ಚಿಕ್ಕಬಳ್ಳಾಪುರ ನಗರಸಭೆಯ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಗುತ್ತಿಗೆದಾರನಿಗೆ ಬಿಲ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟು ನಗರಸಭೆ ಎಂಜಿನಿಯರ್ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ನಗರಸಭೆ ಅಧಿಕಾರಿಗಳ ಲಂಚಾವತಾರ ಇದೀಗ ಬಹಿರಂಗವಾಗಿದ್ದು, ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಹಲವು ದಿನಗಳಿಂದ ನಗರಸಭೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಇತ್ತು. ಆದರೆ ಅದು ಬಹಿರಂಗವಾಗಿರಲಿಲ್ಲ. ಕಳೆದ ಬುಧವಾರ ಸಂಜೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ನಗರಸಭೆ ಅಧಿಕಾರಿಗಳ ಭ್ರಷ್ಟಾಚಾರ ಬಹಿರಂಗ ಮಾಡಿದ್ದು, ಲಂಚ ಸ್ವೀಕರಿಸುತ್ತಿದ್ದ ಎಂಜಿನಿಯರ್ ಅರುಣ್‌ರನ್ನು ಲಂಚದ ಸಮೇತ ವಶಕ್ಕೆ ಪಡೆಯುವಲ್ಲಿ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಗುತ್ತಿಗೆ ಕೆಲಸ ಮಾಡಿದ್ದ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆಯ ಹಣದ ಬಿಲ್ ಮಾಡಲು ಅರುಣ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಗುತ್ತಿಗೆದಾರನಿಗೆ 75 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡದೆ ಬಿಲ್ ಮಾಡೋದಿಲ್ಲ ಎಂದು ಪದೇ ಪದೇ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ರೋಸಿಹೋದ ಗುತ್ತಿಗೆದಾರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ಕಾರ್ಯದಿಂದ ವಿನಾಯಿತಿ ನೀಡಲು ಶಿಕ್ಷಕರ ಮನವಿ
ಗುತ್ತಿಗೆದಾರ ನೀಡಿದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ಎಂಜಿನಿಯರ್ ಅರುಣ್ ಬೇಡಿಕೆ ಇಟ್ಟಿದ್ದ 75 ಸಾವಿರದಲ್ಲಿ ಇಂದು 35 ಸಾವಿರ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಲಂಚದ ಹಣದ ಸಮೇತ ಎಂಜಿನಿಯರ್ ಅರುಣ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ವಿಚಾರಣೆ ಇನ್ನೂ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಸಿಗಬೇಕಿದೆ.





