ಕರ್ನಾಟಕ ರಾಜ್ಯದಲ್ಲಿ ನಕ್ಸಲರು ಶರಣಾದಾಗ ನಕ್ಸಲ್ ಮುಕ್ತ ರಾಜ್ಯ ಎಂದು ಬಿರುದು ಪಡೆದಿತ್ತು. ಅದೇ ರೀತಿಯಲ್ಲಿ ನಕ್ಸಲರು ಶರಣಾದಾಗ ಪುನರ್ವಸತಿ ಪ್ಯಾಕೇಜ್ ಜೊತೆಗೆ ಮಲೆನಾಡು ಅಭಿವೃದ್ಧಿಯಾಗಬೇಕೆಂಬ ಸಿಎಂ ಬಳ್ಳಿ ನಕ್ಸಲರು ಬೇಡಿಕೆ ಇಟ್ಟಿದ್ದರು. ಆ ಬೇಡಿಕೆಯನ್ನು ರಾಜ್ಯ ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆಂದು ₹ 7 ಕೋಟಿ 12 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ.
2002ರಿಂದ ಸುಮಾರು 20 ವರ್ಷಗಳ ಕಾಲ ಕಾಫಿನಾಡಿನ ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ ಭಾಗಗಳಲ್ಲಿ ನಕ್ಸಲ್ ಚಟುವಟಿಕೆಗಳು ಉತ್ತುಂಗದಲ್ಲಿದ್ದವು. ಎ.ಎನ್.ಎಫ್. ಸಿಬ್ಬಂದಿ ಗನ್ ಹಿಡಿದು ಕಾಡಲ್ಲಿ ಹುಡುಕಾಡುವುದು, ಶಸ್ತ್ರಸಜ್ಜಿತ ಪೊಲೀಸರ ಕ್ಯಾಂಪ್‌ಗಳು ಸರ್ವೇ ಸಾಮಾನ್ಯವಾಗಿದ್ದವು. ನಕ್ಸಲರ ಹೋರಾಟದ ಉದ್ದೇಶ ಮಲೆನಾಡಿನ ಕುಗ್ರಾಮಗಳ ಅಭಿವೃದ್ಧಿಗೆ ಆಗಿದ್ದರೂ, ಆ ಸಮಯದಲ್ಲಿ ಅದನ್ನು ಅರಿಯದ ಸರ್ಕಾರಗಳು ಈಗ ನಕ್ಸಲರು ಶರಣಾದ ನಂತರ ಅಭಿವೃದ್ಧಿಗೆ ಮುಂದಾಗಿದೆ. ಈ ಹಣವನ್ನು ಕಾಡಂಚಿನ ಕುಗ್ರಾಮಗಳ ರಸ್ತೆ, ನೀರು, ವಿದ್ಯುತ್, ಕಾಲುಸಂಕ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಒದಗಿಸಲು ಬಳಸಲಾಗುವುದು ಅಂತ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಮಲೆನಾಡಿನ ಎಷ್ಟೋ ಗ್ರಾಮಗಳು ಮೂಲಭೂತ ಸೌಕರ್ಯವನ್ನು ನೋಡುವ ಸಮಯ ಈಗ ಬಂದಿದೆ. ಆದರೆ, ನಕ್ಸಲರು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದಾಗಲೇ ಸರ್ಕಾರಗಳು ಕಾಡಂಚಿನ ಕುಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದ್ದರೆ, ನಕ್ಸಲರು ಹಾಗೂ ಪೊಲೀಸರ ನಡುವಿನ ಸಂಘರ್ಷಕ್ಕೆ ಬ್ರೇಕ್ ಹಾಕಬಹುದಾಗಿತ್ತು. ನಕ್ಸಲರನ್ನು ಹುಡುಕಲು ಮತ್ತು ಸೆರೆ ಹಿಡಿಯಲು ಕೋಟ್ಯಾಂತರ ರೂಪಾಯಿ ವ್ಯಯ ಮಾಡಿದ್ದ ಸರ್ಕಾರಗಳು, ಅವರು ಮುಖ್ಯವಾಹಿನಿಗೆ ಬರುವಾಗಲೂ ಲಕ್ಷಾಂತರ ರೂಪಾಯಿ ಪ್ಯಾಕೇಜ್ ನೀಡಿದೆ. ಈಗ ಬಿಡುಗಡೆಯಾಗಿರುವ ₹ 7 ಕೋಟಿ 12 ಲಕ್ಷ ಹಣದಲ್ಲಿ ವಿವರವಾದ ಯೋಜನಾ ವರದಿ ತಯಾರಿಸಿ ಅಭಿವೃದ್ಧಿಗೆ ಮುಂದಾಗಿದೆ.
ಇದನ್ನೂ ಓದಿದ್ದೀರಾ?ಸಮಸಮಾಜವನ್ನು ಬಯಸದವರು ಸಮೀಕ್ಷೆ ವಿರೋಧಿಸುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ
10-20 ವರ್ಷಗಳ ಹಿಂದೆಯೇ ಸರ್ಕಾರಗಳು ಮಾಡಿದ್ದರೇ ಬಹುಶಃ ಮಲೆನಾಡಿನಲ್ಲಿ ನಕ್ಸಲಿಜಂ ಹುಟ್ಟುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಟ್ಟಾರೆಯಾಗಿ, ಮಲೆನಾಡಿನ ನಕ್ಸಲ್ ಪೀಡಿತ ಕುಗ್ರಾಮಗಳು ಹಾಗೂ ಕಾಡಂಚಿನ ಗ್ರಾಮಗಳಿಗೆ ಅಭಿವೃದ್ಧಿ ಭಾಗ್ಯ ಸಿಕ್ಕಿದ್ದು, 75 ವರ್ಷಗಳ ಬಳಿಕ ಅನೇಕ ಗ್ರಾಮಗಳು ರಸ್ತೆ, ಕಾಲುಸಂಕ, ಶುದ್ಧ ನೀರು, ಚರಂಡಿ, ಕರೆಂಟ್ ವ್ಯವಸ್ಥೆ ಹಾಗೂ ಇನ್ನಿತರ ಅಭಿವೃದ್ಧಿಗಳು ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.





