ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ವೈದ್ಯರ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ದೊರೆನಾಳು ಗ್ರಾಮದ ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾದ ಮೀನಾ ಮತ್ತು ನವೀನ್ ದಂಪತಿಗಳ ಮಗ ಮಾನ್ವಿತ್ ಮೃತಪಟ್ಟಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಮಗುವಿನ ತಾಯಿ ಮೀನಾ, “ಇತ್ತೀಚೆಗೆ ಮಗು ಮಾನ್ವಿತ್ ಆರೋಗ್ಯ ಹದಗೆಟ್ಟಿತ್ತು. ನವೆಂಬರ್ 1ರಂದು ತೀವ್ರ ಜ್ವರ ಕಾಣಿಸಿಕೊಂಡಿತ್ತು. ಮಗುವನ್ನು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾಕ್ಟರ್ ಮಂಜುನಾಥ್ ಸರಿಯಾದ ಚಿಕಿತ್ಸೆ ನೀಡುತ್ತಿರಲಿಲ್ಲ. ಚಿಕಿತ್ಸೆ ನೀಡಬೇಕೆಂದರೆ 1,000 ರೂ. ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು” ಎಂದು ಆರೋಪಿಸಿದ್ದಾರೆ.

“ಮಂಗಳವಾರ, ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದೆವು. ಆಸ್ಪತ್ರೆಯ ವೈದ್ಯ ಮಂಜುನಾಥ್, ‘ಊಟದ ಸಮಯಕ್ಕೆ ಬಂದಿದ್ದೀರಾ. ಯಾವಾಗ ಬರಬೇಕೆಂಬುದು ಗೊತ್ತಾಗಲ್ವ. ಊಟ ಮುಗಿಸಿ ಬಂದು ನೋಡುತ್ತೇನೆ. ಅಷ್ಟೊತ್ತಿಗೆ ಸತ್ತುಹೋಗುವುದಿಲ್ಲ’ ಎಂದು ಉಡಾಫೆಯ ಮಾತಿನೊಂದಿಗೆ ನಿಂದಿಸಿದರು” ಎಂದು ಮೀನಾ ವಿವರಿಸಿದ್ದಾರೆ.
ವೈದ್ಯರು ಊಟ ಮುಗಿಸಿ ಬರುವ ವೇಳೆಗೆ ಮಗು ಮೃತಪಟ್ಟಿತ್ತು. ಆಗ ಬಂದ ವೈದ್ಯರು ಮತ್ತು ಸಿಬ್ಬಂದಿಗಳು ಸಾವನಪ್ಪಿರುವ ಮಗುವಿಗೆ ಚಿಕಿತ್ಸೆ ಕೊಡುವ ನಾಟಕ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ದೊರನಾಳು ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಮಗುವಿನ ಮೃತದೇಹ ಪ್ರತಿಭಟನೆ ನಡೆಸಿದ್ದಾರೆ.ಪೋಷಕರ ಪ್ರತಿಭಟನೆಯಲ್ಲಿ ಮಾದಿಗ ಸಂಘ, ದಲಿತ ಸಂಘ, ಅಹಿಂದ ಸಂಘಟನೆಗಳು ಭಾಗವಹಿಸಿದ್ದು, ಮಗುವಿನ ಸವಿಗೆ ನ್ಯಾಯ ಕೊಡಿಸಬೇಕು. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಡಿಎಚ್ಓ, ಡಿವೈಎಸ್‌ಪಿ ಹಾಗೂ ತಾಲೂಕು ಆಡಳಿತಾಧಿಕಾರಿ ಕಾಂತರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪೋಷಕರೊಂದಿಗೆ ಮಾತನಾಡಿದ್ದಾರೆ. ವೈದ್ಯರ ವಿರುದ್ಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಪ್ರಾಣ ಬಿಟ್ಟೇವು, ಭೂಮಿ ಬಿಡಲ್ಲ: ದಲಿತ ನಿವಾಸಿಗಳ ಅಳಲು




