ಚಿಕ್ಕಮಗಳೂರು l ಚಿಕ್ಕಮಗಳೂರು ಜಿಲ್ಲೆಯಲ್ಲೇ ಹೆಸರು ವಾಸಿಯಾಗಿರುವ ಬಿಂಡಿಗಾ ಶ್ರೀ ದೇವೀರಮ್ಮ ಜಾತ್ರೆ ಹಾಗೂ ದೀಪೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 19ರ ಬೆಳಿಗ್ಗೆ 6ರಿಂದ 20ರ ರಾತ್ರಿ 10 ಗಂಟೆಯವರೆಗೆ ಸಂಚಾರಿ ನಿಯಮಗಳ ಬದಲಾವಣೆಗೆ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಆದೇಶಿಸಿದ್ದಾರೆ.
ತರೀಕೆರೆ ತಾಲೂಕಿನಿಂದ ಚಿಕ್ಕಮಗಳೂರಿಗೆ ಬರುವ ಭಕ್ತಾದಿಗಳು ಮತ್ತು ಸ್ಥಳೀಯರನ್ನು ಹೊರತುಪಡಿಸಿ, ಇತರ ಎಲ್ಲಾ ವಾಹನಗಳು ಕಡ್ಡಾಯವಾಗಿ ಕಡೂರು ಮಾರ್ಗವಾಗಿ ಸಂಚರಿಸಬೇಕಾಗಿದೆ. ಹಾಗೆಯೇ, ಅಕ್ಟೋಬರ್ 19 ಮತ್ತು 20 ರಂದು ಚಿಕ್ಕಮಗಳೂರು-ಮಲ್ಲೇನಹಳ್ಳಿ ಮತ್ತು ತರೀಕೆರೆ-ಲಿಂಗದಹಳ್ಳಿ ಮಾರ್ಗದಲ್ಲಿ ಖಾಸಗಿ ಬಸ್‌ಗಳ ಸಂಚಾರವನ್ನು ಸಧ್ಯಕ್ಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅದೇಶಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅನಧಿಕೃತವಾಗಿ ಮಳಿಗೆ ನಿರ್ಮಾಣ: ತೆರವುಗೊಳಿಸದಂತೆ ಮಾಲೀಕರ ಪ್ರತಿಭಟನೆ
ಅನುಕೂಲಕ್ಕಾಗಿ ಮತ್ತು ಜನಸಂದಣಿ ನಿಯಂತ್ರಿಸಲು, ಅಕ್ಟೋಬರ್19 ರಂದು ಬೆಳಿಗ್ಗೆ 9ರಿಂದ ಸಂಜೆ 5 ರವರೆಗೆ ಮತ್ತು ಅಕ್ಟೋಬರ್20 ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 3 ರವರೆಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ, ಬಿಂದಿಗಾ ದೇವಿರಮ್ಮನ ಜಾತ್ರೋತ್ಸವಕ್ಕೆ ತರೀಕೆರೆ ಕಡೆಯಿಂದ ಬರುವ ಭಕ್ತರ ವಾಹನಗಳಿಗೆ ಕುಮಾರಗಿರಿಯಲ್ಲಿ ಹಾಗೂ ಚಿಕ್ಕಮಗಳೂರು ಕಡೆಯಿಂದ ಬರುವ ವಾಹನಗಳಿಗೆ ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿ ಮಾತ್ರ ಅವಕಾಶ ನೀಡಲಾಗಿದೆ.





