ಚಿಂತಾಮಣಿ : ತಾಲ್ಲೂಕಿನ ನೆಕ್ಕುಂದಿ ಪೇಟೆ ಕೆರೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಹಗಲು-ರಾತ್ರಿ ಮಣ್ಣು ಸಾಗಾಟ ಮಾಡಲಾಗುತ್ತಿದೆ ಇದರಿಂದ ಕೆರೆ ಸ್ವರೂಪ ನಾಶವಾಗುತ್ತಿದೆ.ಅಂತರ್ಜಲ ಮಟ್ಟ ಕುಸಿಯುತ್ತಿದೆ.
ತಾಲ್ಲೂಕಿನ ಕೋನಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೆಕ್ಕುಂದಿಪೇಟೆ ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಜೆಸಿಬಿ ಮತ್ತು ಟ್ರ್ಯಾಕ್ಟರ್ ಮೂಲಕ ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗುತ್ತಿದೆ.ಇದರಿಂದ ಕೆರೆ ಒಡ್ಡು ಮತ್ತು ತಳಭಾಗಕ್ಕೆ ಹಾನಿಯಾಗುತ್ತಿದ್ದು ಸಾರ್ವಜನಿಕ ಆಸ್ತಿಗೆ ಧಕ್ಕೆ ಉಂಟಾಗುತ್ತಿದೆ.
ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವ ಆಳವು ವೈಜ್ಞಾನಿಕ ಮಿತಿಯನ್ನು ಮೀರಿದೆ ಇದರಿಂದ ಕೆರೆ ನೈಸರ್ಗಿಕ ಜಲಮೂಲ ನಾಶವಾಗುತ್ತಿದೆ ಮತ್ತು ಸುತ್ತಮುತ್ತಲಿನ ರೈತರ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಇದು ಪರಿಸರಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಕಂದಾಯ ಇಲಾಖೆ ನಿಯಮಗಳ ಪ್ರಕಾರ ಕೆರೆಗಳಲ್ಲಿ 3 ರಿಂದ 4 ಅಡಿಗಿಂತಲೂ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ ಸರ್ಕಾರದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಪಡೆಯದೆ ಮಣ್ಣು ತೆಗೆಯುವಂತಿಲ್ಲ ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸುವಂತಿಲ್ಲ ಇಷ್ಟೆಲ್ಲ ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ದಂಧೆ ನಡೆಯುತ್ತಿದೆ.
ನೆಕ್ಕುಂದಿ ಪೇಟೆಯ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಎತ್ತುತ್ತಿರುವ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಹೋದ ಮಾಧ್ಯಮದವರ ಮೇಲೆ ಕೆಲವರು ಗುಂಡಾಗಿರಿ ತೋರಿಸಿ ನಾವು ಅನುಮತಿ ಪಡೆದು ಮಣ್ಣು ತೆಗೆಯುತ್ತಿದ್ದೇವೆ ನೀವು ಯಾರು ನಮಗೆ ಪ್ರಶ್ನೆ ಮಾಡುವುದಕ್ಕೆ ಎಂದು ಅವಾಜ್ ಹಾಕಿದ್ದಾರೆ ಕೂಡಲೇ ಮಾಧ್ಯಮದವರು ತಾಲೂಕು ದಂಡಾಧಿಕಾರಿಗಳಿಗೆತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಪೊಲೀಸ್ ಇಲಾಖೆಗೆ ಮಾಹಿತಿ ಮುಟ್ಟಿಸಿದ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಜೆಸಿಬಿ ಹಾಗೂ ಎರಡು ಟಿಪ್ಪರ್ ಗಳು ಅಲ್ಲಿಂದ ನಾಪತ್ತೆಯಾಗಿವೆ,ಮಣ್ಣು ತೆಗೆಯುತ್ತಿದ್ದವರನ್ನು ಪೋಲೀಸರು ನಿಮ್ಮ ಬಳಿ ಕೆರೆಯಲ್ಲಿ ಮಣ್ಣು ತೆಗೆಯಲು ಅನುಮತಿ ಪತ್ರವಿದ್ದರೆ ತೋರಿಸಿ ಎಂದು ಪ್ರಶ್ನಿಸಿದಾಗ ಅವರ ಬಳಿ ಅನುಮತಿ ಪತ್ರವೇ ಇರಲಿಲ್ಲ.
ಇದನ್ನು ಓದಿದ್ದೀರಾ..? ಹೋಬಳಿವಾರು ಸಭೆ ಮಾಡಿ ಸಮಸ್ಯೆಗಳು ಇದ್ದರೆ ಪರಿಹಾರಕ್ಕೆ ಕ್ರಮ: ಅಧ್ಯಕ್ಷ ವಿ.ಎಂ ಮುನಿಯಪ್ಪ
ನಂತರ ಪೊಲೀಸರು ಮೊದಲು ಅನುಮತಿ ಪಡೆದು ಕೆರೆಯಿಂದ ಮಣ್ಣು ತೆಗೆದುಕೊಳ್ಳಬಹುದು ಅನುಮತಿ ಇಲ್ಲದೆ ಕೆರೆಯಿಂದ ಮಣ್ಣು ತೆಗೆದರೆ ಅದು ಕಾನೂನು ಉಲ್ಲಂಘನೆ ಆಗುತ್ತದೆ ಎಂದು ಎಚ್ಚರಿಕೆ ನೀಡಿ ವಾಪಾಸಾದರು.





