ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರು ಶ್ರೀಮತಿ ಅಮೂಲ್ಯ ಅವರೊಂದಿಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದರು.
ಕೆಲಕಾಲ ಸಿದ್ದಗಂಗಾ ಸ್ವಾಮೀಜಿ ಅವರೊಂದಿಗೆ ಚುನಾವಣಾ ವಿಷಯವಾಗಿ ಚರ್ಚಿಸಿ ಮಾರ್ಗದರ್ಶನ ಪಡೆದರು. ಕಿರಿಯ ವಯಸ್ಸಿಗೆ ಅತಿ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದೀರಿ. ಎಲ್ಲರ ಸಲಹೆ ಸೂಚನೆಗಳನ್ನು ಸ್ವೀಕರಿಸಬೇಕು. ಭವಿಷ್ಯದ ಯುವ ನಾಯಕನಾಗಿ ಬೆಳೆಯುವ ಸಾಮರ್ಥ್ಯ ನಿಮ್ಮಲ್ಲಿದೆ. ಎಲ್ಲರ ಕಷ್ಟ ಕಾರ್ಪಣ್ಯಗಳಿಗೆ ಸಂತೈಸುವ ಮದ್ದು ನೀವಾಗಬೇಕು. ಭವಿಷ್ಯದಲ್ಲಿ ಉನ್ನತ ಹುದ್ದೆ ಹಾಗೂ ಅವಕಾಶಗಳು ಸಿದ್ದಿಯಾಗಲಿ ಎಂದು ಶ್ರೀಗಳು ಬೆನ್ನು ತಟ್ಟಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗ ಶ್ರೀಗಳು ಶಶಿಹುಲಿ ಕುಂಟೆ ಮಠ್ ಅವರನ್ನು ಶಾಲು ಹೂದಿಸಿ ಸನ್ಮಾನಿಸಿ ಗೌರವಿಸಿದರು. ಇದಕ್ಕೂ ಮುನ್ನ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆಯಲ್ಲಿ ಶಶಿಹುಲಿ ಕುಂಟೆಮಠ್ ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಡಾ. ದರ್ಶನ್ ಕೆ. ಎಲ್ ಬೆಂಬಲ ವ್ಯಕ್ತಪಡಿಸಿದರು.
ಮಹಾಸಭಾ ಪ್ರಧಾನ ಕಾರ್ಯದರ್ಶಿ ಮನು ಕೊಪ್ಪ, ನಿರ್ದೇಶಕರಾದ ಮಲ್ಲಿಕಾರ್ಜುನ್, ನಾಗರ್ಜುನ್, ಕೆಪಿವೈಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಜೆ, ಗಿರಿ ರಾಮಯ್ಯ, ಜೈ ಶಂಕರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ವೀರಶೈವ ಲಿಂಗಾಯತ ಮುಖಂಡರು ಉಪಸ್ಥಿತರಿದ್ದರು.

ಇಂದಿನಿಂದ ತುಮಕೂರು ಜಿಲ್ಲಾ ಪ್ರವಾಸ ಹಮ್ಮಿಕೊಳ್ಳಲಿದ್ದೇನೆ
ಸ್ವಾಮೀಜಿಗಳ ಭೇಟಿ ಬಳಿಕ ಶಶಿ ಹುಲಿಕುಂಟೆ ಮಠ್ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಕೆಟ್ ಘೋಷಣೆಯಾದ ಬಳಿಕ ಸಿದ್ದಗಂಗಾ ಮಠಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ಶಿವಕುಮಾರಸ್ವಾಮೀಜಿ ಗದ್ದುಗೆ ಪೂಜೆ ಸಲ್ಲಿಸಿ, ಸಿದ್ದಗಂಗಾ ಸ್ವಾಮೀಜಿ ಆಶೀರ್ವಾದ ಪಡೆದಿದ್ದೇನೆ. ತಾಲೂಕು ಮಟ್ಟ, ವಿಧಾನಸಭಾ ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಚುನಾವಣಾ ಪೂರ್ವ ಭಾವಿ ಚಟುವಟಿಕೆಗಳು ಶುರುವಾಗಿವೆ. ಇದಕ್ಕೆ ಶಿಕ್ಷಕರು, ಪಧವೀದರರು ಬೆಂಬಲವಾಗಿ ನಿಂತಿದ್ದಾರೆ. ಐದು ಜಿಲ್ಲೆಯಿಂದ 1 ಲಕ್ಷದ 76 ಸಾವಿರ ಮತದಾರ ಪದವೀಧರರ ನೋಂದಣಿಯಾಗಿದೆ. ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 49 ಸಾವಿರಕ್ಕೂ ಅಧಿಕ ನೋಂದಣಿಯಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕರು ಸೇರಿದಂತೆ ನನಗೆ ಬೆನ್ನೆಲುಬಾಗಿ ನಿಂತಿರುವವರು ನನ್ನೊಂದಿಗೆ ಮಠಕ್ಕೆ ಬಂದಿದ್ದಾರೆ ಅವರೆಲ್ಲರಿಗೂ ನಾನು ಆಭಾರಿ ಎಂದರು.





