ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅರಣ್ಯ ನೀತಿಗಳಿಂದ ಮಲೆನಾಡು ಪ್ರದೇಶದ ರೈತರು ಮತ್ತು ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕಾಡು ಪ್ರಾಣಿಗಳ ದಾಳಿಯಿಂದ ಜೀವಹಾನಿ ಸಂಭವಿಸುತ್ತಿದ್ದರೂ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್ ಆರೋಪಿಸಿದರು.
ಜಯಪುರದಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಜನಜಾಗೃತಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಡುಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ನಿಯಂತ್ರಣ ತಪ್ಪಿದ್ದು, ಆನೆ, ಕಾಡು ಕೋಣ, ಚಿರತೆಗಳ ದಾಳಿಯಿಂದ ರೈತರು ಹಾಗೂ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಂಗ, ನವಿಲು, ಕಾಡು ಹಂದಿಗಳಂತಹ ಪ್ರಾಣಿಗಳು ಬೆಳೆಗಳನ್ನು ನಾಶ ಮಾಡುತ್ತಿದ್ದು, ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇನ್ನೊಂದೆಡೆ ಅರಣ್ಯ ಹಾಗೂ ಕಂದಾಯ ಭೂಮಿಯಲ್ಲಿ ದಶಕಗಳಿಂದ ಸಾಗುವಳಿ ಮಾಡುತ್ತಿರುವ ಮತ್ತು ಮನೆಗಳನ್ನು ಕಟ್ಟಿಕೊಂಡಿರುವ ನಾಗರಿಕರನ್ನು ಒತ್ತುವರಿದಾರರು ಎಂದು ಗುರುತಿಸಿ, ಅರಣ್ಯ ಇಲಾಖೆ ಗುಪ್ತವಾಗಿ ದಾಖಲೆ ಸಂಗ್ರಹಿಸಿ ಕಾನೂನು ಕ್ರಮಕ್ಕೆ ಮುಂದಾಗುತ್ತಿರುವುದು ಗಂಭೀರ ವಿಷಯವಾಗಿದೆ ಎಂದರು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವು ಇದ್ದರೂ ಯಾವುದೇ ಚುನಾಯಿತ ಪ್ರತಿನಿಧಿಗಳು ಪರಿಣಾಮಕಾರಿ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿದೇಶಿ ಎನ್‌ಜಿಒಗಳ ಪ್ರಭಾವದಿಂದ ಸರ್ಕಾರಗಳು ಮಲೆನಾಡು ಪ್ರದೇಶವನ್ನು ಜನಶೂನ್ಯಗೊಳಿಸುವ ಹುನ್ನಾರ ನಡೆಸುತ್ತಿವೆ ಎಂಬ ಅನುಮಾನ ಕಾಡುತ್ತಿದೆ. ಜನರು ಸಂಘಟಿತರಾಗಿ ಹೋರಾಟ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಜಯಪುರ, ಬಾಳೆಹೊನ್ನೂರು, ಕೊಪ್ಪ ಸೇರಿದಂತೆ ಮಲೆನಾಡಿನ ಅನೇಕ ಪಟ್ಟಣಗಳು ಪಾಳುಬಿದ್ದ ಊರುಗಳಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ಆದ್ದರಿಂದ ಪಕ್ಷಾತೀತವಾಗಿ ಎಲ್ಲರೂ ಈ ಜನಜಾಗೃತಿ ಯಾತ್ರೆಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಹೊಸಳ್ಳಿ, ಮಲೆನಾಡಿನ ಗಂಭೀರ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಜನಜಾಗೃತಿ ಯಾತ್ರೆ ಆರಂಭಿಸಲಾಗಿದೆ ಎಂದರು. ಅರಣ್ಯ ಇಲಾಖೆ ಕ್ರಮಗಳು ಹಾಗೂ ಕಾಡು ಪ್ರಾಣಿಗಳಿಂದಾಗುತ್ತಿರುವ ಅನಾಹುತಗಳನ್ನು ವಿಡಿಯೋ ಮೂಲಕ ಪ್ರದರ್ಶಿಸಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಜನರು ರಾಜಕೀಯ ಭೇದ ಮರೆತು ಒಟ್ಟಾಗಿ ಬಲವಾದ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾರ್ಯಕರ್ತರು ಸ್ಪರ್ಧಿಸಬೇಕಾದ ಚುನಾವಣೆ; ಸಿ.ಟಿ ರವಿ ಸ್ವಯಂ ಘೋಷಿತ ಕುರಿಯಾಗಿದ್ದಾರೆ; ಎಚ್.ಎಚ್ ದೇವರಾಜ್
ಜನಜಾಗೃತಿ ಯಾತ್ರೆ ಹೇರೂರು, ಅತ್ತಿಕುಡಿಗೆ, ಹೆಗ್ಗಾರುಕುಡಿಗೆ, ಅಗಳಗಂಡಿ, ಗುಡ್ಡೇತೋಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿತು. ಹೆಗ್ಗಾರುಕುಡಿಗೆಯಲ್ಲಿ ಮುಖಂಡರಾದ ಅತ್ತಿಕುಳಿ ಸುಂದರೇಶ್ ಹಾಗೂ ಹಾಗಲಗಂಚಿ ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಶೃಂಗೇರಿ, ಸಂತೋಷ್ ಮೇಗೂರು, ಚೇತನ್ ಗುರುಪ್ರಸಾದ್ ಮೆಣಸಿನಹಾಡ್ಯ, ಸುಭಾಷ್ ಚಂದ್ರ ಕೊಳೆಗೋಡು, ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ, ಸದಸ್ಯ ಪ್ರವೀಣ್, ಮುಖಂಡ ಸುಧಾಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು





