆರೆಹೊರೆಯ ಶಾಲೆಗಳ ಮುಚ್ಚುವಿಕೆಯನ್ನು ಖಂಡಿಸಿತ್ತಲ್ಲದೇ, ಸರ್ಕಾರವು ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಎಸ್‌ಐಓ ನಿಯೋಗದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (SIO) ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹಯಾನ್, ರಾಜ್ಯ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್, ರಾಜ್ಯ ಸಲಹಾ ಸಮಿತಿಯ ಸದಸ್ಯ ಮೊಹಮ್ಮದ್ ಪೀರ್ ಲಟಗೇರಿ ಉಪಸ್ಥಿತರಿದ್ದರು.






