ಚಿಕ್ಕಬಳ್ಳಾಪುರ : ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ದರಕಾಸ್ತು ಪೋಡಿ, ಪೌತಿ ಖಾತೆ, ಕಂದಾಯ ಗ್ರಾಮ ರಚನೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ರೈತರು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ಹೊರ ವಲಯದ ಚೊಕ್ಕಹಳ್ಳಿ ಬಳಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ಹಾಗೂ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಕಾರ್ಯಕ್ರಮಕ್ಕೆ ಚಾಲನೆ ನೀಡಿವುದರ ಜೊತೆಗೆ 25 ಸಾವಿರ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರಸ್ತುತದ ಸರ್ಕಾರ ಅಧಿಕಾರಕ್ಕೆ ಬಂದ 1000 ಸಾವಿರ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಕೈಗೊಂಡ ಕ್ರಮಗಳ ಫಲವಾಗಿ ಹತ್ತು ಹಲವು ಕ್ರಾಂತಿಕಾರಕ ಸುಧಾರಣೆಗಳಾಗಿದ್ದು ಅದರ ಪ್ರತಿಫಲವೇ ಇಂದು ರಾಜ್ಯದಲ್ಲಿ ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಮೂಲಕ ಜನರಿಗೆ ನೆಮ್ಮದಿ ನೀಡಲಾಗುತ್ತಿದೆ. ಸಾಗುವಳಿ ಜಮೀನುಗಳಿಗೆ ನಕಲಿ ಮಾಡಲು ಆಗದೇ ಇರುವ ವ್ಯವಸ್ಥೆಯಡಿ ಶಾಶ್ವತ ಹಕ್ಕು ಪತ್ರ ನೀಡಲಾಗಿದೆ,ಖುದ್ದು ತಹಸೀಲ್ದಾರರೇ ಫಲಾನುಭವಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿ ಸರ್ಕಾರಿ ಜಮೀನಿನ ಕ್ರಯಪತ್ರ ಮಾಡಿಕೊಟ್ಟು ಬಡ ಸಾಗುವಳಿದಾರರನ್ನು ಜಮೀನಿನ ಮಾಲೀಕರನ್ನಾಗಿ ಮಾಡುವ ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ. ತಮ್ಮ ಜಮೀನಿನ ಹಕ್ಕು ದಾಖಲೆಗಾಗಿ ಪದೇ ಪದೇ ತಾಲ್ಲೂಕು ಕಚೇರಿಗೆ ಅಲೆದು ಸೊರಗಿ ಸುಸ್ತಾಗಿದ್ದ ರೈತರ ಸಮಸ್ಯೆಗೆ ಅದೇ ತಾಲ್ಲೂಕು ಕಚೇರಿಯ ಮೂಲಕವೇ ಮುಕ್ತಿ ಕಾಣಿಸಿ ಅವರ ಮುಖದಲ್ಲಿ ಭೂ ಮಾಲೀಕತ್ವದ ಸಂತಸದ ಮಂದಹಾಸ ಮೂಡಿಸುವ ಕೆಲಸವನ್ನು ಕಂದಾಯ ಇಲಾಖೆ ಇಂದು ಮಾಡುತ್ತಿದೆ. ಕಂದಾಯ ಗ್ರಾಮಗಳ ಮೂಲಕ ಹಕ್ಕು ಪತ್ರ ಪಡೆದುಕೊಂಡವರು ಎಂದಿಗೂ ಯಾವ ಕಚೇರಿಗೂ ಮತ್ತೆ ಅಲೆಯಬಾರದು ಎಂಬ ದೃಷ್ಟಿಯಿಂದ ಅವರಿಗೆ ಸರ್ಕಾರವೇ ಮನೆಯ ಇ ಸ್ವತ್ತು ನೀಡಲಿದ್ದು ಅವರೆಂದೂ ತಮ್ಮ ಮಾಲೀಕತ್ವದ ವಿಚಾರದಲ್ಲಿ ಯಾವ ಇಲಾಖೆಯ ಕಡೆಗೂ ತಿರುಗಿ ನೋಡದೆ ನೆಮ್ಮದಿ ಕಾಣುವಂತ ಭೂ ಗ್ಯಾರಂಟಿ ಯೋಜನೆಯನ್ನು ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತದ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಒಟ್ಟು 49 ಲಕ್ಷ ಜಮೀನಿನ ಖಾತೆಗಳು ಮೃತಪಟ್ಟವರ ಹೆಸರಿನಲ್ಲಿದ್ದವು. ಮಾಲೀಕರು ಮೃತಪಟ್ಟರೂ ಅವರ ಹೆಸರಿನಲ್ಲೇ ಪಹಣಿಗಳು ಮುಂದುವರೆದು ಅವರ ವಾರಸುದಾರರಿಗೆ ಫವತಿ ಖಾತೆ ಮೂಲಕ ವರ್ಗಾವಣೆಯಾಗದೆ ಉಳಿದು ಬಿಟ್ಟಿದ್ದವು. ಇದನ್ನು ಮನಗಂಡು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಳೆದ 1000 ದಿನಗಳಲ್ಲಿ 18,50,000 ಫವತಿ ಖಾತೆಗಳನ್ನು ಮಾಡಿ ರೈತರ ಮನೆ ಬಾಗಿಲಿಗೇ ತಲುಪಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಭೂ ಸುರಕ್ಷಾ ಯೋಜನೆಯಡಿ ಈ ವರೆಗೆ ರಾಜ್ಯ ರಾಜ್ಯದಲ್ಲಿ 71 ಕೋಟಿ ಪುಟದಷ್ಟು ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಜೊತೆಗೆ ಡಿಜಿಟಲೀಕರಣಗೊಳಿಸಿ ಜನರು ಕಚೇರಿಗೆ ಅಲೆಯದೆ ಬೆರಳ ತುದಿಯಲ್ಲೇ ಆನ್ ಲೈನ್ ಮೂಲಕ ಕಂದಾಯ ದಾಖಲೆಗಳನ್ನು ಪಡೆದುಕೊಳ್ಳುವ ಮಹತ್ತರ ಸುಧಾರಣೆಯನ್ನು ತರಲಾಗಿದೆ. ಇದೊಂದು ಮೌನ ಕ್ರಾಂತಿಯಾಗಿ ಪರಿವರ್ತನೆಯಾಗಿ ಜನರು ದಾಖಲೆಗಳನ್ನು ಪಡೆಯುತ್ತಿರುವುದು ಸಾರ್ಥಕ ಭಾವನೆ ಮೂಡಿಸಿದೆ ಎಂದು ತಿಳಿಸಿದರು.
ಪಹಣಿ ಸ್ಕೆಚ್ ಕಾಪಿ EC, MR ಹಾಗೂ ಆಕಾರ್ ಬಂದ್ ದಾಖಲೆಗಳನ್ನು ಪ್ರಸ್ತುತ ಬೇರೆ ಬೇರೆ ಕಚೇರಿಗಳನ್ನು ಸಂಪರ್ಕಿಸಿ ಪಡೆಯಬೇಕಾಗಿದೆ. ಈ ವ್ಯವಸ್ಥೆಗೆ ಇತೀಶ್ರೀ ಹಾಡಿ ಈ ಎಲ್ಲಾ ದಾಖಲೆಗಳನ್ನು ಆನ್ ಲೈನ್ ಮೂಲಕ ಒಂದೇ ಕಡೆ ಅಥವಾ ಒಂದೇ ಕಚೇರಿಯಲ್ಲಿ ಲಭ್ಯವಾಗುವ ರೀತಿಯಲ್ಲಿ ಹಲವು ಸುಧಾರಣೆಗಳನ್ನು ಇಲಾಖೆ ಈಗಾಗಲೇ ಕೈಗೊಳ್ಳುತ್ತಿದೆ. ಬರುವ ಆಯವ್ಯಯದ ನಂತರ ಜನರು ದೃಢೀಕೃತ ಪಹಣಿ, ಸ್ಕೆಚ್ ಕಾಪಿ, EC, MR ಹಾಗೂ ಆಕಾರ್ ಬಂದ್ ದಾಖಲೆಗಳನ್ನು ಆನ್ ಲೈನ್ ಮೂಲಕವೇ ಪಡೆಯುವ ಏಕ ವ್ಯವಸ್ಥೆ ತ್ವರಿತವಾಗಿ ಬರಲಿದೆ ಎಂದು ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು 3,000 ದರಕಾಸ್ತು ಪೋಡಿಗಳನ್ನು ಹಾಗೂ 2,000 ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ರೈತರಿಗೆ ವಿತರಿಸಿರುವುದು ಸಂತೋಷ ತಂದಿದೆ. ಮುಂದಿನ ವರ್ಷದಲ್ಲಿ 30 ಸಾವಿರ ದರಕಾಸ್ತು ಪೋಡಿಗಳನ್ನು, 59 ಸಾವಿರ ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ಜಿಲ್ಲಾಡಳಿತ ರೈತರಿಗೆ ವಿತರಿಸಲಿದೆ 16,500 ಫವತಿ ಖಾತೆಗಳು ಹಾಗೂ 3500 ಸಾಮಾಜಿಕ ಭದ್ರತೆಯ ಮಾಸಾಶನದ ಮಂಜೂರಾತಿ ಪತ್ರಗಳನ್ನು ಇಂದು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕಳೆದ ಎರಡೂ ಮುಕ್ಕಾಲು ವರ್ಷದಲ್ಲಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಕಂದಾಯ ಇಲಾಖೆ ಮಹತ್ತರ ಮತ್ತು ಕ್ರಾಂತಿಕಾರಕ ಬದಲಾವಣೆಗಳನ್ನು ಕಂಡಿದೆ. ದರಕಾಸ್ತು ಪೋಡಿ ಸಮಸ್ಯೆ, ಕಂದಾಯ ಗ್ರಾಮ ಸಮಸ್ಯೆ, ಪೌತಿ ಖಾತೆ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳೂ ಸೇರಿದಂತೆ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವಂತಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕೈಗೆತ್ತಿಕೊಂಡ ಕಂದಾಯ ಸೇವೆಗಳ ವಿಶೇಷ ಅಭಿಯಾನದ ಭಾಗವಾಗಿ ಇಂದು 25 ಸಾವಿರ ಫಲಾನುಭವಿಗಳಿಗೆ ಕಂದಾಯ ಸೇವೆಗಳ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಕಂದಾಯ ಗ್ರಾಮಗಳ 2 ಸಾವಿರ ಫಲಾನುಭವಿಗಳು, ಫವತಿ ಖಾತೆಯ 16,500, ದರಕಾಸ್ತು ಪೋಡಿಯ 3,500 ಹಾಗೂ ವಿಧವಾ ವೇತನ,ಸಂಧ್ಯಾ ಸುರಕ್ಷಾ ಸೇರಿದಂತೆ ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳಡಿ 3,500 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ ಕಂದಾಯ ಇಲಾಖೆಯ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲಿನ ಮತ್ತು ಐತಿಹಾಸಿಕ ಕಾರ್ಯಕ್ರಮ ಎಂದರು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಳಿಗೆಗಳನ್ನು ತೆರದು ಜನರಲ್ಲಿ ಜಾಗೃತಿ ಮೂಡಿಸಲಾಯಿತು ಬೃಹತ್ ವೇದಿಕೆಯಲ್ಲಿ ಫಲಾನುಭವಿಗಳನ್ನು ಕೂರಿಸಿ ಕಂದಾಯ ಸೇವೆಗಳ ಶಾಶ್ವತ ದಾಖಲೆಗಳನ್ನು ತಾಲ್ಲೂಕುವಾರು ವಿತರಿಸಿದ್ದು ವಿಶೇಷ ಗಮನ ಸೆಳೆಯಿತು. ದರಕಾಸ್ತು ಪೋಡಿ ಹಾಗೂ ಕಂದಾಯ ಗ್ರಾಮ ಹಕ್ಕುಪತ್ರಗಳ ವಿತರಣೆ ಕಾರ್ಯ ಪ್ರಕ್ರಿಯೆಯಲ್ಲಿ ಅಹರ್ನಿಶಿ ಶ್ರಮಿಸಿದ ಕಂದಾಯ ಇಲಾಖೆಯ 30 ಸಿಬ್ಬಂದಿಗೆ ಗೌರವಿಸಲಾಯಿತು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಜಮೀನು ನೀಡಿದ್ದ ರೈತರಿಗೆ ಬದಲಿ ಪರಿಹಾರವಾಗಿ ಜಮೀನು ನೀಡುವ ದಾಖಲೆಗಳನ್ನು ರೈತರಿಗೆ ವಿತರಿಸಲಾಯಿತು. ವಿವಿಧ ಯೋಜನೆಗಳಡಿ 25,000 ಫಲಾನುಭವಿಗಳು ಕಂದಾಯ ಸೇವೆಯ ದಾಖಲೆಗಳನ್ನು ಪಡೆಯುವ ಮೂಲಕ ಜಿಲ್ಲೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಬಹಳ ಅರ್ಥಪೂರ್ಣ ಕಾರ್ಯಕ್ರಮಕ್ಕೆ 25,000ಕ್ಕೂ ಹೆಚ್ಚು ಜನರು ಸಾಕ್ಷಿಯಾದರು. ಕಾರ್ಯಕ್ರಮ ಬಹಳ ಯೋಜಿತ ರೀತಿಯಲ್ಲಿ ಜರುಗಿದ್ದಕ್ಕೆ ಕಂದಾಯ ಸಚಿವರು ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ..? ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಡಾ.ಕೆ.ಎನ್ ಅನುರಾಧ ಅಧಿಕಾರ ಸ್ವೀಕಾರ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎನ್. ಸಂಪಂಗಿ, ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷ ಆಂಜಿನಪ್ಪ, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಗಮದ ಅಧ್ಯಕ್ಷ ಬಿ.ಜಿ. ಗಣೇಶ್, ಶಾಸಕರುಗಳಾದ, ಪ್ರದೀಪ್ ಈಶ್ವರ್, ಕೆ.ಹೆಚ್. ಪುಟ್ಟಸ್ವಾಮಿಗೌಡ, ಡಾ. ಹೆಚ್.ನರಸಿಂಹಯ್ಯ ವಿಜ್ಞಾನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್ ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ವೆಂಕಟರಾಜ, ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಾ.ಡಿ.ಹೆಚ್.ಅಶ್ವಿನ್, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್ ಗಳು, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು, ಸಾರ್ವಜನಿಕರು ಇದ್ದರು.




