ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟಿನ ಬಳಿ ಗುರುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಜ್ಜವಾರದ 4 ಮಂದಿ ಯುವಕರ ಸ್ವ ಗ್ರಾಮಕ್ಕೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ತಲಾ 25 ಸಾವಿರ ಸಹಾಯಧನ ವಿತರಿಸಿದರು.
ತಾಲೂಕಿನ ಅಜ್ಜವಾರ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, “ಟಿಪ್ಪರ್ ಲಾರಿಗಳ ಹಾವಳಿಯಿಂದ ಅನೇಕ ತೊಂದರೆಯಾಗುತ್ತಿದೆ. ನಾನು ಶಾಸಕನಾದಾಗಿನಿಂದ ಟಿಪ್ಪರ್ ಲಾರಿಗಳ ಓಡಾಟ ನಿಯಂತ್ರಿಸಲು ಪ್ರಯತ್ನ ಮಾಡುತಿದ್ದೇನೆ. ಆದರೆ, ತಾಲೂಕು ಮಟ್ಟದ ಅಧಿಕಾರಿಗಳು ತಡೆದರೆ, ಮೇಲಧಿಕಾರಿಗಳು ಮತ್ತು ಜಿಲ್ಲಾಡಳಿತದಿಂದ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಟಿಪ್ಪರ್, ಕ್ರಷರ್‌ಗಳಿಂದ ಯಾರಿಗೆ ಎಷ್ಟೆಷ್ಟು ಲಂಚ ಹೋಗುತ್ತಿದೆಯೋ ಗೊತ್ತಿಲ್ಲ, ಅಧಿಕಾರಿಗಳು, ಜನಪ್ರತಿನಿಧಿಗಳ ದುರಾಸೆಯಿಂದ ಅಜ್ಜವಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 4 ಮಂದಿ ಮಕ್ಕಳು ಪ್ರಾಣ ಕಳೆದುಕೊಳ್ಳುವಂತಾಯಿತು” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ..? ಪರ್ಯಾಯ ರಾಜಕಾರಣ ಹೊಸ ಬರವಸೆ ಮೂಡಿಸಿದ ಜನ ದನಿ ರ್ಯಾಲಿ
“ಕಳೆದ ಒಂದು ತಿಂಗಳಲ್ಲಿ ಮಂಜು ಬೀಳುತ್ತಿರುವ ಕಾರಣ ರಸ್ತೆ ಅಪಘಾತಗಳಲ್ಲಿ 50 ಜನ ಜೀವ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿ ನಡೆದ ಅಪಘಾತದಲ್ಲಿ 4 ಮಂದಿ ಯುವಕರು ಮೃತಪಟ್ಟಿದ್ದಾರೆ. ಶಿಡ್ಲಘಟ್ಟ ಕೆಡೆಯಿಂದ ಅತಿ ವೇಗದಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತವಾಗಿದೆ. ತಾಲೂಕಿನಲ್ಲಿ ಟಿಪ್ಪರ್ ಹಾವಳಿ ಹೆಚ್ಚಾಗಿದೆ. ಇದನ್ನು ನಾನು ಶಾಸಕನಾದಾಗಿನಿಂದ ವಿರೋಧಿಸುತ್ತ ಬಂದಿದ್ದೇನೆ” ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡರು, ಗ್ರಾಮದ ಮುಖಂಡರು ಮತ್ತು ಇತರರು ಇದ್ದರು.





