ನಾಲ್ಕು ವರ್ಷದ ಪುಟ್ಟ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದಾರೆ.
ಪ್ರಕರಣ ಮತ್ತು ಪೊಲೀಸರ ಧೋರಣೆ ಕುರಿತು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಯಿ, “ಚಕೋಲೇಟ್ ತರಲು ಅಂಗಡಿಗೆ ತೆರಳಿದ್ದ ಮಗುವಿನ ಮೇಲೆ ಅತ್ಯಾಚಾರ ಎಸಗಲು 45 ವರ್ಷದ ಆರೋಪಿ ಯತ್ನಿಸಿದ್ದಾನೆ. ಆರೋಪಿ ವಿರುದ್ಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಆತನ ವಿರುದ್ಧ ಕ್ರಮ ಕೈಗೊಳ್ಳದೆ ಆತನನ್ನು ಬಿಟ್ಟು ಕಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಆರೋಪಿ ನೀಡಿದ ಹಣದ ಆಮಿಷಕ್ಕೆ ಒಳಗಾಗಿ ಪೊಲೀಸರು ಈ ರೀತಿ ಮಾಡಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸಿ, ಕ್ರಮ ಕೈಗೊಳ್ಳಬೇಕು. ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು” ಎಂದು ಎಂದು ಆಗ್ರಹಿಸಿದ್ದಾರೆ.
“ಆರೋಪಿ ರಾಜಾರೋಷವಾಗಿ ನಮ್ಮ ಮನೆಯ ಎದುರೇ ತಿರುಗಾಡುತ್ತಿದ್ದಾನೆ. ಬೆದರಿಕೆ ಹಾಕುತ್ತಿದ್ದಾನೆ. ನಮಗೆ ರಕ್ಷಣೆ ಬೇಕು. ಪೊಲೀಸ್ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕು” ಎಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿ ಬಳಿಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
“ದಿಬ್ಬೂರಹಳ್ಳಿ ಠಾಣೆಯ ಪಿಎಸ್‌ಐ ತಮ್ಮ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ. ಆರೋಪಿಗಳ ಪರ ನಿಂತು, ಸಂತ್ರಸ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಕೆ ನಡೆಸಬೇಕು. ಆರೋಪಿಯನ್ನು ಬಂಧಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎಸ್ ಅರುಣ್‌ಕುಮಾರ್ ಆಗ್ರಹಿಸಿದ್ದಾರೆ.




