ಶ್ರೀಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ನ.10ರಂದು ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಶತಮಾನಗಳಿಂದ ನಡೆದು ಬರುತ್ತಿರುವ ಸೂಫಿ ಪರಂಪರೆಯ ಧಾರ್ಮಿಕ ಆಚರಣೆ ರೊಟ್ಟಿ ಭಾಜಿ ಫಾತಿಹಾ(ಮಾಮಾ ಜಿಗ್ನಿ ಫಾತಿಹಾ)ಸಹಜ ನಡೆಯಲಿದೆ ಎಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.
ರೊಟ್ಟಿ ಭಾಜಿ ಧಾರ್ಮಿಕ ಆಚರಣೆ ಕಾರ್ಯಕ್ರಮ ಬಾಬಾ ಬುಡನ್‌ಗಿರಿ ದರ್ಗಾದಲ್ಲಿ ಶತಮಾನಗಳಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಪರಂಪರೆಯಾಗಿದೆ. ಮುಹಮ್ಮದನ್ ರಾಜಕುಮಾರಿಯಾದ ಮಾಮಾ ಜಿಗ್ನಿ ಮಾಸಾಹಿಬ ಅವರ ಸ್ಮರಣಾರ್ಥವಾಗಿ ಈ ಧಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅವರು ಆ ಕಾಲದಲ್ಲಿ ಫಕೀರ್‌ಗಳು ಮತ್ತು ಭಕ್ತರಿಗೆ ರೊಟ್ಟಿ ಹಾಗೂ ಭಾಜಿ ಹಂಚುವ ಶಾಂತಿಯುತ ಪರಂಪರೆ ಆರಂಭಿಸಿದ್ದು, ಅವರ ಶಾಂತಿ, ಐಕ್ಯತೆ ಮತ್ತು ಜ್ಞಾನದ ಸಂದೇಶ ಇಂದಿಗೂ ಎಲ್ಲ ಧರ್ಮಗಳ ಜನರಿಗೆ ಪ್ರೇರಣೆಯಾಗಿದೆ ಎಂದು ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.
ಈ ದರ್ಗಾ ಶತಮಾನಗಳಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಗೌರವಿಸುತ್ತಿರುವ ಶಾಂತಿಯ ತಾಣವಾಗಿದ್ದು, ಇತ್ತೀಚಿನ ಕೆಲವು ಚಟುವಟಿಕೆಗಳಿಂದಾಗಿ ದರ್ಗಾದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ. ಇದು ದರ್ಗಾದ ಭಕ್ತರ ಧಾರ್ಮಿಕ ನಂಬಿಕೆಗೆ ಕುಂದುಂಟು ಮಾಡಿದೆ. ಆದ್ದರಿಂದ ಶಾಂತಿಪ್ರಿಯ ನಾಗರಿಕರು, ಭಕ್ತರು ಮತ್ತು ಅಧಿಕಾರಿಗಳು ಶತಮಾನಗಳಿಂದ ನಡೆಯುತ್ತಿರುವ ಈ ಶಾಂತಿಯುತ ಫಾತಿಹಾ ಪರಂಪರೆಯನ್ನು ಬೆಂಬಲಿಸಬೇಕು. ದರ್ಗಾದ ಪವಿತ್ರತೆ ಮತ್ತು ಇತಿಹಾಸದ ಸತ್ಯವನ್ನು ಕಾಪಾಡಬೇಕು. ಹಾಗೆಯೇ, ಈ ದರ್ಗಾ ಅಧಿಕೃತವಾಗಿ ಮುಹಮ್ಮದನ್ ಇನ್‌ಸ್ಟಿಟ್ಯೂಟ್ ಎಂದು ಗುರುತಿಸಲ್ಪಟ್ಟಿದ್ದು, ಮುಜರಾಯಿ ಕೈಪಿಡಿಯ ಅಧ್ಯಾಯ 11ಪುಟ 571 ಹಾಗೂ ಸ್ಥಳಗಳ ಪೂಜಾ ವಿಧಾನ ಕಾಯ್ದೆ, 1991 (ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991) ಪ್ರಕಾರ ಇದರ ಧಾರ್ಮಿಕ ಸಂಪ್ರದಾಯ ಮತ್ತು ಸಂಸ್ಕೃತಿ ಕಾಪಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ; ಐವರು ವಿದ್ಯಾರ್ಥಿಗಳು ಗಂಭೀರ
ಫಾತಿಹಾ ಸಂಪೂರ್ಣ ಶಾಂತಿಯುತವಾಗಿ ನಡೆಯಲಿದ್ದು, ಇದರ ಅಂಗವಾಗಿ ಹಜ್ರತ್ ದಾದಾ ಹಯಾತ್ (ದಾದಾ ಪೀರ್) ಅವರ ಪಾದುಕೆ (ಖಡವೇ) ದರ್ಶನ, ಚಿಲ್ಲಾ ಮತ್ತು ಪೀಠದ ದರ್ಶನ, ಮಾಮಾ ಜಿಗ್ನಿ ಮಾಸಾಹಿಬ ಅವರ ಪವಿತ್ರ ಚಿಲ್ಲಾ ಮತ್ತು ಪೀಠದ ದರ್ಶನ, ಪವಿತ್ರ ಕಲಿಮಾ ತಯ್ಯಿಬ ಇರುವ ದ್ವಾರದ ದರ್ಶನ, ಗುಹೆಯ ಹೊರಗಿನ ಪವಿತ್ರ ಚೌಕಿ ಮತ್ತು ಅರೇಬಿಕ್ ಹಾಗೂ ಫರ್ಶಿಯನ್ ಭಾಷೆಯ ತಾವೀಜ್ ದರ್ಶನ ಮತ್ತು ಜಮಾಲುಲ್ಲಾ ಮಘ್ರಿಬಿ ಶಾ ಖಾದ್ರಿ (ಕಾಫಿ ಗೋರಿ) ಅವರ ದರ್ಶನ ನಡೆಯಲಿದೆ. ಫಾತಿಹಾ ನಂತರ ನಿಯಾಜ್ (ರೊಟ್ಟಿ-ಭಾಜಿ ಆಹಾರ ವಿತರಣೆ) ಮಾಡಲಾಗುತ್ತದೆ. ಭಕ್ತರು ಪ್ರೀತಿ ಮತ್ತು ಧಾರ್ಮಿಕ ಐಕ್ಯತೆಯೊಂದಿಗೆ ಈ ದರ್ಗಾದ ಸಂರಕ್ಷಣೆ ಹಾಗೂ ಪಾವಿತ್ರö್ಯತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಬೇಕೆಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ
ವಿನಂತಿಸಿದ್ದಾರೆ.





