ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಹೊರ ವರ್ತುಲ ರಸ್ತೆಯನ್ನು ಸುಸ್ಥಿತಿಯಲ್ಲಿಡಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊರ ವರ್ತುಲ ರಸ್ತೆ ಹಾಗೂ ಸರ್ವೀಸ್ ರಸ್ತೆಗಳನ್ನು ಪರಿಶೀಲಿಸುವ ಸಲುವಾಗಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, “ಹೆಬ್ಬಾಳ ಜಂಕ್ಷನ್ ಕೆಳಭಾಗದಲ್ಲಿ ವೆಟ್ ಮಿಕ್ಸ್ ಹಾಕಲಾಗಿದ್ದು, ತಕ್ಷಣ ಅದಕ್ಕೆ ಡಾಂಬರೀಕರಣ ಮಾಡಬೇಕು. ಜೊತೆಗೆ, ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹೈ ರೈಸ್ ಪಾದಚಾರಿ ಕ್ರಾಸಿಂಗ್ ನಿರ್ಮಿಸಬೇಕು” ಎಂದು ಸೂಚಿಸಿದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ಪೊಲೀಸ್ ಠಾಣೆಯ ಬಳಿಕ ಬಸ್ ನಿಲ್ದಾಣಕ್ಕಾಗಿ ಮೀಸಲಾಗಿರುವ ಜಾಗ ಉಪಯೋಗವಾಗದೇ ಇರುವುದನ್ನು ಗಮನಿಸಿ, ಆ ಜಾಗದಲ್ಲಿ ಏನು ಮಾಡುವುದು ಸೂಕ್ತ ಎಂಬುದನ್ನು ಪರಿಶೀಲಿಸಿ, ಅದರ ವಿನ್ಯಾಸ ರೂಪಿಸಿ ಅನುಷ್ಠಾನಕ್ಕೆ ತರಲು ಸೂಚಿಸಿದರು.
ಸರ್ವಿಸ್ ರಸ್ತೆ ದುರಸ್ತಿ: ಭದ್ರಪ್ಪ ಲೇಔಟ್ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆ ಹಾಳಾಗಿದ್ದು, ಹೈ ಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಇದೇ ಸ್ಥಳದಲ್ಲಿ ಕೆ-ರೈಡ್ ವತಿಯಿಂದ ಕಾಮಗಾರಿ ನಡೆಯುತ್ತಿರುವುದರಿಂದ, ಆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸರ್ವಿಸ್ ರಸ್ತೆಯ ದುರಸ್ಥಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು. ಭದ್ರಪ್ಪ ಲೇಔಟ್ ಮೇಲ್ಸೇತುವೆ ಬಳಿಕದ ಹೊರ ವರ್ತುಲ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು, ರಸ್ತೆ ಬದಿಯ ಡಕ್ಟ್‌ಗಳ ಚೇಂಬರ್‌ಗಳು ರಸ್ತೆ ಮಟ್ಟಕ್ಕಿಂತ ಕೆಳಗಿರುವುದನ್ನು ಗಮನಿಸಿ, ಅವುಗಳನ್ನು ತಕ್ಷಣ ರಸ್ತೆ ಮಟ್ಟಕ್ಕೆ ತರಲು ಸೂಚಿಸಿದರು. ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿಡಲು ಹಾಗೂ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಬಿಇಎಲ್ ಜಂಕ್ಷನ್ ಅಭಿವೃದ್ಧಿ: ಬಿಇಎಲ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಬಿಇಎಲ್ ಜಂಕ್ಷನ್‌ನಲ್ಲಿ ರಸ್ತೆ ಮೇಲ್ಮೈ ಹಾಳಾಗಿರುವುದನ್ನು ವೈಟ್ ಟಾಪಿಂಗ್ ಗುತ್ತಿಗೆದಾರರಿಂದಲೇ ಮುಚ್ಚಿಸುವಂತೆ ಸೂಚಿಸಿದರು. ಇದೇ ಜಂಕ್ಷನ್‌ನಲ್ಲಿ ಮತ್ತಿಕೆರೆ ಕಡೆಗೆ ಹೋಗುವ ಭಾಗದಲ್ಲಿ ಪಾದಚಾರಿ ಮಾರ್ಗವನ್ನು ಅಗಲೀಕರಣ ಮಾಡಲು ಸೂಚಿಸಿದರು.
ರಸ್ತೆ ಗುಂಡಿಗಳನ್ನು ಮುಚ್ಚಿ: ಹೊರ ವರ್ತುಲ ರಸ್ತೆಯಲ್ಲಿರುವ ಎಲ್ಲ ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ರಾಜ್ ಕುಮಾರ್ ಸಮಾಧಿಯಿಂದ ನಾಗರಭಾವಿ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಮತ್ತು ಹಾಳಾದ ಮೇಲ್ಮೈಯನ್ನು ಸರಿಪಡಿಸಲು ಸೂಚಿಸಿದರು. ಗೊರಗುಂಟೆ ಪಾಳ್ಯ ಕೈಗಾರಿಕಾ ಪ್ರದೇಶದ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ, ಅದನ್ನೂ ಶೀಘ್ರ ದುರಸ್ಥಿಪಡಿಸಲು ನಿರ್ದೇಶಿಸಿದರು.
ರಸ್ತೆ ಬದಿಯಲ್ಲಿ ಕಸ ಬಿಸಾಡುವುದನ್ನು ನಿಯಂತ್ರಿಸಿ: ಹೊರ ವರ್ತುಲ ರಸ್ತೆ ಬದಿಗಳಲ್ಲಿ ಕೆಲವು ಕಡೆ ಕಸ ಬಿಸಾಡಲಾಗಿರುವುದನ್ನು ಗಮನಿಸಿ, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಸರ್ವಿಸ್ ರಸ್ತೆಗಳಲ್ಲಿಯೂ ಕಸ ಬಿಸಾಡಿರುವುದನ್ನು ಕಂಡು ಬ್ಲಾಕ್ ಸ್ಪಾಟ್‌ಗಳನ್ನು ನಿರ್ಮೂಲನೆ ಮಾಡಲು ಸೂಚಿಸಿದರು.
ಕಂಠೀರವ ಸ್ಟುಡಿಯೋ ಜಂಕ್ಷನ್‌ನಲ್ಲಿ ಸ್ವಚ್ಛತೆ ಕಾಪಾಡಿ: ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ ಜಲಮಂಡಳಿಯ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ಗಮನಿಸಿ, ಜಲಮಂಡಳಿ ಅಧ್ಯಕ್ಷರಿಗೆ ಸ್ಥಳದಲ್ಲಿಯೇ ಕರೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು. ಜಂಕ್ಷನ್‌ನಲ್ಲಿ ಸ್ವಚ್ಛತೆ ಕಾಪಾಡದಿರುವುದನ್ನು ಗಮನಿಸಿ, ಡೆಬ್ರೀಸ್ ಹಾಗೂ ಹೂಳನ್ನು ತೆಗೆದು ತಕ್ಷಣ ಸ್ವಚ್ಛತಾ ಕಾರ್ಯ ನಡೆಸುವಂತೆ ಸೂಚಿಸಿದರು. ಅದೇ ಸ್ಥಳದಲ್ಲಿ ಪಾದಚಾರಿ ಮಾರ್ಗ ಸಂಪೂರ್ಣ ಒತ್ತುವರಿ ಆಗಿದ್ದು, ಅದನ್ನು ತೆರವುಗೊಳಿಸಬೇಕು. ಟ್ರಾನ್ಸ್ ಫರ್ಮರ್ ಸ್ಥಳಾಂತರಗೊಳ್ಳಬೇಕು. ಪಾದಚಾರಿ ಮಾರ್ಗದಲ್ಲಿ ಕಟ್ಟಡ ಭಗ್ನಾವಶೇಷ ಹಾಕಿರುವುದರಿಂದ, ಮಾಲೀಕರಿಗೆ ನೋಟೀಸ್ ನೀಡಿ ದಂಡ ವಿಧಿಸಲು ಸೂಚಿಸಿದರು.


ಇದನ್ನೂ ಓದಿ: ಬೆಂಗಳೂರು | ಕೆಆರ್ ಪುರಂನ ʼಮಸ್ಜಿದ್ ಎ ನೂರ್ʼ ನಲ್ಲಿ ಮಸೀದಿ ದರ್ಶನ ಕಾರ್ಯಕ್ರಮ
ಕಸ ವರ್ಗಾವಣೆ ಘಟಕ ಸ್ಥಳಾಂತರಿಸಿ: ಸುಮ್ಮನಹಳ್ಳಿ ಜಂಕ್ಷನ್ ಮೇಲ್ಸೇತುವೆ ಕೆಳಭಾಗದಲ್ಲಿ ಇರುವ ಕಸ ವರ್ಗಾವಣೆ ಘಟಕದಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿಲ್ಲ. ಜೊತೆಗೆ ಲೀಚೇಟ್‌ನಿಂದ ದುರ್ವಾಸನೆ ಉಂಟಾಗಿದೆ. ಜೆಟ್ ಸ್ಪ್ರೇಯರ್ ಮೂಲಕ ಸ್ವಚ್ಛಗೊಳಿಸಬೇಕು. ರಾಜಕಾಲುವೆ ಪಕ್ಕದ ಖಾಲಿ ಜಾಗದಲ್ಲಿ ಕಸ ವರ್ಗಾವಣೆಯ ಪರ್ಯಾಯ ವ್ಯವಸ್ಥೆ ಮಾಡಲು ಸೂಚಿಸಿದರು.
ವೈಟ್ ಟಾಪಿಂಗ್ ಕಾಮಗಾರಿ ತ್ವರಿತಗೊಳಿಸಿ: ಹೊರ ವರ್ತುಲ ರಸ್ತೆಯ ಶ್ರೀನಿವಾಸನಗರ (80 ಅಡಿ ರಸ್ತೆ)ದ ಮುತ್ತುರಾಜ್ ರಸ್ತೆಯಿಂದ ವಿದ್ಯಾಪೀಠ ವೃತ್ತದವರೆಗೆ 1.8 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 1 ಕಿ.ಮೀ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಭಾಗವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆ ಗುಂಡಿಗಳಿಲ್ಲದಂತೆ ಸುಸ್ಥಿತಿಯಲ್ಲಿ ಇಟ್ಟು ಕಾರ್ಯಾಚರಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಅನಾಥ ವಾಹನಗಳನ್ನು ತೆರವುಗೊಳಿಸಿ: ಪರಿಶೀಲನೆ ವೇಳೆ ಅನೇಕ ಸ್ಥಳಗಳಲ್ಲಿ ಅನಾಥ ವಾಹನಗಳು ಕಂಡುಬಂದಿದ್ದು, ಅವುಗಳನ್ನು ರಸ್ತೆ ಬದಿಯಿಂದ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಅನಾಥ ವಾಹನಗಳ ಸಂಗ್ರಹಣೆಗೆ ಸೂಕ್ತ ಸ್ಥಳ ಗುರುತಿಸಿ ಅಲ್ಲಿ ನಿಲ್ಲಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ರವಿ ಸುಬ್ರಮಣ್ಯ, ನಗರಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಡಾ. ರಾಜೇಂದ್ರ ಕೆ ವಿ, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್, ರಾಜೇಶ್, ರಂಗನಾಥ್, ಯಮುನಾ, ಸ್ವಯಂಪ್ರಭಾ ಹಾಗೂ ಇತರೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.





